ADVERTISEMENT

ಸಂಗತ: ವಿಮಾನಯಾನ- ಇರಲಿ ಸಂಯಮ!

ವಿಮಾನಯಾನಕ್ಕೆ ಮೊದಲು ಪ್ರಯಾಣಿಕರಿಗೆ ವಾಸ್ತವದ ಅರಿವಿರುವುದು ಅವಶ್ಯಕ

ಡಾ .ಕೆ.ಎಸ್.ಚೈತ್ರಾ
Published 25 ಏಪ್ರಿಲ್ 2023, 20:39 IST
Last Updated 25 ಏಪ್ರಿಲ್ 2023, 20:39 IST
ಸಂಗತ: ವಿಮಾನಯಾನ: ಇರಲಿ ಸಂಯಮ!
ಸಂಗತ: ವಿಮಾನಯಾನ: ಇರಲಿ ಸಂಯಮ!   

ವಿಮಾನದಲ್ಲಿ ಪ್ರಯಾಣಿಸುವಾಗ ಮಗುವಿನ ಅಳುವಿನಿಂದ ಸಿಟ್ಟಿಗೆದ್ದ ಪ್ರಯಾಣಿಕನಿಂದ ಸಿಬ್ಬಂದಿ ಜತೆ ಹೊಡೆದಾಟ, ಬೇಕಾದ ಆಹಾರ ಸಿಗಲಿಲ್ಲ ಎಂದು ಗಗನಸಖಿಯನ್ನು ನಿಂದಿಸಿದ ಮಧ್ಯವಯಸ್ಕ, ಸೂಕ್ತ ಸೀಟ್ ಕೊಡಲಿಲ್ಲ ಎಂದು ಗಲಾಟೆ ಮಾಡಿದ ಮಹಿಳೆ... ಇವು ವಿಮಾನ ಪ್ರಯಾಣದ ಕುರಿತು ಇತ್ತೀಚೆಗೆ ಆಗಾಗ್ಗೆ ಬರುವ ಸುದ್ದಿಗಳು. ಈ ರೀತಿ ವಿಮಾನಯಾನದಲ್ಲಿ ತಾಳ್ಮೆ ಕಳೆದುಕೊಂಡು ಸಿಟ್ಟಿಗೇಳುವುದನ್ನು ‘ಏರ್‍ರೇಜ್’ ಎಂದು ಕರೆಯಲಾಗುತ್ತದೆ. ಈ ಪ್ರವೃತ್ತಿ ಜನರಲ್ಲಿ ಹೆಚ್ಚುತ್ತಿರುವುದಕ್ಕೆ ಅನೇಕ ಕಾರಣಗಳಿವೆ.

ಬೇಸಿಗೆ ಅಂದರೆ ಪ್ರವಾಸದ ಸಮಯ. ಬಸ್ಸು, ರೈಲಿನ ಜತೆ ವಿಮಾನಯಾನವೂ ಈಗ ಸಾಮಾನ್ಯರಿಗೆ ಲಭ್ಯ. ಏರಿದ ಆರ್ಥಿಕ ಮಟ್ಟ, ಪ್ರವಾಸದ ಕುರಿತ ಆಸಕ್ತಿ, ಹೆಚ್ಚಿದ ವಿಮಾನಗಳ ಸಂಖ್ಯೆ ಮತ್ತು ಅನುಕೂಲದ ದೃಷ್ಟಿಯಿಂದ ವಿಮಾನಯಾನದ ಬಗ್ಗೆ ಒಲವು ಹೆಚ್ಚುತ್ತಿದೆ. ಹೀಗಾಗಿ, ಕಿಕ್ಕಿರಿದು ತುಂಬಿದ ಏರ್‌ಪೋರ್ಟ್‌ಗಳು, ಉದ್ದವಾದ ಸಾಲುಗಳು ಮತ್ತು ಜನದಟ್ಟಣೆ ಎಲ್ಲೆಲ್ಲೂ ಕಂಡುಬರುವ ದೃಶ್ಯ. ಆರಾಮದಾಯಕ ಅನುಭವ ಪಡೆಯುವ ಉದ್ದೇಶವನ್ನು ಇಟ್ಟುಕೊಂಡು ಬಂದ ಜನರಿಗೆ ಈ ರೀತಿಯ ಕಾಯುವಿಕೆ, ಹೆಚ್ಚಿರುವ ಸುರಕ್ಷಾ ಕ್ರಮಗಳು, ಗಡಿಬಿಡಿ ತೋರುವ ಅಧಿಕಾರಿಗಳಿಂದ ಬಹಳಷ್ಟು ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ, ವಿಮಾನ ಹತ್ತುವ ಮೊದಲೇ ಪ್ರಯಾಣಿಕರಲ್ಲಿ ಅಸಹನೆ ತಲೆದೋರಿರುತ್ತದೆ.

ಬದಲಾದ ವಿಮಾನಗಳ ಸ್ವರೂಪವೂ ಪ್ರಯಾಣಿಕರ ಕಿರಿಕಿರಿಗೆ ಕಾರಣವಾಗಬಲ್ಲದು. ಬಹಳಷ್ಟು ವಿಮಾನಗಳಲ್ಲಿ ಕಿರಿದಾದ ಆಸನಗಳು, ಕಾಲು ಚಾಚಲು ಕಡಿಮೆ ಅಂತರ, ಚೀಲಗಳನ್ನು ಇಡಲು ಚಿಕ್ಕದಾದ ಸ್ಥಳಾವಕಾಶ... ಇವೆಲ್ಲವೂ ಲಾಭದಾಯಕ ಉದ್ಯಮದ ದೃಷ್ಟಿಯಿಂದ ಮಾಡಲಾದ ಬದಲಾವಣೆಗಳು. ಪ್ರಯಾಣಿಕರನ್ನು ಆಕರ್ಷಿಸಲು ನೀಡುವಂತಹ ಜಾಹೀರಾತುಗಳು ಜನರ ನಿರೀಕ್ಷೆಯನ್ನು ಬಹಳಷ್ಟು ಹೆಚ್ಚಿಸಿರುತ್ತವೆ. ಆ ಸೌಲಭ್ಯವನ್ನೇ ಕಲ್ಪಿಸಿಕೊಂಡು ಬಂದ ಜನರಿಗೆ ವಿಮಾನದ ಒಳ ಹೊಕ್ಕಾಗ ನಿರಾಸೆಯಾಗುವುದು ಸಹಜ. ತಮ್ಮ ಚೆಕ್‍ಇನ್ ಲಗೇಜ್ ಕಳೆದುಹೋಗುವ ಅಥವಾ ತಡವಾಗಿ ಸಿಗುವ ಹೆದರಿಕೆಯಿಂದ ತಂದ ದೊಡ್ಡದಾದಂತಹ ಬ್ಯಾಗನ್ನು ಸಣ್ಣದಾದ ಜಾಗದಲ್ಲಿ ಇಡಲು ಸಾಧ್ಯವಾಗದೇ ಇದ್ದಾಗ ವಾಗ್ವಾದ ಆರಂಭವಾಗುತ್ತದೆ.

ADVERTISEMENT

ಒಮ್ಮೆ ಕುಳಿತ ನಂತರ ಮುಕ್ತವಾಗಿ ಓಡಾಡಲು ಸಾಧ್ಯವಾಗದೇ ಇರುವುದು, ಸೀಮಿತ ಶೌಚಾಲಯ, ವಿಮಾನಯಾನ ಕುರಿತ ಆತಂಕ, ಒತ್ತಡ ಹೆಚ್ಚಿರುವ- ಆಕ್ಸಿಜನ್ ಕಡಿಮೆ ಇರುವ ವಿಮಾನದ ವಾತಾವರಣದ ಜತೆ ಇತರ ಪ್ರಯಾಣಿಕರನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯವು ದೈಹಿಕ, ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ದುಡ್ಡು ಕೊಟ್ಟಿರುವ ನಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲವೂ ಇರಬೇಕು ಎನ್ನುವ ಮನೋಭಾವ ಜನರಲ್ಲಿರುವಾಗ, ಸಿಬ್ಬಂದಿ ಹೇಳಿದಂತೆ ಕೇಳಲೇಬೇಕಾದ ಪರಿಸ್ಥಿತಿಯು ಸಿಟ್ಟನ್ನು ಮೂಡಿಸಿ ಸಣ್ಣ ಪುಟ್ಟ ಪ್ರಕರಣವೂ ದೊಡ್ಡದಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಪ್ರಯಾಣಕ್ಕೆ ಮುನ್ನ ಅಥವಾ ಪ್ರಯಾಣದಲ್ಲಿ ಮದ್ಯಪಾನ ಸೇವನೆ ಈ ಹಿಂಸಾತ್ಮಕ ಪ್ರವೃತ್ತಿಗೆ ಮುಖ್ಯ ಕಾರಣ. ಸಾವಿರಾರು ಅಡಿ ಎತ್ತರದಲ್ಲಿ, ಕಡಿಮೆ ಒತ್ತಡದಲ್ಲಿ ಮದ್ಯಪಾನದ ಪರಿಣಾಮಗಳು ತೀವ್ರವಾಗಿ ಕಾಣಿಸಿಕೊಳ್ಳುತ್ತವೆ. ಜತೆಗೆ ಮಿತಿಮೀರಿ ಮದ್ಯಸೇವನೆಯೂ ಕಂಡುಬರುತ್ತದೆ. ಇದರಿಂದ ಎಲ್ಲಿ, ಹೇಗೆ, ಯಾರು ಎಂಬ ವಿವೇಚನೆಯನ್ನೇ ಕಳೆದುಕೊಂಡು ಜನರು ವರ್ತಿಸುವುದು ಸಾಮಾನ್ಯ. ಆಹಾರದ ವಿಷಯದಲ್ಲಿಯೂ ಬಹಳಷ್ಟು ಗಲಾಟೆಗಳಾಗುವುದು ಸಹಜವೇ. ವಿಮಾನ ಹಾರುತ್ತಿರುವಾಗ ಆಹಾರವನ್ನು ಅಲ್ಲಿಯೇ ತಯಾರಿಸಲು ಸಾಧ್ಯವಿಲ್ಲ. ಏನಿದ್ದರೂ ಬಿಸಿ ಮಾಡಿಕೊಡಲು ಸಾಧ್ಯ. ಅನೇಕ ವಿಮಾನಗಳಲ್ಲಿ ಟಿಕೆಟ್ ಜತೆಗೇ ತಿಂಡಿ, ಊಟಕ್ಕೂ ಮುಂಗಡವಾಗಿ ಕಾಯ್ದಿರಿಸಬೇಕು. ಇಲ್ಲದಿದ್ದಲ್ಲಿ ಸಿಗುವುದು ಸೀಮಿತ ಆಯ್ಕೆಗಳು ಮಾತ್ರ. ಹೆಚ್ಚಿನವುಗಳಲ್ಲಿ ಆಹಾರಕ್ಕೆ ದುಡ್ಡನ್ನು ಕೂಡ ನೀಡಬೇಕು. ಇದರ ಅರಿವಿಲ್ಲದೇ ಹೆಚ್ಚಿನ ದುಡ್ಡನ್ನು ನೀಡಿಯೂ ತಮಗೆ ಬೇಕಾದ ಆಹಾರದ ಆಯ್ಕೆ ಅಥವಾ ಗುಣಮಟ್ಟ ಸಿಗದೇ ಇದ್ದಾಗ ನಿರಾಸೆಯಾಗುವುದು ಸಹಜವೇ. ಹೀಗಾಗಿ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗುತ್ತದೆ.

ಈ ಎಲ್ಲಾ ಆಕ್ರೋಶಕ್ಕೆ ಗುರಿಯಾಗುವವರು ವಿಮಾನದ ಸಿಬ್ಬಂದಿ ವರ್ಗ. ಎಂತಹ ಸಮಯದಲ್ಲೂ ಸಂಯಮ ಕಳೆದುಕೊಳ್ಳದೇ ಕಾರ್ಯ ನಿರ್ವಹಿಸಲು ಅವರು ತರಬೇತಿ ಪಡೆದಿರುತ್ತಾರೆ ಎಂಬುದು ನಿಜವೇ. ಆದರೆ ಅವರೂ ಮನುಷ್ಯರೇ! ಸಾವಿರಾರು ಅಡಿ ಎತ್ತರದಲ್ಲಿ ಎಲ್ಲರನ್ನೂ ನಿಭಾಯಿಸಬೇಕಾದ ದೊಡ್ಡ ಹೊಣೆ ಅವರದ್ದು. ಪ್ರಯಾಣಿಕರು ತಮಗಾದ ತೊಂದರೆಯನ್ನು ಗಮನಕ್ಕೆ ತರುವುದು, ಅದಕ್ಕೆ ಬದಲಿ ವ್ಯವಸ್ಥೆ, ಪರಿಹಾರ ನಿರೀಕ್ಷಿಸುವುದು ಸರಿ. ಆದರೆ ಬೈಗುಳ, ದೈಹಿಕ ಹಿಂಸೆ ಖಂಡಿತಾ ತಪ್ಪು. ಒಂದೊಮ್ಮೆ ಸಿಬ್ಬಂದಿಯ ವರ್ತನೆ ಸರಿ ಇಲ್ಲದಿದ್ದಲ್ಲಿ ಪರಿಸ್ಥಿತಿಯನ್ನು ತಾವೇ ಕೈಗೆತ್ತಿಕೊಳ್ಳುವ ಬದಲು ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ. ತಾಳ್ಮೆ ಕಳೆದುಕೊಂಡು ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಎಲ್ಲರ ಜೀವಕ್ಕೆ ಸಂಚಕಾರ ಎಂಬುದನ್ನು ನೆನಪಿನಲ್ಲಿಡಬೇಕು.

ವಿಮಾನಯಾನಕ್ಕೆ ಮೊದಲು ಪ್ರಯಾಣಿಕರಿಗೆ ವಾಸ್ತವದ ಅರಿವಿರುವುದು ಅವಶ್ಯಕ. ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆಯೂ ಅಗತ್ಯ. ವಿಮಾನಯಾನ ಸಂಸ್ಥೆಗಳು, ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು ಮತ್ತು ಯಾವುದೇ ಬದಲಾವಣೆಯ ಕುರಿತು ಮೊದಲೇ ತಿಳಿಸಿದಲ್ಲಿ ಅದನ್ನು ಸ್ವೀಕರಿಸುವುದು ಸುಲಭ. ಪ್ರಯಾಣಿಕರ ಜೊತೆಗೆ ಸಿಬ್ಬಂದಿಯ ಸ್ಪಷ್ಟ ಮತ್ತು ಸಮಯಕ್ಕೆ ಸೂಕ್ತ ಸಂವಹನ, ಸೌಜನ್ಯಯುತ ವರ್ತನೆ ಈ ರೀತಿಯ ಸನ್ನಿವೇಶಗಳನ್ನು ತಿಳಿಗೊಳಿಸಬಹುದು. ಇದರೊಂದಿಗೆ ಆರಾಮದಾಯಕವಾದ ಆಸನಗಳು, ಅಗತ್ಯ ಪ್ರಮಾಣ, ಗುಣಮಟ್ಟದ ಆಹಾರ ಪೂರೈಕೆ, ಮದ್ಯಸೇವನೆಗೆ ನಿಯಂತ್ರಣ ಹಾಗೂ ಕ್ಯಾಬಿನ್ ಒಳಗಿನ ಉಷ್ಣತೆ ಸರಿಯಾಗಿದ್ದಲ್ಲಿ ಹಲವಾರು ಸಂದರ್ಭಗಳನ್ನು ತಡೆಯಲು ಖಂಡಿತವಾಗಿಯೂ ಸಾಧ್ಯವಿದೆ. ಜತೆಗೇ ಸಿಬ್ಬಂದಿಗೆ ಈ ರೀತಿಯ ವ್ಯಕ್ತಿ ಅಥವಾ ಸಂದರ್ಭಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಮತ್ತು ಸಮರ್ಥವಾಗಿ ಎದುರಿಸುವ ವಿಶೇಷ ತರಬೇತಿಯನ್ನು ನೀಡಬೇಕು.

ಒಂದೊಮ್ಮೆ ಘಟನೆಗಳು ಹಿಂಸಾತ್ಮಕವಾಗಿ ತಿರುಗಿದರೆ ಯಾವ ರೀತಿ ನಿಭಾಯಿಸಬೇಕು ಎಂಬ ಅರಿವು ಅಗತ್ಯ. ಅವಶ್ಯವಿದ್ದಲ್ಲಿ ಕಾನೂನು ಮತ್ತು ರಕ್ಷಣಾ ವ್ಯವಸ್ಥೆಯ ನೆರವನ್ನು ಕೂಡ ಪಡೆಯುವುದು ಒಳ್ಳೆಯದು.
ಒಟ್ಟಿನಲ್ಲಿ ಸುರಕ್ಷಿತ, ಸಂತೋಷದಾಯಕ ಪ್ರಯಾಣ ಎಲ್ಲರದ್ದಾಗಲಿ. ಹಾಗಾಗಲು ಸಂಯಮ, ಸಮಾಧಾನ ಜತೆಗಿರಲಿ!

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.