ಚುನಾವಣೆಯೊಂದು ಎದುರಿಗಿದೆ. ಸುಮಾರು ನಾಲ್ಕು ವರ್ಷದ ಹಿಂದೆ ಮತದಾನ ಮಾಡಲು ಮತದಾನ ಕೇಂದ್ರಕ್ಕೆ ಹೋದಾಗ ನಡೆದ ಪ್ರಕರಣವೊಂದು ನೆನಪಾಗುತ್ತಿದೆ. ಅಲ್ಲಿ ಒಬ್ಬ ಮತದಾರನಿಗೂ ಮತಗಟ್ಟೆ ಅಧಿಕಾರಿಗೂ ಒಂದು ಸಣ್ಣ ಮಾತಿನ ಚಕಮಕಿ. ಆ ಮತದಾರನ ವೋಟನ್ನು ಯಾರೋ ಹಾಕಿ ಹೋಗಿದ್ದಾರೆ. ಆನಂತರ ಬಂದ ಆ ವ್ಯಕ್ತಿಯ ಗುರುತು ಖಚಿತಪಡಿಸಿಕೊಂಡು ಮತಗಟ್ಟೆ ಅಧಿಕಾರಿ ಅವನಿಗೆ ಟೆಂಡರ್ ವೋಟು ಹಾಕಲು ಅವಕಾಶ ಕೊಟ್ಟಿದ್ದಾರೆ (ತನ್ನ ಮತವನ್ನು ಯಾರೋ ಹಾಕಿ ಹೋದಾಗ ಆ ಮತದಾರ ಮತ ಚಲಾಯಿಸಲು ಇರುವ ಅವಕಾಶ ಟೆಂಡರ್ ವೋಟು). ಆದರೆ ಆ ವ್ಯಕ್ತಿ ಅದಕ್ಕೆ ಒಪ್ಪುತ್ತಿಲ್ಲ.
‘ನಾನು ಸರಿಯಾದ ವ್ಯಕ್ತಿ, ನನಗೆ ಎಲ್ಲರಂತೆ ಮತದಾನಕ್ಕೆ ಅವಕಾಶ ಕೊಡಿ. ನಾನೇಕೆ ಟೆಂಡರ್ ವೋಟು ಹಾಕಲಿ’ ಎಂದು ಪ್ರಶ್ನಿಸುತ್ತಿದ್ದಾನೆ. ‘ನನ್ನ ಬದಲಿಗೆ ನೀವು ಯಾರಿಗೋ ವೋಟು ಹಾಕಲು ಅವಕಾಶ ಕೊಟ್ಟಿದ್ದೀರಿ. ಅವರನ್ನು ಸರಿಯಾಗಿ ಗುರುತಿಸಲಾಗಿಲ್ಲ ಅಂದರೆ ಅದು ನಿಮ್ಮ ತಪ್ಪು. ಅದಕ್ಕೆ ನಾನೇಕೆ ಹೊಣೆಗಾರನಾಗಬೇಕು? ಎಲ್ಲರಂತೆ ವೋಟು ಮಾಡುವುದು ನನ್ನ ಹಕ್ಕು’ ಎಂದ ಆತ.
ನಂತರ ಅವನನ್ನು ಸಮಾಧಾನಪಡಿಸಿ, ಅರ್ಥ ಮಾಡಿಸಿ, ಟೆಂಡರ್ ವೋಟು ಹಾಕಿಸಿ ಕಳುಹಿಸಲಾಯಿತು. ಯಾಕೆ ಇಂತಹ ತಪ್ಪುಗಳಾಗುತ್ತವೆ ಎಂಬ ಮತದಾರರೊಬ್ಬರ ಪ್ರಶ್ನೆಗೆ, ‘ಹದಿನೆಂಟು ವರ್ಷದಲ್ಲೊ ಇಪ್ಪತ್ತು ವರ್ಷದಲ್ಲೊ ಮತದಾರರ ಪಟ್ಟಿಗೆ ಅವರ ಫೋಟೊ ಸೇರಿಸಲಾಗಿರುತ್ತದೆ. ಕಾರ್ಡಿನಲ್ಲೂ ಅದೇ ಫೋಟೊ ಇರುತ್ತದೆ. ನಲವತ್ತನೇ ವಯಸ್ಸಿಗೂ ಅದೇ ಕಾರ್ಡ್ ಹಿಡಿದು ಬರುತ್ತಾರೆ. ಮುಖ ಅಷ್ಟೊ ಇಷ್ಟೊ ಬದಲಾಗಿರುತ್ತದೆ. ಕಪ್ಪು ಬಿಳುಪಿನ ಹಳೆಯ ಫೋಟೊ. ಕೆಲವರನ್ನು ಗುರುತಿಸಲು ಕಷ್ಟವಾಗುತ್ತದೆ. ಏಜೆಂಟರು ಕೆಲವೊಮ್ಮೆ ಸರಿಯಾಗಿ ಸಹಕರಿಸುವುದಿಲ್ಲ’ ಎಂಬ ಉತ್ತರ ಬಂತು.
ಫೋಟೊ ಸಹಿತ ಮತದಾರರ ಪಟ್ಟಿ ಮತ್ತು ಗುರುತಿನ ಚೀಟಿಗೆ ಚಾಲನೆ ದೊರೆತದ್ದು ಒಂದು ಅದ್ಭುತ ಬದಲಾವಣೆ. ಅಲ್ಲಿಂದ ಇದರಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಆದರೆ ಕಾಲಕಾಲಕ್ಕೆ ಮತದಾರರ ಪಟ್ಟಿಯಲ್ಲಿ ಮತ್ತು ಗುರುತಿನ ಚೀಟಿಯಲ್ಲಿ ಮತದಾರನ ಫೋಟೊ ಬದಲಿಸುವುದು ಕಡ್ಡಾಯವಾಗಬೇಕು (ಈಗ ಮತದಾರ ಬೇಕಾದರೆ ಮಾತ್ರ ಬದಲಿಸಿಕೊಳ್ಳಲು ಅವಕಾಶ ಇದೆ). ಹಾಗೆ ಮಾಡುವುದರಿಂದ ಮತದಾನ ಮಾಡಲು ಬರುವ ವ್ಯಕ್ತಿಯನ್ನು ನಿಖರವಾಗಿ ಗುರುತಿಸಲು ಸಹಾಯವಾಗುತ್ತದೆ.
ಮತದಾರರ ಪಟ್ಟಿಯಲ್ಲೂ ಗುರುತಿನ ಚೀಟಿಯಲ್ಲೂ ಬಣ್ಣದ ಫೋಟೊ ಇರುವುದು ಒಳ್ಳೆಯದು. ಆಧಾರ್ ಲಿಂಕ್ ಮಾಡಿಯೊ ಅಥವಾ ಮತದಾನದ ದಿನ ಬೆರಳಚ್ಚಿನಿಂದ ಮತದಾರನನ್ನು ಗುರುತಿಸುವಂತಾದರೆ ಇನ್ನಷ್ಟು ನಿಖರತೆ ಸಾಧಿಸಬಹುದು. ಇದರಿಂದ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಮತ್ತು ವೋಟು ಮಾಡಲು ಬರುವ ನಕಲಿ ಮತದಾರರನ್ನು ಕಂಡುಹಿಡಿಯಬಹುದು.
ಇನ್ನೊಂದು ಗಮನಾರ್ಹ ವಿಚಾರವೆಂದರೆ, ಮತದಾನ ಮಾಡಲು ಮತಗಟ್ಟೆಗೆ ಬರುವವರಲ್ಲಿ ಕೆಲವರು ಕುಡಿದು ಬಂದಿರುತ್ತಾರೆ. ಕುಡಿದು ವಾಹನ ಚಲಾಯಿಸಿದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತದೆ. ಸ್ವತಃ ವಾಹನ ಚಲಾಯಿಸುವವರ ಜೀವ ಮತ್ತು ರಸ್ತೆಯಲ್ಲಿ ಹೋಗುವವರ ಪ್ರಾಣದ ಕಾಳಜಿ ಅದರ ಹಿಂದಿದೆ. ಆದರೆ ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವಾಗ ಈ ರೀತಿಯ ಒಂದು ನಿಯಮ ಏಕಿಲ್ಲ? ಅಂದು ಮದ್ಯದಂಗಡಿಗಳನ್ನು ಬಂದ್ ಮಾಡಲಾಗುತ್ತದೆಯಾದರೂ ಮದ್ಯ ಅದು ಹೇಗೆ ಅವರಿಗೆ ಸಿಗುತ್ತದೋ ಏನೊ? ಸದ್ಯದ ನಿಯಮಾವಳಿಯಲ್ಲಿ ಕುಡಿದು ಬಂದವರಿಗೆ ಅವಕಾಶ ನಿರಾಕರಿಸುವಂತಿಲ್ಲ. ಕುಡಿದವರ ಮನಃಸ್ಥಿತಿ ಹೇಗಿರುತ್ತದೆ? ಅವರ ಆಯ್ಕೆಯಲ್ಲಿನ ಗುಣಮಟ್ಟದ ಖಾತರಿಯೇನು? ಕುಡಿದು ಬಂದವರು ಕೂಡ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತಹ ಅವಕಾಶವಿರುವ ಪದ್ಧತಿ ಖಂಡಿತ ಬದಲಾಗಬೇಕು.
ದುರ್ಬಲ ವ್ಯಕ್ತಿಗಳು ಸಹಾಯಕರೊಂದಿಗೆ ಬಂದು ಮತ ಚಲಾಯಿಸಬಹುದು. ಎಷ್ಟೋ ಬಾರಿ ಚೆನ್ನಾಗಿರುವವರನ್ನು ದುರ್ಬಲರೆಂದು ಬಿಂಬಿಸಿ ಅವರೊಂದಿಗೆ ಬರುವ ಸಹಾಯಕರು ವೋಟನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವೂ ಇದೆ. ಇಂತಹ ಪ್ರಯತ್ನಗಳು ಮತಗಟ್ಟೆಯಲ್ಲಿ ನಮಗೆ ಕಾಣಸಿಗುತ್ತವೆ. ಇದರಲ್ಲಿ ಸ್ಪಷ್ಟ ಪಾರದರ್ಶಕತೆ ತರಲು ಏನಾದರೂ ಹೊಸ ಯೋಜನೆ ರೂಪಿಸಿದರೆ ಮತದಾನ ಇನ್ನಷ್ಟು ಪವಿತ್ರಗೊಳ್ಳಲು ಅನುಕೂಲವಾದೀತು.
1951ರಿಂದ ಇಲ್ಲಿಯವರೆಗೂ ದೇಶ ಬಹಳಷ್ಟು ಚುನಾವಣೆಗಳನ್ನು ನೋಡಿದೆ. ಭಾರತದಂತಹ ದೊಡ್ಡ ದೇಶದಲ್ಲಿ ಚುನಾವಣೆ ನಡೆಸುವುದು ಸುಲಭದ ಕಾರ್ಯವಲ್ಲ. ಯಶಸ್ವಿ ಚುನಾವಣೆಗಳ ಖ್ಯಾತಿ ಚುನಾವಣಾ ಆಯೋಗಕ್ಕೆ ಸಲ್ಲಬೇಕು. ಪ್ರತೀ ಬಾರಿ ಚುನಾವಣೆ ಏನಾದರೊಂದು ಹೊಸತನವನ್ನು ಹೊತ್ತುಕೊಂಡೇ ಬಂದಿರುತ್ತದೆ. ನಾವು ಚುನಾವಣಾ ಕ್ರಮದಲ್ಲಿ ಬಹಳಷ್ಟು ಬದಲಾಗಿದ್ದೇವೆ. ಜಗತ್ತು ನಮ್ಮ ಚುನಾವಣೆಯನ್ನು ಬೆರಗಿನಿಂದ ನೋಡುತ್ತದೆ. ಮತಯಂತ್ರಗಳ ಆವಿಷ್ಕಾರ ಒಂದು ಅದ್ಭುತ ಬದಲಾವಣೆ.
ಕಾಲ ಬದಲಾದಂತೆ ಆಧುನಿಕತೆ ಮತ್ತು ವಿಜ್ಞಾನವು ನಮ್ಮ ಜೊತೆಗಿವೆ. ಮತದಾರರ ಪಟ್ಟಿ ಪರಿಷ್ಕರಣೆ, ಆನ್‌ಲೈನ್ ಮತದಾನದಂತಹ ಕಾರ್ಯಗಳಿಗೆ ಅವನ್ನು ಬಳಸಿಕೊಂಡಿದ್ದೇ ಆದರೆ, ನಮ್ಮ ಚುನಾವಣೆಗಳು ಮತ್ತಷ್ಟು ನಿಖರವಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.