ADVERTISEMENT

ಸಂಗತ: ಕೃಷಿಯೊಡಲ ಸಾಂಗತ್ಯದ ಕಥನ

ನಗರಗಳಿಂದ ಮಲೆನಾಡಿನ ಹಳ್ಳಿಗಳತ್ತ ಸೋತು ಬರುತ್ತಿರುವ ಯುವವರ್ಗ ಮತ್ತು ವಲಸಿಗರಿಗೆ ದಿಕ್ಸೂಚಿಯಾಗಬಲ್ಲ ಕೃಷಿಸಂಪದವೊಂದನ್ನು ಹೊರತರುವ ಅಭಿಲಾಷೆ ಸದ್ಯದಲ್ಲೇ ಸಾಕಾರಗೊಳ್ಳಲಿದೆ

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 13 ಸೆಪ್ಟೆಂಬರ್ 2020, 19:31 IST
Last Updated 13 ಸೆಪ್ಟೆಂಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮನುಷ್ಯಜಗತ್ತು ಹಿಂದೆಂದೂ ಕಂಡರಿಯದ ವಿಲಕ್ಷಣ ಆಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ
ಹೊತ್ತಿದು. ಸಾವು-ನೋವು, ಬಡತನ-ಹಸಿವು, ನಿರುದ್ಯೋಗ-ಖಿನ್ನತೆಯಂತಹ ಪ್ರತ್ಯಕ್ಷ ಮತ್ತು ಪರೋಕ್ಷ ಸಂಕಟಗಳಿಂದ ಹೊರಬಂದು ಸಹಜ ಸ್ಥಿತಿಯತ್ತ ಹೊರಳಲು ಹವಣಿಸುತ್ತಿರುವ ಹೊತ್ತಿನಲ್ಲಿ ಹೊಸ ಸ್ವರೂಪದ ಸವಾಲುಗಳು ಎದ್ದುನಿಂತಿವೆ. ಮನುಕುಲದ ಮಹಾವಲಸೆಯು ಭಾರತದ ಸಾಂದರ್ಭಿಕ ಮನ್ವಂತರಕ್ಕೆ ಕಾರಣವಾದಂತಿದೆ.

ಯಾವುದೇ ಅನಿರೀಕ್ಷಿತ ಸಂಕಷ್ಟಗಳು ಎದುರಾದಾಗಲೆಲ್ಲಾ ದೇಶಕಾಲವನ್ನು ಮೀರಿ ಅವನ್ನು ಸಮಚಿತ್ತದಿಂದ ನಿಭಾಯಿಸಿರುವುದು ರೈತವರ್ಗ ಮತ್ತು ಗ್ರಾಮೀಣ ಪರಿಸರ ಅನ್ನುವುದನ್ನು ಇತಿಹಾಸ ಹೇಳುತ್ತದೆ. ತಾಳ್ವಿಕೆ ಸಾಮರ್ಥ್ಯ ಹಳ್ಳಿಗಳಲ್ಲಿಯೇ ಹೆಚ್ಚು. ಮಣ್ಣಿನಿಂದ ಬಂದವರೆಲ್ಲ ಮರಳಿ ಮಣ್ಣುಸೇರುವ ನಡುವಿನ ಅವಧಿಯಲ್ಲಿ ಮಣ್ಣಿನ ಸಾಂಗತ್ಯ ಬೇಕು. ಬೀಜವೊಂದು ಮಣ್ಣಲ್ಲಿ ಮಣ್ಣಾಗಿ ಮೇಲೆದ್ದು ಚಿಗುರಾಗಿ, ಹಸಿರಾಗುವ, ಫಲವೀಯುವ ಪ್ರಕ್ರಿಯೆಯು ಅನನ್ಯ.

ವರ್ತಮಾನದ ಸಂಕಟಗಳನ್ನು ಮೀರಿ ಜಗತ್ತು ಮರಳಿ ಅರಳಲೇ ಬೇಕು. ಅಷ್ಟೊತ್ತಿಗೆ ಉಂಟಾಗಬಹುದಾದ ಕಷ್ಟನಷ್ಟಗಳನ್ನೂ ತಾಳಿಕೊಳ್ಳಬೇಕು. ಜಾಗತಿಕವಾಗಿ ಕೃಷಿರಂಗವು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸಂಕಷ್ಟಗಳಿಗೆ ಲೆಕ್ಕವಿಲ್ಲ. ಕೃಷಿ ಬದುಕಿನಲ್ಲಿ ಕಾರ್ಮಿಕರ ಸಮಸ್ಯೆ, ಮಳೆಯ ಅನಿಶ್ಚಿತತೆಯಿಂದಾಗುವ ನೆರೆ-ಬರ, ದುಬಾರಿಯಾದ ಬೀಜ-ರಸಗೊಬ್ಬರಗಳು, ಬೆಳೆಗಳಿಗೆ ತಗಲುವ ನಾನಾ ರೋಗರುಜಿನಗಳು, ಕಾಡುಪ್ರಾಣಿಗಳ ಉಪಟಳ, ನೆಲದ ಕಾನೂನು-ಕಟ್ಟಲೆಗಳು...

ADVERTISEMENT

ಇಂತಹ ಬಿಕ್ಕಟ್ಟಿನ ಈ ಕಾಲಘಟ್ಟದಲ್ಲಿ ನಗರಗಳಿಂದ ಮಲೆನಾಡಿನ ಹಳ್ಳಿಗಳತ್ತ ಸೋತು ಬರುತ್ತಿರುವ ಯುವವರ್ಗ ಮತ್ತು ವಲಸಿಗರಿಗೆ ದಿಕ್ಸೂಚಿಯೂ ಮಾರ್ಗದರ್ಶಿಯೂ ಆಗಬಲ್ಲ ಕೃಷಿಸಂಪದವೊಂದನ್ನು ಹೊರತರುವ ಮಹತ್ವಾಕಾಂಕ್ಷೆಯನ್ನು ಕನಸಿದ್ದವರು ತೀರ್ಥಹಳ್ಳಿಯ ಸಂವೇದನಾಶೀಲ ತಹಶೀಲ್ದಾರ್ ಡಾ. ಶ್ರೀಪಾದ್‍ರವರು. ಇಲ್ಲಿನ ಹಿರಿಯರು ಸೇರಿ ‘ಕೃಷಿಯೊಡಲ ಕೂಟ’ವನ್ನು ರಚಿಸಿಕೊಂಡು ಆ ಸದಾಶಯವನ್ನು ಕೃತಿಗಿಳಿಸಲು ಹೊರಟಾಗಿದೆ. ಮಲೆನಾಡಿನ ಐವತ್ತು ಕೃಷಿ ಸಾಧಕರ ಬೇಸಾಯ ಮಾದರಿಯನ್ನು ಪ್ರತ್ಯೇಕವಾಗಿ ಐವತ್ತು ಲೇಖಕರು ಸಮಗ್ರವಾಗಿ ಅಧ್ಯಯನ ಮಾಡಿ ಮಾಹಿತಿಗಳನ್ನು ಕಲೆಹಾಕಿ ಪ್ರಕಟಿಸುವ ಯೋಜನೆಯು ಕಾರ್ಯರೂಪ ಪಡೆದುಕೊಂಡಿದೆ. ಆ ಮೂಲಕ ಕೃಷಿ ಕ್ಷೇತ್ರದ ಮಾದರಿ ಹೆಜ್ಜೆಗುರುತುಗಳನ್ನೂ ಸಾಧ್ಯ ಮಾದರಿಯನ್ನು ಒಳಗೊಂಡ ಕೃತಿಯೊಂದು ನವೆಂಬರ್ ಒಂದರಂದು ಹೊರಬರುತ್ತಲಿದೆ.

ಕೃಷಿಯನ್ನೇ ಅವಲಂಬಿಸಿರುವ ಅದೆಷ್ಟೋ ರೈತರು ನಿತ್ಯಕಾಯಕದೊಟ್ಟಿಗೆ ಹೊಸ ಬಗೆಯ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ. ಸ್ವತಂತ್ರ, ಸ್ವಾವಲಂಬಿ, ಸಂತೃಪ್ತ ಬದುಕನ್ನು ಕಟ್ಟಿಕೊಂಡಿದ್ದಾರೆ. ತಮ್ಮ ಸೃಜನಶೀಲತೆಯಿಂದ ಸಾಂಪ್ರದಾಯಿಕ ಕೃಷಿಗೆ ಆಧುನಿಕತೆಯ ಸ್ಪರ್ಶ ನೀಡಿದವರಿದ್ದಾರೆ. ಸಾವಯವ, ನೈಸರ್ಗಿಕ ವಿಧಾನದೊಟ್ಟಿಗೆ ಪಾರಂಪರಿಕ ಕೃಷಿಯನ್ನೂ ಮಾಡುವವರಿದ್ದಾರೆ. ಸಾಂದ್ರಬೆಳೆ ಬೇಸಾಯಗಾರರು, ಸಸಿಮಡಿ-ನರ್ಸರಿ, ವಿಭಿನ್ನವಾದ ಹೂವು-ಹಣ್ಣು ಬೆಳೆಗಾರರು ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತವಾದ ಮತ್ತು ಯಾಂತ್ರಿಕ ವಿಧಾನಗಳ ಮೂಲಕ ನಿಯಂತ್ರಿತವೂ ತ್ವರಿತವೂ ಅಧಿಕ ಇಳುವರಿಯನ್ನೂ ಕಾಣಬಲ್ಲ ಕೃಷಿಸಾಧ್ಯತೆಗಳನ್ನು ಅಳವಡಿಸಿಕೊಂಡ ರೈತರಿದ್ದಾರೆ. ಮತ್ತೆ ಕೆಲವರು ಬಹುಬೆಳೆಯ ಮೂಲಕ ಸಣ್ಣ ಜಾಗದಲ್ಲಿ ನಿರಂತರ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ.

ಕಾಲಕಾಲಕ್ಕೆ ಸಂಶೋಧನೆಯ ಮೂಲಕ, ಕೃಷಿಗೆ ಪೂರಕವಾದ ತಮ್ಮ ಆವಿಷ್ಕಾರಗಳನ್ನು ಪೂರೈಸುತ್ತಾ ಬಂದವರು, ಸೂಕ್ತ ಮಾರುಕಟ್ಟೆಯ ಮೂಲಕ ಕೃಷಿಗೆ ಆತ್ಮಸ್ಥೈರ್ಯ ತುಂಬಿದವರು, ಕೃಷಿಕರಾಗಿ ಹೊಸ ಆಲೋಚನೆ–ಚಿಂತನೆಗಳ ಮೂಲಕ ಸುತ್ತಲ ಬೆಳೆಗಾರರಿಗೆ ಪ್ರೇರಣೆಯಾಗಿ, ಸಮಾಜಮುಖಿಯಾಗಿ ಸಾರ್ಥಕ ಬದುಕು ಕಂಡುಕೊಂಡವರು ನಮ್ಮ ನಡುವೆ ಇದ್ದಾರೆ.
ಅವರೀಗ ಯುವಪೀಳಿಗೆಗೆ ತಮ್ಮ ಅನುಭವ, ಪರಿಣತಿಯನ್ನು ಧಾರೆಯೆರೆಯಲು, ಆ ಮೂಲಕ ಹೊಸಬರಿಗೆ ದಾರಿ ತೋರಲು ಅನುವು ಮಾಡುವ ಶ್ಲಾಘನೀಯವೂ ಅನುಕರಣೀಯವೂ ಆದ ಕಾರ್ಯವಿದು. ಸಾಧಕ-ಬಾಧಕಗಳ ವಿಶ್ಲೇಷಣೆಯೊಟ್ಟಿಗೆ ಆಸಕ್ತರು ಸ್ಪಷ್ಟ ಅರಿವು ದೊರಕಿಸಿಕೊಳ್ಳುವ ಅಪೂರ್ವ ಅವಕಾಶವೂ ಹೌದು.

ಕೃಷಿಯೆಂದರೆ ಮೂಗುಮುರಿವ, ‘ಅದು ಕೈಲಾಗದವರ ಕಸುಬು’, ‘ಬೇಸಾಯ ಅಂದ್ರೆ ಮನೆಮಂದಿಯೆಲ್ಲ ಸಾಯ’ ಎಂಬೆಲ್ಲಾ ಗೊಡ್ಡು ಮನಃಸ್ಥಿತಿಗಳಿಗೆ ಸಡ್ಡು ಹೊಡೆದು ‘ಅದೊಂದು ಬುದ್ಧಿವಂತರ ಅಖಾಡ, ಏಕಕಾಲದಲ್ಲಿ ಬಹುವಿಧ ಜ್ಞಾನ-ಕೌಶಲ
ಗಳನ್ನು ಬೇಡುವ ಒಂದು ಕಲಾಪ್ರಕಾರ. ಅದು ಜಲನೆಲದ ನಾಡಿಮಿಡಿತ ಬಲ್ಲ ಸೂಕ್ಷ್ಮಮತಿಗಳ ಅನನ್ಯ ಜೀವನವಿಧಾನ, ಸ್ವತಂತ್ರ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಲೇ ತನ್ನಾಚೆಗೆ ಹೊರಜಗತ್ತಿನ ಹಸಿವು ನೀಗುವ, ಬೇಡಿಕೆ ಪೂರೈಸುವ ಪುಣ್ಯದ ಕಾಯಕ...’ ಅನ್ನುವಂತಹ ಮಾತುಗಳಿಗೆ ತಾವೇ ಅರ್ಥವಾಗಿ, ಭಾವವಾಗಿ, ಕೃತಿಯಾಗಿ ಬದುಕುತ್ತಿರುವ ಅನೇಕ ಕೃಷಿ ಸಾಧಕರ ಯಶೋಗಾಥೆಗಳು ಅಂಥವರ ಮಾರ್ಗದರ್ಶಿಯಾಗಿ ಕೈಹಿಡಿಯಲಿ. ಮಣ್ಣಿನೆಡೆಗೆ ಜೀವಬಂಧುಗಳನ್ನು ಹೆಚ್ಚೆಚ್ಚು ಸೆಳೆಯಲಿ ಎಂಬುದು ಹಾರೈಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.