ಒಂದು ಕಾಲದಲ್ಲಿ, ಅಂದರೆ ಕೆಲವು ದಶಕಗಳ ಹಿಂದೆ, ಮಹಡಿ ಮನೆಗಳಲ್ಲಿಯೂ ಬಡ ಗುಡಿಸಲುಗಳಲ್ಲಿಯೂ ರೇಡಿಯೊ ಇರುತ್ತಿತ್ತು. ರೇಡಿಯೊದಲ್ಲಿ ಬರುತ್ತಿದ್ದ ಸುದ್ದಿಗೆ ಜನರು ಕಿವಿಗೊಡುತ್ತಿದ್ದರು. ಆ ದಿನಗಳಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿದ್ದುದು ಹಾಡುಗಳು. ರೇಡಿಯೊದಲ್ಲಿ ಬರುತ್ತಿದ್ದ ಹಾಡುಗಳನ್ನು ಆಲಿಸದವರೇ ಇರಲಿಲ್ಲ. ಸಂಜೆಯ ಹೊತ್ತು ಊರ ಪಂಚಾಯಿತಿ ಬೋರ್ಡು ಪೆವಿಲಿಯನ್ ಅಂಗಳದಲ್ಲಿ ಕುಳಿತು ರೇಡಿಯೊ ಆಲಿಸಲು ತುಂಬಾ ಮಂದಿ ಬರುತ್ತಿದ್ದರು.
ಕನ್ನಡ ಕಾರ್ಯಕ್ರಮಗಳ ಪ್ರಸಾರ ಆರಂಭಗೊಳ್ಳುವುದಕ್ಕೆ ಮೊದಲು ರೇಡಿಯೊದಲ್ಲಿ ಬರುವ ಇತರೆಲ್ಲಕಾರ್ಯಕ್ರಮಗಳಿಗಿಂತಲೂ ಮುಖ್ಯವಾಗಿ ಜನರು ಆಲಿಸುತ್ತಿದ್ದುದು ಹಾಡುಗಳನ್ನು. ಆಗ ರೇಡಿಯೊದಲ್ಲಿ ಬರುತ್ತಿದ್ದುದು ತಮಿಳು ಮತ್ತು ಹಿಂದಿ ಭಾಷೆಯ ಹಾಡುಗಳು ಮಾತ್ರ. ಅದನ್ನು ದಿನಾ ಆಲಿಸುತ್ತಿದ್ದ ಮಕ್ಕಳು ಮತ್ತು ಹದಿಹರೆಯದವರು ಮಾತ್ರವಲ್ಲ, ದೊಡ್ಡವರು ಸಹ ತಮಿಳು, ಹಿಂದಿ ಹಾಡುಗಳನ್ನು ಹಾಡಲು ಕಲಿತುಕೊಂಡಿದ್ದರು. ತಮಿಳು ಮತ್ತು ಹಿಂದಿ ಸಿನಿಮಾಗಳ ಆಗಮನದ ನಂತರ, ಅದೆಷ್ಟೋ ಮಂದಿ ಸಲೀಸಾಗಿ ತಮಿಳು, ಹಿಂದಿ ಮಾತಾಡಲು ಕಲಿತುಕೊಂಡಿದ್ದರು.
ಯಾವುದೇ ಭಾಷೆಯನ್ನಾಗಲಿ ಮರಳಿ ಮರಳಿ ಕೇಳುತ್ತಿದ್ದರೆ ಆ ಭಾಷೆ ಸುಲಭದಲ್ಲಿ ನಮ್ಮ ನಾಲಿಗೆಯಲ್ಲಿ ಮುದ್ರಣಗೊಳ್ಳುತ್ತದೆ. ಹಿಂದಿ ಹಾಡುಗಳ ವಿಚಾರದಲ್ಲಂತೂ ದಿನಾ ಹಾಡನ್ನು ಕೇಳುತ್ತಾ ಹಿಂದಿ ಹಾಡನ್ನು ರೇಡಿಯೊದಲ್ಲಿ ಬರುವ ಹಾಗೆಯೇ ಹಾಡುತ್ತಿದ್ದರು. ಹೇಗೆ ಹಿಂದಿ ಹಾಡುಗಳನ್ನು ಹಾಡಲು ಕಲಿತರೋ, ಕನ್ನಡ ಭಾಷೆಯ ಪ್ರಸಾರ ಆರಂಭವಾದ ಬಳಿಕ ಅದೇ ರೀತಿ ಕನ್ನಡ ಹಾಡುಗಳನ್ನು ಕೂಡಹಾಡಲು ಕಲಿತುಕೊಂಡವರಿದ್ದಾರೆ. ಟಿ.ವಿ. ಬಂದ ಮೇಲೆ, ಆ ರೀತಿ ಕಲಿತುಕೊಳ್ಳುವ ಸ್ವಾಭಾವಿಕ ಆಸಕ್ತಿ ಮತ್ತು ಕೌಶಲ ಬಹುತೇಕ ಅದೃಶ್ಯವಾಗಿದೆ. ಟಿ.ವಿ.ಯಲ್ಲಿ ಬರುವ ಏನನ್ನೂ ರೇಡಿಯೊ ಆಲಿಸುವಂತೆ ಆಲಿಸಲು ಮತ್ತು ಆಲಿಸಿ ಮನಸ್ಸಿನಲ್ಲಿ ಛಾಪಿಸಿಕೊಳ್ಳಲು ಆಗುವುದಿಲ್ಲ. ಕಣ್ಣಿನಿಂದ ನೋಡಿದ್ದಂತೂ ಬೇಗನೆ ಮನಸ್ಸಿನಿಂದ ಮಾಸಿಹೋಗುತ್ತದೆ. ಟಿ.ವಿ.ಯಲ್ಲಿ ಏನೇ ಇದ್ದರೂ ಅದು ಕೇವಲ ಕಣ್ಣುಗಳಿಗೆ ಮೀಸಲು. ಕೇಳಿ ಕಲಿತುಕೊಳ್ಳುವಂಥದು ಮುಖ್ಯವಾಗಿ ಏನೂ ಇಲ್ಲ. ಇಂಗ್ಲಿಷಿನಲ್ಲಿ ಬರುವ ಕಾರ್ಯಕ್ರಮಗಳಲ್ಲಿ ನೋಡಿ ಕಲಿತುಕೊಳ್ಳುವಂಥದು ಏನೋ ಕೆಲವು ಇರಬಹುದು. ಆದರೆ ಆ ಮೂಲಕ ಕಲಿತು ಬುದ್ಧಿಶಾಲಿಗಳಾದವರು ಎಲ್ಲೂ ಕಾಣಿಸುತ್ತಿಲ್ಲ.
ಯಾಕೆಂದರೆ, ಟಿ.ವಿ. ಮುಖ್ಯವಾಗಿ ಮನೋರಂಜನೆಗಾಗಿಯೇ ಇರುವಂಥದು. ಅದು ಕಲಿಯುವ ಇಚ್ಛೆಯುಳ್ಳವರಿಗೆ ಶಿಕ್ಷಣ ನೀಡುವ ಮಾಧ್ಯಮವಾಗಿಲ್ಲ. ಹೆಚ್ಚೆಂದರೆ ದೈನಂದಿನ ಆಗುಹೋಗುಗಳ ಬಗ್ಗೆ ಮಾಹಿತಿ ಸಿಗಬಹುದು. ಟಿ.ವಿ.ಯಲ್ಲಿ ಕಂಡದ್ದರಲ್ಲಿ ಮತ್ತು ಕೇಳಿದ್ದರಲ್ಲಿ ಸಕಾರಾತ್ಮಕವಾದುದು ಏನೂ ಇದ್ದಂತಿಲ್ಲ. ಹಾಗಿರಬಾರದು, ಹೀಗಿರಬೇಕು ಎಂದೇನಾದರೂ ಹೇಳಿದರೆ ಟಿ.ವಿ. ಭಕ್ತರು ಉರಿದೇಳುತ್ತಾರೆ. ಈಗೀಗಲಂತೂ ಟಿ.ವಿ.ಯನ್ನು ನೋಡುತ್ತಾ ಕುಳಿತರೆ, ಕಣ್ಣಿಗೂ ಹಾಳು, ಬುದ್ಧಿಗೂ ಹಾಳು. ‘ನಾವು ಬರೀ ಮನೋರಂಜನೆಗಾಗಿ ನೋಡುವುದು’ ಎನ್ನುವವರಿಗೆ ಸಿಗುವ ಮನೋರಂಜನೆ ಏನು ಎನ್ನುವುದು ತಿಳಿದಂತಿಲ್ಲ.
ಏನಿದ್ದರೂ ಇನ್ನು ಈ ಟಿ.ವಿ.ಯನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದನಿಸುತ್ತದೆ. ಆದರೆ ಸಮಾಜ ಮತ್ತು ಸರ್ಕಾರ ಮತ್ತು ಎಲ್ಲಾ ಚಿಂತಕರು, ವಿಚಾರವಂತರು ಸೇರಿ ಟಿ.ವಿ.ಯನ್ನು ಸ್ವಚ್ಛಗೊಳಿಸಲೇಬೇಕು. ಹಾಗೆ ಮಾಡಿದರೆ ಸಮಾಜಕ್ಕೆ ಒಳ್ಳೆಯದಾದೀತು. ಟಿ.ವಿ.ಯಲ್ಲಿ ಸಾವಿರಾರು ಚಾನಲುಗಳಿರುವುದರಿಂದ ಮಾನವ ಸಮಾಜಕ್ಕೆ ಏನೂ ಒಳ್ಳೆಯದಾಗುವುದಿಲ್ಲ.
ಟಿ.ವಿ.ಯಲ್ಲಿ ಮನೋರಂಜಕ ಕಾರ್ಯಕ್ರಮಗಳಲ್ಲಿ ಬಳಕೆಯಾಗುವ ಬೇರೆ ಬೇರೆ ಜನಪದೀಯ ಭಾಷೆ ಎಲ್ಲರೂ ಒಪ್ಪುವಂಥದೇ ಆಗಿರುತ್ತದೆ. ಆದರೆ ಅಸಹ್ಯ, ಅಶ್ಲೀಲ ಶಬ್ದಗಳ ಬಳಕೆಯ ಬಗ್ಗೆ ಮನೋರಂಜನಾವಾದಿಗಳು ವಿಚಾರ ಮಾಡಬೇಕು. ದಿನದಲ್ಲಿಮುಕ್ಕಾಲು ದಿನ ಟಿ.ವಿ.ಗೆ ಕಣ್ಣನ್ನು ಅಂಟಿಸಿ ಉಳಿದ ಹೊತ್ತಿನಲ್ಲಿ ಮೊಬೈಲ್ ಮೋಹಿನಿಯನ್ನು ಅಪ್ಪಿಕೊಂಡು, ಬಾಕಿ ಹೊತ್ತಿನಲ್ಲಿ ನೆಟ್ಟೆಂಬ ಪಠ್ಯದಿಂದ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡಿದವರು ಯಾರೂ ಬುದ್ಧಿವಂತರಾಗಿಲ್ಲ. ನಾವು ಕೇಳಿ ಕಲಿತದ್ದು ಹೆಚ್ಚೊ ನೋಡಿ ಕಲಿತದ್ದು ಹೆಚ್ಚೊ ಎಂದು ಗಾಢವಾಗಿ ಚಿಂತಿಸಿದರೆ ಯಾವುದು ಹೆಚ್ಚು ಎಂದು ಮನವರಿಕೆಯಾಗುತ್ತದೆ.
ಕಲಿತು ಬುದ್ಧಿವಂತರಾಗುವುದು, ಮೇಧಾವಿಗಳು ಸುಗಮವಾಗಿ ಗುರಿ ಮುಟ್ಟುವುದು ಶಾಲೆ ಕಾಲೇಜುಗಳಲ್ಲಿ ಉಪಾಧ್ಯಾಯರು ಕಲಿಸಿದ್ದಕ್ಕೆ ಕಿವಿಕೊಟ್ಟು, ಕುಳಿತುಕೊಳ್ಳುವ ಮೂಲಕ; ಲೈಬ್ರರಿಗೆ ಹೋಗಿ ಮನವಿಟ್ಟು ಓದುವ ಮೂಲಕ. ವಿಜ್ಞಾನಿಗಳು ಮತ್ತು ಮೇಧಾವಿಗಳ ಜೊತೆ ಮಾತಾಡುವ, ಚರ್ಚಿಸುವ ಮೂಲಕ. ತರುಣ ಪೀಳಿಗೆಗೆ ಇದನ್ನೆಲ್ಲ ಮನದಟ್ಟು ಮಾಡುವ ಕೆಲಸವನ್ನು ರೇಡಿಯೊ ಮಾಡಬಹುದು, ಮಾಡಬೇಕು.
ಇವತ್ತು ಚಿತ್ರವಿಚಿತ್ರವಾಗಿ ಮಾತಾಡುವ ಕೆಲವು ರೇಡಿಯೊ ಚಾನಲುಗಳು ತಾವು ಯುವಕ ಯುವತಿಯರಿಗೆ ಮನೋರಂಜನೆ ನೀಡುತ್ತೇವೆ ಎಂದು ಭಾವಿಸಿಕೊಂಡಿವೆ. ಇಂಗ್ಲಿಷೊ ಕನ್ನಡವೊ ಎಂಬಂತಿದ್ದು, ಕಾಡುಹರಟೆಯಂತೆ ಹುರುಳು ತಿರುಳು ಇಲ್ಲದ ಬರೀ ಮಾತು ಆಗಿರುವ ಈ ಚಾನಲುಗಳು ಆಲಿಸುವವರ ಕಿವಿಗೆ ಸುರಿಯುವ ಮಸಾಲೆಮಿಶ್ರಿತ ಮಾತಿನ ಪಾಯಸದಲ್ಲಿ ಯಾವ ರುಚಿಯೂ ಇಲ್ಲ ಎಂದು ಆಲಿಸುವವರಿಗೆ ಅನಿಸತೊಡಗಿದೆ. ಆದ್ದರಿಂದ ಬದಲಾವಣೆಗೆ ಇದು ಸಕಾಲ. ಈ ಚಾನಲುಗಳು ಶಾಲೆ–ಕಾಲೇಜುಗಳನ್ನು ಸಂಪರ್ಕಿಸಿ, ಅಲ್ಲಿಂದ ವಿದ್ಯಾರ್ಥಿಗಳನ್ನು ಚಿಕ್ಕ ಚಿಕ್ಕ ತಂಡಗಳಾಗಿ ಕರೆಸಿ, ಅವರಿಗೆ ಕನ್ನಡವನ್ನು ಸರಿಯಾದ ಉಚ್ಚಾರದಲ್ಲಿ ಸ್ಫುಟವಾಗಿ ಓದುವುದನ್ನು ಹೇಳಿಕೊಡಬೇಕು. ಮಕ್ಕಳಿಂದ ಕತೆ, ಕವಿತೆ, ನಾಟಕಗಳನ್ನು ಓದಿಸಬೇಕು ಮತ್ತು ಆಡಿಸಬೇಕು. ಮಕ್ಕಳಿಗೆ ವಾಗ್ಮಿಗಳಾಗುವ ದಾರಿ ತೋರಿಸಬೇಕು. ಮಕ್ಕಳಿಂದ ನೃತ್ಯ ಮಾಡಿಸುವುದಾದರೆ ಅದಕ್ಕೆ ಹೆಚ್ಚು ಹೊತ್ತು ವ್ಯಯಿಸಬಾರದು. ಮಕ್ಕಳು ಕಲಿಯಬೇಕಾದ್ದು ಚೆನ್ನಾಗಿ ಮಾತಾಡಲು, ಚೆನ್ನಾಗಿ ಓದಲು ಮತ್ತು ಚೆನ್ನಾಗಿ ಬರೆಯಲು. ಆ ಮೂಲಕ ಅವರ ಪ್ರತಿಭೆಯನ್ನು ಅರಳಿಸಬೇಕು.
ಟಿ.ವಿ. ಎಂಬ ದೃಶ್ಯ ಮಾಧ್ಯಮದ ಬಗ್ಗೆ ಮತ್ತು ರೇಡಿಯೊ ಎಂಬ ಶ್ರವಣ ಮಾಧ್ಯಮದ ಇಂದಿನ ಸ್ಥಿತಿಯ ಬಗ್ಗೆ ಶಾಲೆಗಳಲ್ಲಿ ಓದುವ ಮಕ್ಕಳಿಂದ ತೊಡಗಿ ಕಾಲೇಜಿನಲ್ಲಿ ಓದುವವರವರೆಗೆ, ಶಿಕ್ಷಕರೂ ಸೇರಿದಂತೆ ಜ್ಞಾನಾಭಿಮಾನಿಗಳು ಟಿ.ವಿ., ರೇಡಿಯೊ ಕಾರ್ಯಕ್ರಮಗಳು ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಬೇಕು. ಶಾಲೆ– ಕಾಲೇಜಿನ ಅಧ್ಯಾಪಕರು ಮಾಡುವ ಪಾಠವನ್ನು ರೇಡಿಯೊ ಮೂಲಕ ಕೊಡಬಹುದು. ರೇಡಿಯೊದ ನೆರವಿನಿಂದ ಯಾರೂ ಜ್ಞಾನಾರ್ಜನೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.