ADVERTISEMENT

ಸಂಗತ | ‘ಅನಾರೋಗ್ಯ’ ವ್ಯವಸ್ಥೆಗೆ ಮದ್ದೆಲ್ಲಿ?

ಡಾ.ಲಕ್ಷ್ಮಣ ವಿ.ಎ.
Published 8 ಸೆಪ್ಟೆಂಬರ್ 2024, 19:30 IST
Last Updated 8 ಸೆಪ್ಟೆಂಬರ್ 2024, 19:30 IST
dd
dd   

2016– ಒಡಿಶಾದ ಕಾಳಹಂಡಿ ಜಿಲ್ಲೆಯ ದಾನಾಸಿಂಗ್ ಮಾಝಿ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಹತ್ತು ಕಿ.ಮೀ. ನಡೆದುಕೊಂಡೇ ತನ್ನ ಊರು ತಲುಪಿದ್ದ. ತನ್ನ ಬಳಿ ಇದ್ದ ದುಡ್ಡೆಲ್ಲಾ ಹೆಂಡತಿಯ ಚಿಕಿತ್ಸೆಗೆ ಖರ್ಚಾಗಿ, ಕೊನೆಗೆ ಆಂಬುಲೆನ್ಸ್‌ಗೆ ನೀಡಲು ಹಣವಿಲ್ಲದಾದಾಗ ಶವವನ್ನು ಹೆಗಲ ಮೇಲೆ ಹೊತ್ತು ನಡೆಯುವುದು ಅನಿವಾರ್ಯವಾಗಿತ್ತು.

2019– ಮಹಾರಾಷ್ಟ್ರದಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಾಗಿ ಇರುವ ಹಳ್ಳಿಯೊಂದರ ರೋಗಿಯೊಬ್ಬರನ್ನು ಆಂಬುಲೆನ್ಸ್ ಸೇವೆಯ ಕೊರತೆಯಿಂದ ಬೈಸಿಕಲ್‌ ಮೂಲಕ 12 ಕಿ.ಮೀ. ದೂರದಿಂದ ಕರೆತರುವಾಗ, ಆಸ್ಪತ್ರೆಯನ್ನು ತಲುಪುವ ಮುನ್ನವೇ ಆತ ಸಾವನ್ನಪ್ಪಿದ್ದರು.

2020– ಒಡಿಶಾದ ಹಳ್ಳಿಯೊಂದರಲ್ಲಿ ಹೆರಿಗೆಯಿಂದ ಬಳಲುತ್ತಿದ್ದ ಮಹಿಳೆಯನ್ನು, ಆಂಬುಲೆನ್ಸ್ ಲಭ್ಯವಿಲ್ಲದ ಕಾರಣ 8 ಕಿ.ಮೀ. ದೂರದ ಆಸ್ಪತ್ರೆಗೆ ಸ್ಟ್ರೆಚರ್‌ನಲ್ಲಿ ಸಾಗಿಸಲಾಗಿತ್ತು.

ADVERTISEMENT

2022– ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿರುವ ದೊಡ್ಡಾಣೆ ಗ್ರಾಮದ ಶಾಂತಲಾ ಎಂಬ ಗರ್ಭಿಣಿಗೆ ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಆಕೆಯನ್ನು ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯ ಬೇಕಾಗಿತ್ತು. ಆದರೆ ಮಧ್ಯರಾತ್ರಿ ಎರಡರ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ವಾಹನ ಲಭ್ಯವಿಲ್ಲದೆ, ವಿಧಿ ಇಲ್ಲದೆ ಡೋಲಿಯಲ್ಲಿ ಗರ್ಭಿಣಿಯನ್ನು ಕೂರಿಸಿಕೊಂಡು ಕಾಲ್ನಡಿಗೆಯಲ್ಲಿ ಹೊರಟ ಗ್ರಾಮಸ್ಥರು, ಬೆಳಿಗ್ಗೆ 6ರ ವೇಳೆಗೆ ಸುಳ್ವಾಡಿಯನ್ನು ತಲುಪಿದ್ದರು.

ಮೊನ್ನೆಯಷ್ಟೇ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯ ಆಹೇರಿ ತಾಲ್ಲೂಕಿನ ಹಳ್ಳಿಯೊಂದರ ದಂಪತಿ, ತೀವ್ರ ಜ್ವರದಿಂದ ಮೃತಪಟ್ಟಿದ್ದ ತಮ್ಮ ಇಬ್ಬರು ಪುತ್ರರ ಮೃತದೇಹಗಳನ್ನು ಹೆಗಲ ಮೇಲೆ ಊರಿಗೆ ಹೊತ್ತೊಯ್ದ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕರು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್‌ ನೀಡಲು ನಿರಾಕರಿಸಿದ್ದರಿಂದ, ಆಸ್ಪತ್ರೆಯಿಂದ 15 ಕಿ.ಮೀ. ದೂರದ ಹಳ್ಳಿಯಲ್ಲಿರುವ ತಮ್ಮ ಮನೆಗೆ ದಂಪತಿ ಕಾಲ್ನಡಿಗೆಯಲ್ಲೇ ಸಾಗಿದ್ದರು.

ಕಡುಬಡವರನ್ನೇ ಹೆಚ್ಚಾಗಿ ಹೊಂದಿರುವ, ಬಹುತೇಕ ಬುಡಕಟ್ಟು ಜನಾಂಗದವರೇ ವಾಸಿಸುವ ಇಂತಹ ಪ್ರದೇಶಗಳಲ್ಲಿನ ಈ ಬಗೆಯ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತವೆ.

ಪತ್ರಕರ್ತ ಪಿ.ಸಾಯಿನಾಥ್‌ 1993– 95ರ ಅವಧಿಯಲ್ಲಿ ದೇಶದ ಇಂತಹ ಕಡುಬಡ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಹದಗೆಟ್ಟ ಆರೋಗ್ಯ ವ್ಯವಸ್ಥೆ, ಮೂಲಸೌಕರ್ಯ ಕೊರತೆಯನ್ನು ಎತ್ತಿ ಹಿಡಿಯುವ ವರದಿಗಳ ಮೂಲಕ ದುಃಸ್ಥಿತಿಗೆ ಕನ್ನಡಿ ಹಿಡಿದಿದ್ದರು. ಸತತ ಎರಡು ವರ್ಷಗಳ ಅವಧಿಯಲ್ಲಿ ಸಾವಿರಾರು ಕಿ.ಮೀ. ಪ್ರಯಾಣಿಸಿ ಸಿದ್ಧಪಡಿಸಿದ್ದ ಅವರ ವರದಿಗಳು ಬೆಚ್ಚಿ ಬೀಳಿಸುವಂತಿದ್ದವು. ಆ ಮೂಲಕ, ಆವರೆಗೂ ದೇಶದ ಕಣ್ಣಿಗೆ ಕಾಣದ ಅಥವಾ ಕಂಡರೂ ಅದೇನೂ ಅಂತಹ ದೊಡ್ಡ ಸಮಸ್ಯೆಯೇ ಅಲ್ಲವೆಂಬ ಉಡಾಫೆಯಲ್ಲಿದ್ದ ಸರ್ಕಾರದ ಕಣ್ಣು ತೆರೆಸಿದ್ದರು.

‘ಎವ್ರಿಬಡಿ ಲವ್ಸ್ ಎ ಗುಡ್ ಡ್ರಾಟ್’ ಎಂಬ ಅವರ ಪುಸ್ತಕದಲ್ಲಿ ಇರುವುದು ಆದಿವಾಸಿಗಳ ಕಣ್ಣೀರ ಕಥನ, ಅಸಹಾಯಕ ವೃದ್ಧರ ಹತಾಶೆ, ನತದೃಷ್ಟ ಮಹಿಳೆಯರು ಹಾಗೂ ಒಂದು ಹೊತ್ತಿನ ಊಟವೂ ಸಿಗದೆ ಕಣ್ಣು ಮುಚ್ಚಿದ ಎಳೆ ಮಕ್ಕಳ ಸಂಕಟದ ವಿವರ. ಭಾರತದ್ದೇ ಆದ ಭಾಗವೊಂದರ ಇಂತಹ ದಯನೀಯ ಸ್ಥಿತಿಯನ್ನು ಯಾವ ವರದಿಗಳೂ ತಜ್ಞ ಸಮಿತಿಗಳೂ ಹೇಳಿರಲಿಲ್ಲ. ಇದಾಗಿ ಸುಮಾರು ಮೂರು ದಶಕಗಳೇ ಆಗುತ್ತಿವೆ.

ಸದ್ಯ ಸುದ್ದಿಯಲ್ಲಿರುವ ಗಡ್‌ಚಿರೋಲಿಯ ಹಳ್ಳಿಯ ಕಥೆಯೂ ಇದೇ ತೆರನಾದದ್ದು. ಸುತ್ತಲೂ ಬೆಟ್ಟ ಮತ್ತು ಕಾಡುಗಳಿಂದ ಆವೃತವಾದ ಈ ಭಾಗದ ಹಳ್ಳಿಗಳಲ್ಲಿ ಪ್ರತಿವರ್ಷ ಮಲೇರಿಯಾ ರೋಗಕ್ಕೆ ನೂರಾರು ಜನ ಬಲಿಯಾಗುತ್ತಾರೆ. ಯಾವುದೇ ಮೂಲ ಸೌಕರ್ಯಗಳಿಲ್ಲದ ಇಂತಹ ಪ್ರದೇಶದಲ್ಲಿ ವಾಸವಾಗಿದ್ದ ದಂಪತಿಯ ಮಕ್ಕಳಿಗೆ ಎಷ್ಟು ದಿನಗಳಿಂದ ಜ್ವರ ಇತ್ತು, ಹೀಗೆ ಜ್ವರಪೀಡಿತರಿಗೆ ಪ್ರಥಮ ಚಿಕಿತ್ಸೆ ನೀಡುವ ಮಾತ್ರೆಗಳು ಸಿಕ್ಕಿರಲಿಲ್ಲವೇ ಅಥವಾ ಸಿಕ್ಕರೂ ಇವರು ಉಪಯೋಗಿಸಿರಲಿಲ್ಲವೇ, ಭಾರತದ ಪ್ರತಿ ಹಳ್ಳಿಯಲ್ಲಿ ಪ್ರಥಮೋಪಚಾರಕ್ಕೆಂದೇ ಇರಬೇಕಾದ ಆಶಾ ಕಾರ್ಯಕರ್ತರು ಲಭ್ಯವಿರಲಿಲ್ಲವೇ, ಆ ಜ್ವರಪೀಡಿತ ಮಕ್ಕಳನ್ನು ಕನಿಷ್ಠ ಸೈಕಲ್ ನಲ್ಲಾದರೂ ಕರೆತರಲಾರದಷ್ಟು ಬಡತನ ಅವರಿಗಿತ್ತೇ, ಸೈಕಲ್ ಇದ್ದರೂ ಅದನ್ನು ಓಡಿಸಲಾರದಷ್ಟು ಆ ರಸ್ತೆಗಳು ಹದಗೆಟ್ಟು ಹೋಗಿವೆಯೇ ಎಂಬಂಥ ಪ್ರಶ್ನೆಗಳು ಮೂಡುತ್ತವೆ.

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 7 ದಶಕಗಳಾಗಿದ್ದರೂ ಆರೋಗ್ಯ ವ್ಯವಸ್ಥೆಯ ಅವಘಡಗಳನ್ನು ತಪ್ಪಿಸುವ ಮದ್ದು ಎಲ್ಲಿದೆ? ಆಧುನಿಕ ವಿಜ್ಞಾನ– ತಂತ್ರಜ್ಞಾನದ ಫಲವಾಗಿ ಚಂದ್ರನಲ್ಲಿ ತಲುಪಿದ್ದೇವೆ, ಮಂಗಳ ಗ್ರಹದಲ್ಲಿ ಜೀವಕೋಟಿಯ ಅವಶೇಷವೇನಾದರೂ ಇರಬಹುದೇ ಎಂದು ಹುಡುಕುತ್ತಾ ಕೋಟ್ಯಂತರ ಹಣ ವ್ಯಯಿಸುತ್ತಿದ್ದೇವೆ. ಆದರೆ, ದೇಶದ ಬುಡಕಟ್ಟು ಪ್ರದೇಶಗಳ ಜನರ ಆರೋಗ್ಯ ರಕ್ಷಣೆಯ ಬಗ್ಗೆ ನಮಗೆ ಯೋಚನೆ ಇಲ್ಲವೇ? ನಮ್ಮ ಸಂವಿಧಾನದ ವಿಧಿ 21, ದೇಶದ ಪ್ರತಿ ನಾಗರಿಕನಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಇದು ನಾಗರಿಕನೊಬ್ಬನ ಆರೋಗ್ಯ ರಕ್ಷಣೆ, ನೈರ್ಮಲ್ಯವನ್ನೂ ಖಾತರಿಪಡಿಸುತ್ತದೆ.

ಗಡ್‌ಚಿರೋಲಿಯ ಈ ಮಕ್ಕಳ ದುರಂತವು ಓದಿ ಮರೆತುಹೋಗುವ ಪ್ರಕರಣವಾಗಬಾರದು. ಇಂತಹ ಪ್ರಕರಣಗಳು ಮರುಕಳಿಸದಂತಹ ಪ್ರಯತ್ನಗಳು ಸರ್ಕಾರದ ವತಿಯಿಂದ ನಡೆಯುವಂತಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.