ಹತ್ತಾರು ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕೆಲಸ ಮಾಡಿರುವ ನನಗೆ, ಅಲ್ಲಿ ಮೊದಲ ಬಾರಿಗೆ ಮತದಾನ ಮಾಡಲು ಬರುವವರ ಗಾಬರಿ ಕಂಡು ಮರುಕ ಹುಟ್ಟುತ್ತದೆ. ಮತದಾನ ನಡೆಯುವ ಕೊಠಡಿಯಲ್ಲಿ ಏನು ನಡೆಯುತ್ತದೆ, ಎಲ್ಲಿ ತಮ್ಮ ಗುರುತು ಸಾಬೀತುಪಡಿಸಬೇಕು, ಸಹಿ ಮಾಡಬೇಕೊ ಬೇಡವೊ, ವೋಟು ಮಾಡುವ ಕಂಪಾರ್ಟ್‍ಮೆಂಟ್‌ನಲ್ಲಿ ಏನಿರುತ್ತದೆ, ತನ್ನ ವೋಟು ಚಲಾವಣೆಯಾಗಿದೆಯೊ ಇಲ್ಲವೊ ತಿಳಿಯುವುದು ಹೇಗೆ... ಇಂಥವೇ ಹತ್ತೆಂಟು ಗೊಂದಲಗಳಿಂದ ಕೆಲವರು ಪರದಾಡುತ್ತಾರೆ.
ಹಿಂದಿನ ಬಾರಿ ಒಬ್ಬ ಹುಡುಗನಂತೂ ‘ವೋಟು ಹೇಗೆ ಮಾಡೋದು?’ ಅಂತ ಕೇಳಬೇಕೆ? ಯುವತಿಯೊಬ್ಬಳು ಸಹಿ ಮಾಡಿ, ಬೆರಳಿಗೆ ಇಂಕು ಹಾಕಿಸಿಕೊಂಡು ಸುಮ್ಮನೆ ಹೊರ ನಡೆದುಹೋಗಿದ್ದಳು. ಇನ್ನೊಬ್ಬನಂತೂ ತಾನು ವೋಟು ಹಾಕಬೇಕಾದ ವ್ಯಕ್ತಿಯ ಹೆಸರು ಹೇಳಿ ‘ಅವರಿಗೆ ಎಲ್ಲಿ ವೋಟು ಹಾಕುವುದು?’ ಎಂದು ಕೇಳಿಬಿಟ್ಟ. ಕೆಲವರು ಹೋಗಿ ಮತ ಒತ್ತುತ್ತಾರೆ. ಅವರ ಮತ ಚಲಾವಣೆ ಆಗದೇ ಇರಬಹುದು. ಅದರ ಅರಿವಿಲ್ಲದೆ ಹಾಗೇ ಬಂದುಬಿಡುತ್ತಾರೆ. ಇದರಲ್ಲಿ ಅವರ ತಪ್ಪಿಲ್ಲ. ಇದೆಲ್ಲವೂ ಅವರಿಗೆ ಹೊಸದು. ಅದನ್ನು ನಾವು ಸರಿಯಾಗಿ ಹೇಳಿಕೊಟ್ಟಿಲ್ಲ ಅಷ್ಟೆ.
ಹೊಸ ಮತದಾರ ಗಾಬರಿಯಿಂದ ಸುಮ್ಮನೆ ಯಾರಿಗೋ ಒತ್ತಿ, ಏನೋ ಮುಗಿಯಿತು ಅಂದುಕೊಂಡು ಹೋಗುವುದು ಎಂತಹ ನಷ್ಟದ ವಿಚಾರವಲ್ಲವೇ? ಮೊದಲ ವೋಟೆ ದಾರಿ ತಪ್ಪಬೇಕೆ? ಪ್ರತಿಬಾರಿ ಚುನಾವಣೆ ಬಂದಾಗಲೂ ಬಹಳಷ್ಟು ಹೊಸ ಮತದಾರರು ಪಟ್ಟಿಗೆ ಸೇರುತ್ತಾ ಹೋಗುತ್ತಾರೆ. ಈ ವರ್ಷ ಸುಮಾರು ಏಳು ಲಕ್ಷದಷ್ಟು ಯುವಕ-ಯುವತಿಯರು ಮೊದಲ ಬಾರಿ ಮತದಾನಕ್ಕೆ ಅಣಿಯಾಗಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಅವರ ವೋಟಿನ ಪರಿಣಾಮವೂ ಹೆಚ್ಚಿದೆ. ಅವರ ಜೀವನದ ಮೊದಲ ಮತದಾನವೇ ಹೀಗೆ ಗೊಂದಲದ್ದಾಗಬಾರದು ಅಲ್ಲವೇ?
ಅದಕ್ಕಾಗಿ, ಮೊದಲ ಬಾರಿ ಮತದಾನಕ್ಕೆ ಹೊರಡುವ ಯುವಜನರನ್ನು ಮತ ಹಾಕುವ ವಿಚಾರದಲ್ಲಿ ಶಿಕ್ಷಿತರನ್ನಾಗಿ ಮಾಡಬೇಕಿದೆ. ಶಾಲೆಗಳಲ್ಲಿ ಮಕ್ಕಳಿಗೆ ಅಣಕು ಚುನಾವಣೆಗಳನ್ನು ನಡೆಸಿ, ಶಾಲಾ ಸಂಸತ್ತು ರಚನೆ ಮಾಡಲಾಗುತ್ತದೆ. ಅದು ನಮ್ಮ ಚುನಾವಣಾ ವ್ಯವಸ್ಥೆ ಮತ್ತು ಸರ್ಕಾರ ರಚನಾ ಕ್ರಮವನ್ನು ತಿಳಿಸುವ ಒಂದು ಬೋಧನಾ ವಿಧಾನ. ಇದೇ ಕಾರ್ಯಕ್ಕೆ ನಾವು ಹಿಂದಿನ ಬಾರಿ ತಾಲ್ಲೂಕು ಚುನಾವಣಾ ವಿಭಾಗಕ್ಕೆ ‘ಇವಿಎಂ ಕೊಡಿ, ಶಾಲೆಯಲ್ಲಿ ಮಕ್ಕಳಿಗೆ ಚುನಾವಣೆ ಇದೆ. ಅವರಿಗೂ ಮತದಾನದ ಬಗ್ಗೆ ಅರಿವು ಬರುತ್ತದೆ’ ಎಂದು ಮನವಿ ಮಾಡಿದ್ದೆವು. ಅವರು ನಮ್ಮ ಮನವಿ ಪುರಸ್ಕರಿಸಲಿಲ್ಲ. ನಂತರ ನಾವು ಟ್ಯಾಬ್‌ನಲ್ಲಿ ಯಾವುದೋ ಒಂದು ಮತದಾನದ ಆ್ಯಪ್ ಹಾಕಿಕೊಂಡು ಅದರಲ್ಲಿ ಮಕ್ಕಳಿಂದ ಅಣಕು ಮತದಾನ ಮಾಡಿಸಿದ್ದೆವು. ತಿಳಿವಳಿಕೆ ನೀಡಲು ಸಹಕರಿಸಬೇಕಾದ ಅಧಿಕಾರಗಳು ಹೀಗೆ ಕೈಬಿಟ್ಟರೆ ಯುವ ಮತದಾರರನ್ನು ಮತದಾನಕ್ಕೆ ಅಣಿಗೊಳಿಸುವುದು ಹೇಗೆ?
ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸಲು ‘ಮತದಾರ ಸಾಕ್ಷರ ಸಂಘ’ವನ್ನು (ಇಎಲ್‌ಸಿ) ಪ್ರತೀ ಕಾಲೇಜಿನಲ್ಲಿ ಸ್ಥಾಪಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ. ‘ಪ್ರತಿಯೊಂದು ಮತವೂ ಪರಿಗಣಿಸಲ್ಪಡುವುದು’ ಮತ್ತು ‘ಯಾವುದೇ ಮತದಾರನು ಮತದಾನದಿಂದ ಹೊರಗೆ ಉಳಿಯಬಾರದು’ ಎಂಬ ಎರಡು ತತ್ವಗಳನ್ನು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲು ಸೂಚಿಸಲಾಗಿದೆ.
ಇ.ವಿ.ಎಂ. ತೋರಿಸಿ ಅದರ ಬಗ್ಗೆ ತಿಳಿಸಬೇಕು. ವೋಟು ಹಾಕುವುದು ಹೇಗೆ, ಹಾಕಿದ ವೋಟನ್ನು ವಿವಿ ಪ್ಯಾಟ್‌ನಲ್ಲಿ ದೃಢಪಡಿಸಿಕೊಳ್ಳುವುದು ಹೇಗೆ, ವಿವಿ ಪ್ಯಾಟ್ ಎಂದರೇನು, ಬ್ಯಾಲೆಟ್ ಯುನಿಟ್ ಎಂದರೇನು, ಕಂಟ್ರೋಲ್ ಯುನಿಟ್ ಯಾಕಾಗಿ ಇರುತ್ತದೆ, ಒಂದುವೇಳೆ ತನ್ನ ವೋಟನ್ನು ಯಾರೋ ಹಾಕಿ ಹೋದರೆ ತಾನೇನು ಮಾಡಬೇಕು, ಆಗ ಬಳಸಬೇಕಾದ ಟೆಂಡರ್ ವೋಟಿನ ಹಕ್ಕಿನ ಸ್ವರೂಪ ಏನು, ಚಾಲೆಂಜಿಂಗ್ ವೋಟು ಯಾವಾಗ ಬಳಸಬೇಕು, ಮತದಾನದ ಗೋಪ್ಯತೆ ಮುರಿದರೆ ಆಗುವ ಶಿಕ್ಷೆ ಏನು ಎಂಬಂತಹ ಅನೇಕ ವಿಚಾರಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಚುನಾವಣಾ ಆಯೋಗ ಸೂಚಿಸಿದೆ.
ಅಷ್ಟೇಅಲ್ಲದೆ ಮತದಾನದ ಹಕ್ಕನ್ನು ವಿಶ್ವಾಸದಿಂದ, ನೈತಿಕವಾಗಿ, ಆರಾಮದಾಯಕವಾಗಿ ಚಲಾಯಿಸುವ ರೀತಿಯಲ್ಲಿ ಅರ್ಥ ಮಾಡಿಸುವುದು ಮತ್ತು ಅವರ ಮೂಲಕ ಈ ವಿಚಾರವು ಸಮುದಾಯ ತಲುಪುವ ಉದ್ದೇಶವನ್ನು ಅದು ಹೊಂದಿದೆ.
ಹಳ್ಳಿ ಹಳ್ಳಿಗೂ ಹೋಗಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಕೂಡ ಆಯೋಗ ಹೇಳಿದೆ. ಆದರೆ ಆ ಕಾರ್ಯ ಹೆಚ್ಚಿನ ಬಾರಿ ಬರೀ ಫೋಟೊಕ್ಕೆ, ದಾಖಲೆಗೆ ಸೀಮಿತವಾದ ಉದಾಹರಣೆಗಳುಂಟು. ಮೊದಲ ಬಾರಿಗೆ ಮತದಾನ ಮಾಡಲು ಬರುವವರು ಮತಗಟ್ಟೆಯಲ್ಲಿ ಪರದಾಡುವುದನ್ನು ಗಮನಿಸಿದರೆ ಇದು ಸಾಬೀತಾಗುತ್ತದೆ. ಮತದಾರ ಸಾಕ್ಷರತಾ ಸಂಘವು ಇನ್ನಷ್ಟು ಪರಿಣಾಮಕಾರಿಯಾಗಬೇಕಾದ ಅಗತ್ಯವನ್ನು ಇದು ಹೇಳುತ್ತದೆ.
ಮೊದಲ ಬಾರಿ ಮತದಾನ ಮಾಡುವವರು ಇರಲಿ, ಎಷ್ಟೋ ಬಾರಿ ಮತದಾನ ಮಾಡಿದವರಿಗೂ ಮತದಾನ ಪ್ರಕ್ರಿಯೆಯ ಬಗ್ಗೆ ಅಷ್ಟೊಂದು ಜ್ಞಾನವಿಲ್ಲದಿರುವುದು ನಮ್ಮ ಗಮನಕ್ಕೆ ಬರುತ್ತಲೇ ಇರುತ್ತದೆ. ಬಂದ, ಯಂತ್ರದ ಬಟನ್ ಒತ್ತಿದ, ಹೋದ ಎಂದಾಗಬಾರದು. ಮತದಾರನಿಗೆ ಮತಗಟ್ಟೆಯಲ್ಲಿ ಕೆಲವು ಹಕ್ಕುಗಳಿವೆ. ಅಲ್ಲದೆ ಅವನು ಪಾಲಿಸಬೇಕಾದ ಕೆಲವು ಕರ್ತವ್ಯಗಳು ಕೂಡ ಇವೆ. ಹೇಗೆ ವರ್ತಿಸಬೇಕು, ಹೇಗೆ ವರ್ತಿಸಬಾರದು ಎಂಬುದಕ್ಕೆ ಸೂಚನೆಗಳಿವೆ. ಅವು ಮತದಾರನಿಗೆ ತಿಳಿಯಬೇಕು.
ತಪ್ಪದೇ ಮತದಾನ ಮಾಡಿ, ಮತ ಮಾರಿಕೊಳ್ಳಬೇಡಿ ಎನ್ನುವ ಜಾಗೃತಿಯ ಪ್ರಚಾರದ ಜೊತೆ ಜೊತೆಗೆ ಮತದಾನದ ಬಗ್ಗೆ ಮತದಾರನೊಬ್ಬ ಕನಿಷ್ಠ ತಿಳಿದಿರಲೇಬೇಕಾದ ವಿಚಾರಗಳ ಬಗ್ಗೆ ಅರಿವು ಉಂಟು ಮಾಡಬೇಕು. ಮತಗಟ್ಟೆ ಅಧಿಕಾರಿಗಳ ತಪ್ಪುಗಳನ್ನು ಪ್ರಶ್ನಿಸುವಂತೆ ಆಗಬೇಕು. ಏಕೆಂದರೆ ಮತದಾನ ಒಂದು ಹಕ್ಕು. ಆ ಹಕ್ಕಿಗೆ ಎಲ್ಲೂ ಲೋಪವಾಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.