ಶಿಕ್ಷಕರನ್ನು ರಜೆರಹಿತ ಸಿಬ್ಬಂದಿಯೆಂದು ಘೋಷಿಸುವ ಕುರಿತಾದ ಚಿಂತನೆಯು ಶಿಕ್ಷಕ ವಲಯದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ರಜೆ ಬೇಕೆಂದರೆ, ಇನ್ನು ಕೆಲವರು ರಜೆರಹಿತವಾದರೆ ಒಳಿತು ಎಂದು ಅಭಿಪ್ರಾಯಪಡುತ್ತಾರೆ.
ಶಿಕ್ಷಕರನ್ನು ರಜೆರಹಿತ ಸಿಬ್ಬಂದಿಯಾಗಿ ಪರಿವರ್ತಿಸಿದರೆ, ವಿದ್ಯಾರ್ಥಿಗಳಿಗೆ ರಜೆ ಇರುವ ದಸರೆ ಅಥವಾ ಬೇಸಿಗೆ ರಜಾ ಕಾಲದಲ್ಲಿ ಅವರಿಗೆ ತರಬೇತಿ ನೀಡಬಹುದು ಎಂಬ ಸದಾಶಯವೇನೋ ಸರಿಯಿದೆ. ಆ ಮೂಲಕ ಶಾಲಾ ಅವಧಿಯಲ್ಲಿ ಶಿಕ್ಷಕರು ಸಂಪೂರ್ಣವಾಗಿ ಬೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ.
ಈ ಹಿನ್ನೆಲೆಯಲ್ಲಿ ಅವರಿಗೆ ದಸರಾ ರಜೆಯ ಅವಧಿಯಲ್ಲಿ ತರಬೇತಿ ನೀಡಬಹುದಾದರೂ, ಬೇಸಿಗೆಯ ಅವಧಿಯಲ್ಲಿ ಇರುವ ಬಿರುಬಿಸಿಲು, ತರಬೇತಿಗೆ ಪೂರಕ ವಾತಾವರಣ ಕಲ್ಪಿಸುವುದು ಕಠಿಣ ಎನ್ನಬಹುದು. ಅದರಲ್ಲೂ ಜಾಗತಿಕ ತಾಪಮಾನ ಏರಿಕೆಯ ಪರಿಣಾಮದ ಈ ದಿನಗಳಲ್ಲಿ, ತಾಪಮಾನ 45 ಡಿಗ್ರಿ ದಾಟುವ ಸನ್ನಿವೇಶದಲ್ಲಿ ತರಬೇತಿಗಳ ಮೂಲಕ ಶಿಕ್ಷಕರನ್ನು ಕಲಿಕೆಯಲ್ಲಿ ಪೂರ್ಣ ಮನಸ್ಸಿ
ನಿಂದ ತೊಡಗುವಂತೆ ಮಾಡುವುದು ಸವಾಲು ಎನಿಸುತ್ತದೆ.
ಡಾ. ಎಸ್.ರಾಧಾಕೃಷ್ಣನ್ ಅವರ ಅಧ್ಯಕ್ಷತೆಯ ವಿಶ್ವವಿದ್ಯಾಲಯ ಶಿಕ್ಷಣ ಆಯೋಗವು (1948-49) ಅಲ್ಪ ಅವಧಿಯ ಶಿಕ್ಷಕರ ಪುನಶ್ಚೇತನ ತರಬೇತಿ ಕಾರ್ಯಕ್ರಮಗಳನ್ನು ದಸರಾ, ಕ್ರಿಸ್‍ಮಸ್ ರಜೆಯಲ್ಲಿ ನಡೆಸಲು, ದೀರ್ಘ ಅವಧಿಯ ಪುನಶ್ಚೇತನ ಕಾರ್ಯಕ್ರಮ ಹಾಗೂ ಸಂಶೋಧನೆಗಳನ್ನು ಬೇಸಿಗೆಯ ರಜೆ ಅವಧಿಯಲ್ಲಿ ತಂಪು ಹವಾಮಾನವುಳ್ಳ ಗಿರಿಧಾಮಗಳಲ್ಲಿ ಕೈಗೊಳ್ಳಲು ಶಿಫಾರಸು ಮಾಡಿತ್ತು. ಇಂಥ ಕಾರ್ಯಕ್ರಮಗಳ ಮೂಲಕ ಶಿಕ್ಷಕರು ಈ ಅವಧಿಯ 8 ವಾರಗಳನ್ನು ಪ್ರವಾಸ, ಶಿಕ್ಷಣ ಹಾಗೂ ಅಂತರರಾಜ್ಯ ಸಂಪರ್ಕಗಳನ್ನು ಹೊಂದಲು ಉಪಯುಕ್ತವಾಗಿ ಕಳೆಯಬಹುದು ಎಂದು ಹೇಳಿತ್ತು. ಇದರ ಜೊತೆಗೆ, ಪ್ರತಿ 5 ವರ್ಷಗಳ ಸೇವೆಯ ನಂತರ ಶಿಕ್ಷಕರು ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ರಜೆಸಹಿತ ಹಾಜರಾಗಿ 6 ತಿಂಗಳ ಮುಂದುವರಿದ ಶಿಕ್ಷಣ ಕೋರ್ಸ್ ಅನ್ನು ಪೂರ್ಣಗೊಳಿಸಲು ಶಿಫಾರಸು ಮಾಡಿತ್ತು.
ಮಾಧ್ಯಮಿಕ ಶಿಕ್ಷಣ ಆಯೋಗವು (1952-53) ಶಿಕ್ಷಕರು ತಮ್ಮ ರಜಾ ದಿನಗಳನ್ನು ಕಳೆಯಲು, ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಲು ಅನುಕೂಲ ಆಗುವಂತೆ ರೈಲು ಪ್ರಯಾಣದಲ್ಲಿ ರಿಯಾಯಿತಿ ನೀಡಲು ಶಿಫಾರಸು ಮಾಡಿತ್ತು. ಕೊಠಾರಿ ಶಿಕ್ಷಣ ಆಯೋಗವು (1964-66) ಪ್ರತಿ ಶಿಕ್ಷಕನೂ ಕನಿಷ್ಠ 5 ವರ್ಷಗಳಿಗೊಮ್ಮೆ ಎರಡರಿಂದ ಮೂರು ತಿಂಗಳ ಸೇವಾ ಅವಧಿಯ ಶಿಕ್ಷಣವನ್ನು ಪುನಶ್ಚೇತನ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಮೂಲಕ ಕೈಗೊಳ್ಳಬೇಕು ಎಂದು ಹೇಳಿತ್ತು. ಇದರ ಜೊತೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಜೆಯ ಅವಧಿಯನ್ನು ಉಪಯುಕ್ತವಾಗಿ ಕಳೆಯಬೇಕು, ಶಾಲಾ ಅವಧಿಯಲ್ಲಿ ನಿರ್ವಹಿಸಲು ಸಾಧ್ಯವಾಗದ ಅಧ್ಯಯನ, ಸಂಶೋಧನೆಗಳನ್ನು ಶಿಕ್ಷಕರು ರಜೆ ಅವಧಿಯಲ್ಲಿ ಕೈಗೊಳ್ಳಬೇಕೆಂದು ಹೇಳಿತ್ತು.
ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ನಿರಂತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಉಂಟಾಗಬಹುದಾದ ದೈಹಿಕ ಮತ್ತು ಮಾನಸಿಕ ಆಯಾಸಗಳಿಂದ ವಿರಾಮ ಹೊಂದಲು ಬೇಸಿಗೆ ರಜೆಯು ಅನುಕೂಲ ಕಲ್ಪಿಸುತ್ತದೆ ಎನ್ನಬಹುದು. ರಜೆ ಅವಧಿಯು ಪಠ್ಯ
ಪೂರಕ ಅಥವಾ ಪಠ್ಯಕ್ರಮೇತರ ವಿಷಯಗಳಿಗೆ ಸಂಬಂಧಿಸಿದ ಆಳವಾದ ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ಇನ್ನಿತರ ಸೃಜನಶೀಲ ಚಟುವಟಿಕೆಗಳನ್ನು ಕೈಗೊಳ್ಳಲು ಸಹ ಶಿಕ್ಷಕರಿಗೆ ಅನುಕೂಲ ಕಲ್ಪಿಸುತ್ತದೆ. ವೃತ್ತಿಯ ಕಾರಣದಿಂದ ಕುಟುಂಬದಿಂದ ದೂರ ಇರುವ ಅನೇಕ ಶಿಕ್ಷಕರಿಗೆ ರಜಾ ಅವಧಿಯು ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯಲು ಅನುವು ಮಾಡಿಕೊಡುತ್ತದೆ. ಪ್ರವಾಸ ಹಾಗೂ ಮನರಂಜನೆಗಳಿಗಾಗಿ ಬಿಡುವು ಪಡೆಯುವ ಮೂಲಕ ಶಿಕ್ಷಕರು ಇನ್ನೊಂದು ಶೈಕ್ಷಣಿಕ ಅವಧಿಗೆ ಸಿದ್ಧರಾಗಲು ಅನುಕೂಲ ಕಲ್ಪಿಸುತ್ತದೆ.
ಶಿಕ್ಷಕರ ಮನಸ್ಸು ಶಾಂತವಾಗಿಯೂ, ಸೃಜನಶೀಲವಾಗಿಯೂ ಇದ್ದಲ್ಲಿ, ಕೈಗೊಳ್ಳುವ ಬೋಧನಾ ಚಟುವಟಿಕೆಗಳು ಫಲಪ್ರದವಾಗುತ್ತವೆ. ಆದರೆ ಅನೇಕ ಶಿಕ್ಷಣ ಪೂರಕ ಹಾಗೂ ಶಿಕ್ಷಣೇತರ ಕಾರ್ಯಚಟುವಟಿಕೆಗಳು ಶಿಕ್ಷಕರಲ್ಲಿ ಹುಟ್ಟಿಸಬಹುದಾದ ಒತ್ತಡಗಳು ಬೋಧನಾ ಚಟುವಟಿಕೆಗಳನ್ನು ಏಕಾಗ್ರಚಿತ್ತದಿಂದ ಕೈಗೊಳ್ಳುವುದರಿಂದ ಅವರನ್ನು ದೂರ ಸರಿಸಬಹುದು. ಶಿಕ್ಷಕರ ಎಲ್ಲಾ ಪಠ್ಯೇತರ ಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಅವರು ಗುಣಾತ್ಮಕ ಬೋಧನೆಯಲ್ಲಿ ತೊಡಗಲು ಅವಕಾಶ ಕಲ್ಪಿಸಬಹುದು. ಮುಖಾಮುಖಿ ತರಬೇತಿಗಳನ್ನು ಮಿತಿಗೊಳಿಸಿ, ವಿವಿಧ ತಂತ್ರಜ್ಞಾನ ಸಾಧನಗಳ ಮೂಲಕ ದೂರ ಶಿಕ್ಷಣ ರೀತಿಯ ಶಿಕ್ಷಕರ ತರಬೇತಿಗಳನ್ನು ಆಯೋಜಿಸುವುದರತ್ತ ಚಿಂತಿಸಬಹುದು.
ಸಹಜ ಕಲಿಕೆಯ ಹಂಬಲವು ಶಿಕ್ಷಕರು ಸ್ವತಃ ಇಂತಹ ತರಬೇತಿಗಳನ್ನು ಆಯ್ದುಕೊಳ್ಳುವಂತಹ ವಾತಾವರಣ ಸೃಷ್ಟಿಸಿದಲ್ಲಿ, ಈಗಿರುವಂತೆ ಶಿಕ್ಷಕರು ರಜೆಸಹಿತ ಸಿಬ್ಬಂದಿಯಾಗಿ ಮುಂದುವರಿಯುವುದು ಒಳಿತಾಗಬಹುದು. ಇದರ ಜೊತೆಗೆ ಶಿಕ್ಷಕರ ಮೇಲಿರುವ ವಿಪರೀತ ನಿರೀಕ್ಷೆಗಳನ್ನು ಕಡಿಮೆಗೊಳಿಸಿ ಅವರನ್ನು ಬೋಧನೆಗೆ ಸೀಮಿತ ಮಾಡುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಪರಿಣಾಮಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.