ADVERTISEMENT

ಸಂಗತ: ಜೋಕೆ... ಕಳೆದೀತು ವಿನೋದದ ಹದ!

ಬದುಕಿನಲ್ಲಿ ಎದುರಾಗುವ ಉದ್ವೇಗ, ನೋವು, ನಿರಾಸೆಗಳನ್ನು ನಿರ್ವಹಿಸಲು ನಮ್ಮೊಳಗೊಬ್ಬ ವಿದೂಷಕನಿರಬೇಕು

ಬಿ.ಎಸ್.ಭಗವಾನ್
Published 31 ಮಾರ್ಚ್ 2023, 19:33 IST
Last Updated 31 ಮಾರ್ಚ್ 2023, 19:33 IST
.
.   

ಬೆಂಗಳೂರಿನ ಹನುಮಂತನಗರದಿಂದ ಶಿವಾಜಿನಗರಕ್ಕೆ ಬಸ್ಸಿನಲ್ಲಿ ಹೊರಟಿದ್ದೆ. ಗಣೇಶ ಭವನದ ಸ್ಟಾಪಿನಲ್ಲಿ ಬಸ್ಸೇರಿದ ನಡುವಯಸ್ಕರೊಬ್ಬರು ಸೀಟಿಗೆ ಹುಡುಕಾಡಿದರು. ‘ಬಸ್ಸು ಅರ್ಧ ಖಾಲಿ, ಎಲ್ಲಾದ್ರು ಕುಳಿತುಕೊಳ್ಳಿ ಸಾರ್’ ಅಂತ ಕಂಡಕ್ಟರ್ ಹೇಳಿದಾಗಲೂ ಅವರ ಧಾವಂತ ಮುಂದುವರಿದಿತ್ತು. ‘ಏನಿಲ್ಲ, ನಿಂತರೂ ಸರಿ, ಮಿಕ್ಸರ್ ಪಕ್ಕ ಬೇಡ ಅಂತ’ ಎಂದು ಅವರು ಒಗಟು ಒಡೆದಿದ್ದರು. ಅವರ ನಿಘಂಟಿನಲ್ಲಿ ‘ಮಿಕ್ಸರ್’ ಅಂದರೆ ಎಲೆ ಅಡಿಕೆ ಜಗಿಯುವವರು! ಇಡೀ ಬಸ್ಸು ಗೊಳ್ಳೆನ್ನಲು ಇದಕ್ಕಿಂತ ಬೇಕೇ?

ಹಾಸ್ಯವು ಮನುಷ್ಯ ಸಂಸ್ಕೃತಿಯ ಭಾಗ. ವಿನೋದರಹಿತವಾದ ಯಾವುದೇ ಸಂಸ್ಕೃತಿ ಜಗತ್ತಿನಲ್ಲಿಲ್ಲ.ಬದುಕಿನಲ್ಲಿ ಘಟಿಸಿದ ಪ್ರಸಂಗಗಳು- ಕಹಿಯೊ, ಸಿಹಿಯೊ ಮೆಲುಕು ಹಾಕಿದಾಗ ಒಟ್ಟಾರೆ ಉಕ್ಕುವುದು ನಗುವೇ ವಿನಾ ಬಿಕ್ಕುವ ಅಳುವಲ್ಲ. ವಿನೋದವು ಖಿನ್ನತೆ ನಿವಾರಕ, ಅಹಂಕಾರ ವಿಮೋಚಕ. ಮನುಷ್ಯನಾಗಿ ಇರುವುದೆಂದರೆ ಏನೆಂದು ಹಾಸ್ಯವು ತಿಳಿಸುತ್ತದೆ. ವಿನೋದವಿದ್ದಲ್ಲಿ ನಾಗರಿಕತೆ ಜೀವಂತವಿರುವುದು. ಬದುಕೆಂಬ ಎಂಜಿನ್ನಿಗೆ ಹಾಸ್ಯವು ಎರೆಯೆಣ್ಣೆಯಿದ್ದಂತೆ.

ನ್ಯೂಯಾರ್ಕಿನ ಹಿಂದಿನ ಶತಮಾನದ ಪ್ರಸಿದ್ಧ ಕಥೆಗಾರ ಈ.ಬಿ.ವೈಟ್ ‘ತಮಾಷೆ ಆನಂದಿಸಿ. ಅದರ ಪೂರ್ವಾಪರ ತಿಳಿಯುವ ಗೋಜು ಬೇಡ. ಅಧ್ಯಯನಾರ್ಥ ಕಪ್ಪೆಯ ಅಂಗ ವಿಚ್ಛೇದಿಸಿದರೆ ಅದರ ಸಾವು!’ ಎನ್ನುತ್ತಿದ್ದರು. ಚಟಾಕಿ ಹಳೆಯದಾದರೇನು, ಪುಟಿಯುವ ನಗು ನವನವೀನ. ಗೇಟು ದೂಡಿ ಒಳಬರುವ ಅತಿಥಿಯ ‘ನಾಯಿ ಕಚ್ಚುವುದಿಲ್ಲ ತಾನೆ?’ ಆರ್ತನಾದದಲ್ಲಿ ಪ್ರಾಮಾಣಿಕತೆಯಿದೆ. ಮನೆಯೊಡೆಯನ ‘ನಿನ್ನೆಯಷ್ಟೇ ಖರೀದಿಸಿದ್ದು. ನಾಯಿ ನಿಮ್ಮಷ್ಟೆ ನಮಗೂ ಪರಿಚಿತ’ ಎಂಬ ಸಮಜಾಯಿಷಿ
ಯಲ್ಲೂ ಅಷ್ಟೇ ಪಾರದರ್ಶಕತೆ ರಾರಾಜಿಸುತ್ತದೆ! ಜನಪದರು ಒಂದು ವರಸೆ ಪಸಂದಾಗಿಯೇ ನಕ್ಕಿದ್ದಾರೆ, ನಗಿಸಿದ್ದಾರೆ. ಒಂದೊಂದು ಗಾದೆಯೂ ಸನ್ನಡತೆಗೆ ನಡೆ ಹಾಸುವ ಪ್ರಖರ ವಿಡಂಬನೆ.

ADVERTISEMENT

ಒಂದು ವೃತ್ತಿನಾಟಕ ತಂಡ ಆ ಊರಿನಲ್ಲಿ ಬೀಡುಬಿಟ್ಟಿತ್ತು. ಟಿಕೆಟ್ ಮಾರಾಟ ಅಷ್ಟಕ್ಕಷ್ಟೆ. ಕಂಪನಿ ಮಾಲೀಕನದೇ ರಾಜನ ಪಾತ್ರ. ರಾಜ ತನ್ನ ದರ್ಬಾರಿನಲ್ಲಿ ಠೀವಿಯಿಂದ ‘ಯಾರಲ್ಲಿ?’ ಎನ್ನುವನು. ‘ಏನಪ್ಪಣೆ ಪ್ರಭು’ ಎನ್ನಬೇಕಿದ್ದ ಸೇವಕ ‘ಯಾರೂ ಇಲ್ಲ’ ಎಂದ. ನಾಟಕ ಹಿಡಿತ ಕಳೆದುಕೊಳ್ಳಲು ಇಷ್ಟು ಸಾಕಲ್ಲ. ಸೇವಕನ ಪಾತ್ರಧಾರಿಗೆ ಸಂಬಳ ಬಾಕಿಯಿದ್ದ ಕಾರಣ ಈ ಎಡವಟ್ಟು!

ಸಮಾರಂಭಗಳಿಗೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮುನ್ನ ಅವರಿಗೆ ಸಮಯ, ಸನ್ನಿವೇಶದ ಮಹತ್ವ ಕನಿಷ್ಠತಮವಾದರೂ ತಿಳಿದಿರಬೇಕು ತಾನೆ? ಒಂದು ವೃತ್ತಾಂತ ಸ್ವಾರಸ್ಯಕರವಾಗಿದೆ. ಫುಟ್‌ಬಾಲ್ ಪಂದ್ಯಕ್ಕೆ ಅತಿಥಿಯಾಗಿ ಪ್ರತಿಷ್ಠಿತ ಉದ್ಯಮಿಯೊಬ್ಬ
ರನ್ನು ಆಮಂತ್ರಿಸಲಾಗಿತ್ತು. ಅವರೋ ಪಂದ್ಯ ಮುಗಿಯುವ ಮುನ್ನವೇ ಮೈಕ್ ಹಿಡಿದರು. ‘ಒಂದು ಚೆಂಡಿಗೆ ಮುನ್ನೂರು ರೂಪಾಯಿ ಎಂದು ನನ್ನ ಪಿ.ಎ. ಹೇಳಿದರು. ನಾನು ಎಲ್ಲರಿಗೂ ಒಂದೊಂದು ಚೆಂಡು ಕೊಡಿಸುತ್ತೇನೆ. ದಯವಿಟ್ಟು ಜಗಳ ನಿಲ್ಲಿಸಿ. ಮುಂದೆಂದೂ ಹೀಗೆ ಬರೀ ಒಂದು ಚೆಂಡಿಗೆ ಪೈಪೋಟಿ ನಡೆಸಬೇಡಿ’ ಎಂದಿದ್ದೆ ಅವರು ಸೀದಾ ತಮ್ಮ ಕಾರಿನತ್ತ ದೌಡಾಯಿಸಿದ್ದರು. ಹುಸಿ, ಸುಳ್ಳು ಎಂದು ತಿಳಿದಿದ್ದರೂ ಹಿತಮಿತವಾಗಿ ‘ಪೆದ್ದರಾಗುವಲ್ಲಿ’, ‘ಪೆದ್ದರನ್ನಾಗಿಸುವಲ್ಲಿ’ ಖುಷಿಯಿದೆ. ಯಾರಾದರೂ ನಮ್ಮನ್ನು ನೋಡಿ ಮುಗುಳ್ನಕ್ಕರೆ ಅದನ್ನು ಹಿಂದಿರುಗಿಸದಿದ್ದರೆ ಅದಕ್ಕಿಂತ ಅನಾಗರಿಕತೆ ಮತ್ತೊಂದಿಲ್ಲ. ನಸುನಗುವಿಗೆ ಮರಳಿ ಉಡುಗೊರೆ ನಸುನಗುವೇ.

1940ರ ಸುಮಾರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಆಕ್ಸ್‌ಫರ್ಡ್ ಮೂಲದ ಪ್ರೊ. ಜೆ.ಸಿ.ರಾಲೊ ಪ್ರಿನ್ಸಿಪಾಲರಾಗಿದ್ದರು. ಅವರು ಶಿಷ್ಯವತ್ಸಲರೆಂದು ಖ್ಯಾತರಾಗಿದ್ದರು. ಅವರ ಪಾಂಡಿತ್ಯಪೂರ್ಣ ಇಂಗ್ಲಿಷ್ ಸಾಹಿತ್ಯ ಬೋಧನೆ, ಆಡಳಿತದಲ್ಲಿ ದಕ್ಷತೆ, ಶಿಸ್ತು ಮನೆಮಾತಾಗಿತ್ತು. ಶತಾಯುಷಿಯಾಗಿ ಬಾಳಿದ ಪ್ರೊ. ಎ.ಎನ್.ಮೂರ್ತಿರಾಯರು ರಾಲೊ ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿ, ನಂತರ ಅದೇ ಕಾಲೇಜಿನಲ್ಲಿ ಅವರ ಸಹೋದ್ಯೋಗಿಯೂ ಆದರು.

ರಾಯರ ಹಾಸ್ಯ ಅಮೋಘವಾಗಿತ್ತು. ಒಮ್ಮೆ ಒಂದು ವಿವಾಹ ಸಮಾರಂಭದಲ್ಲಿ ಶಿಷ್ಯರು ರಾಯರನ್ನು ಮುತ್ತಿ ‘ತಾವು ನಮಗೆ ಕಿಂಗ್‌ಲಿಯರ್ ಪಾಠ ಮಾಡುತ್ತಿದ್ದಿರಿ ಸಾರ್’ ಎಂದರು. ಅದಕ್ಕೆ ಅವರು ‘ಇದರಲ್ಲಿ ನನ್ನದೇನೂ ತಪ್ಪಿಲ್ಲ ಕಣ್ರಪ್ಪ. ರಾಲೊ ಸಾಹೇಬರ ಮಾತು ಕೇಳಲೇಬೇಕಲ್ಲ’ ಎಂದಿದ್ದರು! ರಾಯರ ಈ ಗಂಭೀರ ಹಾಸ್ಯ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ. ಒಂದೆಡೆ, ತಮ್ಮ ಪಾಠ ಮತ್ತೂ ಮಾಗಬೇಕೆಂಬ ಮುಕ್ತ ಮನಸ್ಸು. ಇನ್ನೊಂದೆಡೆ, ತಮಗಿಂತಲೂ ರಾಲೊ ಎತ್ತರದವರೆಂಬ ವಿನಯ.

ಹಾಸ್ಯನಟ ಚಾರ್ಲಿ ಚಾಪ್ಲಿನ್ ತಮ್ಮ ವಿಶಿಷ್ಟ ಆಂಗಿಕ ಭಾಷೆಯಿಂದಲೇ ಜಗತ್ಪ್ರಸಿದ್ಧರಾದ ಮೇರು ಕಲಾವಿದ. ಅಂಗಾಲುಗಳಲ್ಲಿನ ಹುಣ್ಣುಗಳು ಅವರಿಗೆ ವಿಪರೀತ ನೋವುಂಟು ಮಾಡುತ್ತಿದ್ದವು. ಹಾಗಾಗಿ ಅವರು ನಟನೆಗೆ ಅಡ್ಡಗಾಲಿನ ನಡಿಗೆಯನ್ನು ಆಯ್ಕೆ ಮಾಡಿಕೊಂಡರು. ತಮ್ಮ ಅಂಗಾಲಿನ ಹುಣ್ಣು ಮರೆತರು. ಇಡೀ ಜಗತ್ತು ‘ಹೊಟ್ಟೆ ಹುಣ್ಣಾಗುವಂತೆ’ ನಗಿಸಿದರು! ಇದಲ್ಲವೇ ಅನನ್ಯ ಹಾಸ್ಯ ಕೈಂಕರ್ಯದ ಅಸ್ಮಿತೆ?

ಸಿನಿಮಾ, ಟಿ.ವಿ. ಸೀರಿಯಲ್, ನಾಟಕವು ಶಿಷ್ಟಾಚಾರ ಅಲಕ್ಷಿಸಿ ಕೀಳುದರ್ಜೆಯ ಹಾಸ್ಯದೊಂದಿಗೆ ರಾಜಿಯಾಗಬಾರದು. ಕರತಾಡನದ ಹಂಬಲದಲ್ಲಿ ವಿನೋದದ ಹದ ಕಳೆಯಬಾರದು. ಪ್ರೇಕ್ಷಕರ ಕೇಕೆ, ಚಪ್ಪಾಳೆಯೇ ಮಂಡಿಸಿದ ಹಾಸ್ಯದ ಶ್ರೇಷ್ಠತೆಯ ಮಾನದಂಡವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.