ADVERTISEMENT

‘ವ್ಯಾಲೆಂಟೈನ್ಸ್ ಡೇ’ : ಪ್ರೀತಿ ಅಂದರೆ ಕಲ್ಪನೆಯಲ್ಲ, ಅದು ದಿಟದ ಶೋಧ

ಸಂಗತ | ಪ್ರೀತಿಯ ಪ್ರಖರತೆ ಅದರ ಗೈರಿನಲ್ಲೇ!

ಯೋಗಾನಂದ
Published 14 ಫೆಬ್ರುವರಿ 2022, 6:48 IST
Last Updated 14 ಫೆಬ್ರುವರಿ 2022, 6:48 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಬಸ್ ನಿಲ್ದಾಣವೊಂದರ ಬಳಿ ನಿಂತಿದ್ದೆ. ಸ್ಟವ್, ಫಿಲ್ಟರ್, ಪಾತ್ರೆ, ಪಡಗ, ನೀರಿನ ಕ್ಯಾನ್ ವಗೈರೆ ಪೇರಿಸಿದ್ದ ತಳ್ಳುಗಾಡಿಯೊಂದು ಬಂದು ಬದಿಗೆ ನಿಂತಿತು. ಹತ್ತೇ ನಿಮಿಷದಲ್ಲಿ ಆತ, ಆಕೆ ಗಾಡಿಯಿಂದ ಪರಿಕರಗಳನ್ನು ಇಳಿಸಿದ್ದರು. ಸ್ಟವ್ ಶ್ರುತಿಗೊಂಡು ಬರ್ರನೆ ಉರಿಯತೊಡಗಿತು. ಅದು ಕಾಫಿ, ತಿಂಡಿಯ ಸಂಚಾರಿ ಹೋಟೆಲ್. ಅವರು ಅದನ್ನು ನಿರ್ವಹಿಸುವ ನಡು ವಯಸ್ಸಿನ ದಂಪತಿಯೆಂದು ತಿಳಿಯುವುದು ಕಷ್ಟವಾಗಲಿಲ್ಲ. ವಿವಾಹದ ನಂತರವೂ ಮುಂದುವರಿಯುವ ಪ್ರೀತಿ, ಸಾಮರಸ್ಯ ಇದೇ ಅಲ್ಲವೇ ಅನ್ನಿಸಿ ಕಣ್ತುಂಬಿ ಬಂತು.

ಸಿದ್ಧ ಮಾದರಿಯ ನಿರೂಪಣೆ ನಮಗೆ ಗೊತ್ತಿದ್ದೆ. ಅವನು ಮತ್ತು ಅವಳು ಪರಿಚಿತರಾದರು. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಯಿತು. ಸುತ್ತಾಟ, ಹೊರ ತಾಣ, ಹೊರ ರುಚಿ, ಕನಸುಗಳದ್ದೇ ಕಾರುಬಾರು. ನೋಡಿದ ಸಿನಿಮಾಗಳು, ಓದಿದ ಕವನದ ಸಾಲುಗಳು ಮೆಲುಕಿಗೆ ಸರದಿಯಲ್ಲಿರುತ್ತವೆ. ಪ್ರೇಮವಿವಾಹ ಸರಿಯೆ. ಆದರೆ ಬದುಕಿನ ಮಹತ್ತರ ನಿರ್ಧಾರ ಕೈಗೊಳ್ಳುವಾಗ ಕೆಲ ಸೂಕ್ಷ್ಮಗಳನ್ನು ಅವರಿಬ್ಬರೂ ಅವಲೋಕಿಸಿಕೊಂಡರೆ ಮತ್ತೂ ಘನ. ತಂತಮ್ಮ ಪೋಷಕರು ಈ ವಿವಾಹಕ್ಕೆ ಮನಃಪೂರ್ತಿಯಾಗಿ ಸಮ್ಮತಿಸುವರೇ? ಹೌದಾದರೆ ಮುಂದೆಯೂ ಆ ಸಮ್ಮತಿ ಸೌಹಾರ್ದದ ರೂಪ ತಳೆಯಬೇಕು. ಸಮ್ಮತಿಸ ರೆಂದಾದರೆ ಕಾಲಾಂತರದಲ್ಲಾದರೂ ಪೋಷಕ-ಪೋಷಕರ ನಡುವೆ ಗೆಳೆತನ ಮೆರೆಯಬೇಕು. ಏಕೆಂದರೆ ಜನಿಸುವ ಕೂಸು ಅಜ್ಜ, ಅಜ್ಜಿಯರ ಅಕ್ಕರೆಯಿಂದ ವಂಚಿತವಾಗಬಾರದಲ್ಲ!

ಅಪೇಕ್ಷೆ, ಪ್ರತಿಫಲ ನಿರೀಕ್ಷೆ, ಷರತ್ತುಗಳಿಂದ ಪ್ರೀತಿ ಸೊರಗುತ್ತದೆ, ವ್ಯಾವಹಾರಿಕವಾಗುತ್ತದೆ. ಒಲವಿನ ಹಬ್ಬದ ಹಿಗ್ಗನ್ನು ಶಾಪಿಂಗ್‍ನಲ್ಲಿ ಅರಸಲಾಗದು. ಪ್ರೀತಿ, ವಿಶ್ವಾಸದ ಪ್ರಕಟಣೆಗೆ ಕವಿ ನುಡಿಗಳು, ಬಣ್ಣ ಬಣ್ಣದ ಸಂದೇಶಗಳು, ಅದ್ಧೂರಿ ಉಡುಗೊರೆಗಳೇನೂ ಅನಿವಾರ್ಯವಲ್ಲ. ಕಾರಣವಿಲ್ಲದ ಸಣ್ಣ ಮಂದಹಾಸ, ಮುಗುಳ್ನಗೆ ಸಂಬಂಧವನ್ನು ಗಟ್ಟಿಗೊಳಿಸಲು ಸಾಕು. ಸೋಜಿಗವೆಂದರೆ, ತನಗೆ ಬೇರ್ಪಡಲು ಹಕ್ಕಿದೆ ಎನ್ನುವ ಸತಿ ಪತಿಯರ ಗ್ರಹಿಕೆಯೇ ಪ್ರಜ್ಞಾಪೂರ್ವಕವಾಗಿ ಅವರ ಸಂಬಂಧವನ್ನು ಅನನ್ಯಗೊಳಿಸುತ್ತದೆ!

ADVERTISEMENT

‘ವ್ಯಾಲೆಂಟೈನ್ಸ್ ಡೇ’ (ಫೆ. 14) ಕವಿಗಳ ರಜೆ ದಿನ ಎಂದು ಬಣ್ಣಿಸಲಾಗುತ್ತದೆ. ಮನುಷ್ಯ ಪ್ರೀತಿ ಮತ್ತು ಸಂವೇದನೆಗೆ ಅನಾದಿ ಕಾಲದಿಂದಲೂ ಹೃದಯವನ್ನು ಮೂಲವಾಗಿಸಲಾಗಿದೆ. ಆದರೆ ಹೃದಯ ಎಷ್ಟು ಹಿಡಿಸೀತೆನ್ನುವುದು ಕವಿಯ ಅಳತೆಗೂ ದೊರಕದು. ಕಣ್ಣು ಕಾಣಲಾಗದ್ದನ್ನು ಹೃದಯ ಕಾಣಬಲ್ಲದು. ಕಾಳಿದಾಸನ ‘ಮೇಘದೂತ’ ಕಾವ್ಯದಲ್ಲಿ ಬಂಧಿತ ಯಕ್ಷನ ಪಾಲಿಗೆ ತನ್ನ ಪ್ರೇಯಸಿಗೆ ಸಂದೇಶ ಕಳಿಸಲು ಮೋಡವೇ ವಾಹಕವಾಗುತ್ತದೆ.

ಈ ದಿನ ಪ್ರೇಮಿಗಳಿಗೆ ಮಾತ್ರ ಸೀಮಿತವಲ್ಲ. ಯಾರೇ ಮತೊಬ್ಬರಿಗೆ ಪ್ರೀತಿ, ವಿಶ್ವಾಸವನ್ನು ಅಭಿವ್ಯಕ್ತಿಸುವ ದಿನ. ನಿತ್ಯವೂ ಆಫೀಸಿಗೆ ಹೊರಡುವಾಗ ಆತನ ಕಿಸೆಗೆ ಆಕೆಯಿಂದ ಕರವಸ್ತ್ರ ಸಲ್ಲುತ್ತಿತ್ತು. ಅಂದು ಹಾಗಾಗದೆ ಅವನು ಪೆಚ್ಚಾದ. ಏನೋ ಕಳೆದುಕೊಂಡಂತೆ ಭಾವ.ಪ್ರೀತಿಯಸಾದರಅದರಗೈರಿನಲ್ಲೇಹೆಚ್ಚು ಗಾಢ ವೆನ್ನಲಿಕ್ಕೆ ಈ ವೃತ್ತಾಂತ ಸಾಕಲ್ಲವೇ? ಹಾಗಾಗಿ ತಾನೆ ‘ಐ ಮಿಸ್ ಯು’ ಸಂದೇಶಕ್ಕೆ ಅಷ್ಟೊಂದು ಮಹತ್ವ?

ಅಮೆರಿಕದ ಇದಾಹೊ ಪ್ರಾಂತ್ಯದ ಕವಯಿತ್ರಿ ಜೋನಾ ಫಾಚಸ್ ಅವರ ಹನಿಗವನ: ‘ಸಂತಸ, ಪೂರ್ಣತೆ, ಸಿರಿತನ ನನ್ನ ಬದುಕೆಲ್ಲ/ ಏಕೆ ಈ ಖುಷಿ, ಆನಂದ, ಪರವಶತೆ?/ ಕೇವಲ ನೀನು ಪ್ರೀತಿಸುವೆ ಯೆಂಬ ಕಾರಣಕ್ಕೆ//’. ಎಲ್ಲ ಬಗೆಯ ಪ್ರೀತಿಯೂ ಸುಂದರ, ಹಬ್ಬವಾಗಿ ಸಂಭ್ರಮಿಸಲರ್ಹ. ಗೆಳತಿ ಅಥವಾ ಗೆಳೆಯ ಇಲ್ಲದಿದ್ದರೇನೀಗ? ಹೆತ್ತವರು, ಗುರುವರ್ಯರು, ಬಂಧುಗಳು, ಇಷ್ಟರು, ಹಿತೈಷಿಗಳು, ಆಪ್ತರು, ನೆರೆಹೊರೆಯವರು... ಅವರಿಗೆಲ್ಲ ಅಂದು ವಂದಿಸಲೇನಡ್ಡಿ? ಅತ್ತೆ ಮಾವಂದಿರಿಗೆ ಸೊಸೆ ಮಗಳಾ ಗುವಲ್ಲಿ, ಅಳಿಯ ಮಗನಾಗುವಲ್ಲಿ ಒದಗುವ ಆಪ್ತತೆ ಕಡಿಮೆಯೇ? ಎಲ್ಲವೂ ಪ್ರೀತಿಗಾಗಿ ತನ್ನ ಜೀವ ಸಮ ರ್ಪಿಸಿದ ಸಂತ ವ್ಯಾಲೆಂಟೈನ್ ಅವರಿಗೆ ಸಲ್ಲಿಸುವ ಗೌರವವೂ ಆಗುವುದು. ಆದರ, ಅನುಕಂಪ, ದಯೆ ಯನ್ನು ಒಂದು ದಿನಕ್ಕೇ ಮಿತಗೊಳಿಸದೆ ಪ್ರತಿದಿನ ಅವನ್ನು ಸಡಗರಿಸಬೇಕು.

ವ್ಯಾಲೆಂಟೈನ್ ದಿನವನ್ನು ಸಡಗರಿಸುವ ಮನಸ್ಸುಗಳು ವರ್ಷದ ಉಳಿದೆಲ್ಲ ಹಬ್ಬಗಳನ್ನೂ ಸಂಭ್ರಮಿಸುವಷ್ಟು ಉಲ್ಲಸಿತಗೊಳ್ಳುತ್ತವೆ ಎಂಬ ಮಾತು ಅಷ್ಟೇ ಸತ್ಯ. ಬದುಕಿನಲ್ಲಿ ಒಂದೇ ಒಂದು ಸಂತೋಷದ ಸಂಗತಿಯೆಂದರೆ, ಪ್ರೀತಿಸುವುದು ಮತ್ತು ಪ್ರೀತಿಗೆ ಪಾತ್ರವಾಗುವುದು.ಪ್ರೀತಿಯಯಾನದಲ್ಲಿ ಪರಸ್ಪರ ಆಲಿಕೆ ಒಂದು ಅದ್ಭುತ ಶಕ್ತಿ. ಪ್ರತೀ ದಿನವನ್ನೂ ಆಲಿಸಬೇಕು. ಆಲಿಸದೇ ಮುರಿಯುವ ಸಂಬಂಧಗಳು ಅಸಂಖ್ಯ. ಪ್ರೀತಿಯಿರದಿದ್ದಲ್ಲಿ ಬದುಕಿರದು. ನಿಜಪ್ರೀತಿಗೆ ಡಂಗುರ, ಪ್ರಖರ ದೀಪ, ಲಾಂಛನವಿರದು.ಪ್ರೀತಿಯಸದ್ದು ಕೇಳುತ್ತಿದ್ದರೆ, ನೋಟ ಕಣ್ಣು ಕೋರೈಸುತ್ತಿದ್ದರೆ ಕಿವಿ, ಕಣ್ಣು ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಂಡುಬಿಡುವುದೇ ಸೂಕ್ತ!

ಪ್ರೀತಿಯಗೆಲುವೆಂದರೆ ಮೆಚ್ಚುಗೆ, ಭರವಸೆ, ನಂಬಿಕೆ, ನಿರಂತರತೆಯ ಗೆಲುವು. ಅದು ಸೋತರೂ ಬಹುಮುಖ ಪ್ರಯೋಜನವಿದೆ. ವ್ಯಕ್ತಿಗೆ ಇನ್ನಷ್ಟು ಗಟ್ಟಿತನ ಬರುವುದು. ಕೋಪ, ಭಯ, ಖಿನ್ನತೆ ಜಯಿಸ ಬಲ್ಲೆನೆಂಬ ಆತ್ಮವಿಶ್ವಾಸ ಮೂಡುತ್ತದೆ. ಪ್ರೀತಿ ಎಂದರೆ ಕಲ್ಪನೆಯಲ್ಲ, ಅದು ದಿಟದ ಶೋಧ. ಜಗತ್ತನ್ನು ನಾವು ಹೊಸ ಬೆಳಕಿನಿಂದ ನೋಡಲು ಸಾಧ್ಯವಾಗಿಸುವ, ಹೊಸ ಆರಂಭಗಳಿಗೆ ಪ್ರಭಾವಿಸುವ ಅನುಭಾವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.