ADVERTISEMENT

ಸಂಗತ | ‘ನರಭಕ್ಷಕ’ ಪಟ್ಟ ಕಳಚಿದಾಗ...

ಆಹಾರಕ್ಕಾಗಿ ಮನುಷ್ಯನ ಮೇಲೆ ಹುಲಿ ಆಕ್ರಮಣ ನಡೆಸುವುದು ಅಪರೂಪ

ಗುರುರಾಜ್ ಎಸ್.ದಾವಣಗೆರೆ
Published 20 ನವೆಂಬರ್ 2019, 20:01 IST
Last Updated 20 ನವೆಂಬರ್ 2019, 20:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಹೊಸ ಮಾರ್ಗಸೂಚಿಯ ಅನ್ವಯ, ದಾಳಿ ನಡೆಸಿ ಮನುಷ್ಯರನ್ನು ತಿನ್ನುವ ಹುಲಿಗಳನ್ನು ‘ನರಭಕ್ಷಕ’ ಎನ್ನುವಂತಿಲ್ಲ, ‘ಮಾನವನ ಜೀವಕ್ಕೆ ಅಪಾಯಕಾರಿ’ ಎನ್ನಬಹುದು. ಈ ಮೂಲಕ, ಹುಲಿಗೆ ಶತಮಾನಗಳಿಂದ ಅಂಟಿಕೊಂಡಿರುವ ಕೆಟ್ಟ ಹೆಸರನ್ನು ತೊಡೆದುಹಾಕಲು ಪ್ರಾಧಿಕಾರ ಮುಂದಾಗಿದೆ. ‘ನರಭಕ್ಷಕ’ ಎನ್ನದಿರುವುದು ಸರಿ, ಆದರೆ ‘ಅಪಾಯಕಾರಿ ಪ್ರಾಣಿ’ ಎಂದು ಗುರುತಿಸುವುದು ಹುಲಿಯನ್ನು ಇನ್ನಷ್ಟು ತೊಂದರೆಗೆ ಸಿಲುಕಿಸಬಹುದು ಎಂದು ಸಂರಕ್ಷಣಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಜನ-ಜಾನುವಾರುಗಳ ಮೇಲೆ ಆಕ್ರಮಣ ನಡೆಸುವ ಹುಲಿಯನ್ನು ಹಿಡಿಯಲು, ಅರಿವಳಿಕೆ ಪ್ರಯೋಗಿಸಲು ಇಲ್ಲವೇ ಕೊನೆಗಾಣಿಸಲು ಖಾಸಗಿ ಶೂಟರ್‌ಗಳ ಬದಲಾಗಿ ಅರಣ್ಯ ಇಲಾಖೆಯ ತಜ್ಞರನ್ನೇ ಬಳಸಿಕೊಳ್ಳಲು ಪ್ರಾಧಿಕಾರ ನಿರ್ಧರಿಸಿದೆ.

ಕಳೆದ ನವೆಂಬರ್‌ನಲ್ಲಿ ಮಹಾರಾಷ್ಟ್ರದ ಅರಣ್ಯದಂಚಿನ ಪ್ರದೇಶಗಳಿಗೆ ನುಗ್ಗಿ ಮನುಷ್ಯರನ್ನು ಸಾಯಿಸಿದೆ ಎಂದು ತಪ್ಪು ಮಾಹಿತಿ ಪಡೆದ ಅರಣ್ಯ ಇಲಾಖೆ, ‘ಅವನಿ’ ಎಂಬ ಹೆಣ್ಣು ಹುಲಿಯನ್ನು ಖಾಸಗಿ ಶೂಟರ್‌ಗಳ ಮೂಲಕ ನಿರ್ದಾಕ್ಷಿಣ್ಯವಾಗಿ ಸಾಯಿಸಿದಾಗ, ಇಲಾಖೆಯ ಅವಸರದ ಮತ್ತು ಬುದ್ಧಿಗೇಡಿ ಕೆಲಸಕ್ಕೆ ದೇಶದಾದ್ಯಂತ ತೀವ್ರ ಟೀಕೆ ವ್ಯಕ್ತವಾಗಿತ್ತು.

ADVERTISEMENT

ಅದನ್ನು ಗಂಭೀರವಾಗಿ ತೆಗೆದುಕೊಂಡ ಪ್ರಾಧಿಕಾರ, ಮನುಷ್ಯನೊಂದಿಗೆ ಸಂಘರ್ಷಕ್ಕಿಳಿಯುವ ಯಾವುದೇ ಪ್ರಾಣಿಯನ್ನು ಸೂಕ್ತ ಆಧಾರವಿಲ್ಲದೆ ಕೊಲ್ಲಬಾರದು, ಹುಲಿ ಸಂರಕ್ಷಿತ ಪ್ರದೇಶ ಹೊಂದಿರುವ ಎಲ್ಲ ರಾಜ್ಯಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದೆ. ಖಾಸಗಿ ಶೂಟರ್‌ಗಳನ್ನು ಬಳಸಿಕೊಂಡು ಇದುವರೆಗೆ ನಡೆಸಿರುವ ಎಲ್ಲ ಕಾರ್ಯಾಚರಣೆಗಳ ಸಮಗ್ರ ವರದಿಯನ್ನೂ ಕೇಳಿರುವ ಪ್ರಾಧಿಕಾರ, ವನ್ಯಪ್ರಾಣಿ ಅರಿವಳಿಕೆ ತಜ್ಞ ಅಥವಾ ಗುರಿಕಾರ ಎಂದು ವಿವಿಧ ವ್ಯಕ್ತಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಲಾಗಿರುವ ಪರವಾನಗಿಗಳ ಕುರಿತು ತನಿಖೆಗೆ ಆದೇಶಿಸಿದೆ. ಹಾಗೊಂದು ವೇಳೆ ವನ್ಯಪ್ರಾಣಿ- ಮಾನವ ಸಂಘರ್ಷದ ಸಂದರ್ಭದಲ್ಲಿ ಅಪಾಯಕಾರಿ ಪ್ರಾಣಿಗೆ ಅರಿವಳಿಕೆ ನೀಡಿ ಎಚ್ಚರ ತಪ್ಪಿಸಲು, ಹಿಡಿಯಲು ಇಲ್ಲವೇ ಉಪಟಳ ಮಿತಿಮೀರಿದಾಗ ಸಾಯಿಸಲು ಬೇಕಾದ ನುರಿತ ತಜ್ಞರು– ಗುರಿಕಾರರು ಆಯಾ ರಾಜ್ಯದ ಇಲಾಖೆಯಲ್ಲಿ ಇರದಿದ್ದರೆ, ಬೇರೊಂದು ರಾಜ್ಯದಿಂದ ಕರೆಸಿಕೊಳ್ಳಲು ಅವಕಾಶ ಕಲ್ಪಿಸಿರುವ ಖಾಸಗಿ ಸಹ
ಭಾಗಿತ್ವವನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಹುಲಿಯ ಆವಾಸವು ದಿನೇ ದಿನೇ ಸಂಕುಚಿತಗೊಂಡು, ಬಲಿಪ್ರಾಣಿಗಳ ಸಾಂದ್ರತೆ ಕ್ಷೀಣಿಸಿದಾಗ ಆಹಾರ ಅರಸಿ ಅಲೆಯುವ ಹುಲಿ, ಕಾಡಂಚಿನ ಹಳ್ಳಿಗಳ ದನದ ಕೊಟ್ಟಿಗೆಗಳಿಗೆ ನುಗ್ಗಿ ಜಾನುವಾರುಗಳನ್ನು ಹೊತ್ತೊಯ್ಯುತ್ತದೆ. ಮಾಹಿತಿಯ ಪ್ರಕಾರ, ಹುಲಿಗಳು ವರ್ಷವೊಂದಕ್ಕೆ ಕಾಡಂಚಿನ ಗ್ರಾಮಗಳ ಶೇ 12ರಷ್ಟು ಜಾನುವಾರುಗಳನ್ನು ಕೊಲ್ಲುತ್ತವೆ. ಸಹಜ ಬೇಟೆಯಾಡಿ ಹಸಿವು ನೀಗಿಸಿಕೊಳ್ಳಲು ಸಾಧ್ಯವಾಗದ ಮುದಿ ಅಥವಾ ಗಾಯಗೊಂಡ ಹುಲಿಗಳು ಈ ರೀತಿ ಮಾಡುತ್ತವೆ ಎನ್ನುವ ಮಾತಿದೆ. ಹೀಗೆ ಹುಲಿಗಳನ್ನು ಹಿಮ್ಮೆಟ್ಟಿಸುವ ಪ್ರಯಾಸದಲ್ಲಿ ಸಂಘರ್ಷಕ್ಕಿಳಿಯುವ ಮನುಷ್ಯನೂ ಆಕ್ರಮಣಕ್ಕೆ ತುತ್ತಾಗುತ್ತಾನೆ. ಆಹಾರಕ್ಕಾಗಿ ಮನುಷ್ಯನ ಮೇಲೆ ಹುಲಿ ಆಕ್ರಮಣ ನಡೆಸುವುದು ಕಡಿಮೆ. ಏಕೆಂದರೆ ಹುಲಿಯ ಆಹಾರ ಪಟ್ಟಿಯಲ್ಲಿ ಮನುಷ್ಯ ಇಲ್ಲವೇ ಇಲ್ಲ. ಅಲ್ಲೊಂದು ಇಲ್ಲೊಂದು ಅಪವಾದ ಇರಬಹುದಷ್ಟೆ.

ಹುಲಿ ಗಣತಿಯ ಪ್ರಕಾರ, ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿದೆ. ಅದೇ ರೀತಿ ಮಾನವ- ಪ್ರಾಣಿ ಸಂಘರ್ಷವೂ ಏರಿಕೆಯಾಗಿದೆ. ಮುದಿಯಾದ, ಗಾಯಗೊಂಡ ಮತ್ತು ಆಕ್ರಮಣಕಾರಿ ಹುಲಿಗಳನ್ನು ಇಡಲು ಸಾಕಷ್ಟು ಸಂಖ್ಯೆಯ ಪುನರ್ವಸತಿ ಕೇಂದ್ರಗಳಿಲ್ಲ, ಮೃಗಾಲಯಗಳಲ್ಲಿ ಜಾಗವಿಲ್ಲ. ವನ್ಯಜೀವಿ ಕಾಯ್ದೆ ಜಾರಿಗೆ ಬಂದಾಗಿನಿಂದ, ತೊಂದರೆ ಕೊಡುವ ಹುಲಿಗಳನ್ನು ಬೇರೊಂದು ಕಾಡಿಗೆ ಸ್ಥಳಾಂತರಿಸುವ ಕೆಲಸ ನಡೆದಿದೆ. ಆದರೂ ಇಲ್ಲಿದ್ದ ಸಮಸ್ಯೆ ಹೊಸ ಜಾಗದಲ್ಲಿ ಪ್ರಾರಂಭವಾಗುತ್ತದೆ ಎನ್ನುವ ತಜ್ಞರು, ಪ್ರಾಣಿಗಳ ಉಪಟಳ ಜಾಸ್ತಿಯಾದಾಗ ಕಾಡಿನಲ್ಲಿ ಅಥವಾ ಅಂಚಿನಲ್ಲಿ ವಾಸಿಸುವ ಜನರನ್ನೇ ಸ್ಥಳಾಂತರಿಸಬೇಕಾಗುತ್ತದೆ ಎಂದೂ ಅಭಿಪ್ರಾಯಪಡುತ್ತಾರೆ. ಅರಿವಳಿಕೆ ನೀಡುವಾಗ ಔಷಧದ ಪ್ರಮಾಣ ಹೆಚ್ಚಾಗಿ ಹಲವು ಹುಲಿಗಳು ಸತ್ತದ್ದೂ ಇದೆ. ಸ್ವಚ್ಛಂದವಾಗಿ ಅಲೆದುಕೊಂಡಿರುವ ಹುಲಿ, ಬೋನಿನಲ್ಲಿ ಹೊಂದಿಕೊಳ್ಳಲು ತೀರಾ ಕಷ್ಟಪಡುತ್ತದೆ. ಬೇರೆಡೆ ಸ್ಥಳಾಂತರಗೊಂಡಾಗ ಅಲ್ಲಿರುವ ಹುಲಿಯೊಂದಿಗೆ ಪೈಪೋಟಿ ಏರ್ಪಟ್ಟು, ಎರಡರಲ್ಲೊಂದು ಸಾವನ್ನಪ್ಪುತ್ತದೆ. ಆದ್ದರಿಂದ ಅಪಾಯಕಾರಿ ಹುಲಿಗಳ ಸ್ಥಳಾಂತರ ಸೂಕ್ತವಲ್ಲ ಎನ್ನುವ ಅಭಿಪ್ರಾಯ ವನ್ಯಜೀವಿ ನಿರ್ವಹಣಾ ವಲಯದಲ್ಲಿ ವ್ಯಾಪಕವಾಗಿದೆ.

ಒಂದು ಅಂದಾಜಿನಂತೆ, ಕಳೆದ 30 ವರ್ಷಗಳಲ್ಲಿ ಸುಮಾರು 250– 300 ಹುಲಿಗಳು ಮಾನವನೊಂದಿಗೆ ಸಂಘರ್ಷಕ್ಕಿಳಿದು ಪ್ರಾಣ- ನೆಲೆ ಕಳೆದುಕೊಂಡಿವೆ ಮತ್ತು ಕೆಲವು ಸ್ಥಳಾಂತರಗೊಂಡಿವೆ. ಇನ್ನೂ ಕೆಲವು, ಮನುಷ್ಯ ನಿರ್ಮಿಸುವ ತಂತಿ ಉರುಳು, ವಿದ್ಯುತ್ ಬೇಲಿಗೆ ಸಿಲುಕಿ ಸಾವನ್ನಪ್ಪಿವೆ. ಹುಲಿ ದಾಳಿಯಿಂದಾದ ನಷ್ಟಕ್ಕೆ ಪರಿಹಾರವೂ ಸೂಕ್ತ ಸಮಯದಲ್ಲಿ ಸಿಗುತ್ತಿಲ್ಲ. ಇರುವ ಕಾಡನ್ನು ರಕ್ಷಿಸಿ, ಕಿರು ಉತ್ಪನ್ನ– ಹುಲ್ಲಿಗಾಗಿ ಅರಣ್ಯ ಪ್ರವೇಶಿಸುವ ಜನ-ಜಾನುವಾರಗಳನ್ನು ನಿಯಂತ್ರಿಸದಿದ್ದರೆ ಸಂಘರ್ಷ ಹಾಗೇ ಮುಂದುವರಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.