‘ಒಂದು ತಿಂಗಳಲ್ಲಿ 10 ಕೆ.ಜಿ. ತೂಕ ಕಳೆದುಕೊಳ್ಳಿ’, ‘ಎಷ್ಟು ಬೇಕೋ, ಏನು ಬೇಕೋ ತಿನ್ನಿ, ಆದರೆ ದಪ್ಪ ಮಾತ್ರ ಆಗದಿರಲು ಈ ಹೆಲ್ತ್ ಟಾನಿಕ್ ತೆಗೆದುಕೊಳ್ಳಿ’, ‘ನಿಮ್ಮ ಡ್ರೆಸ್ ಸೈಜ್ ಒಂದು ದಿನಕ್ಕೆ ಚಿಕ್ಕದು ಮಾಡಿಕೊಳ್ಳಿ’, ಇವೆಲ್ಲ ಸುಲಭ-ಶೀಘ್ರ ತೂಕ ಕಳೆದುಕೊಳ್ಳು
ವಿಕೆಯ ಆಕರ್ಷಕ ಜಾಹೀರಾತುಗಳು.
ಒಂದೆಡೆ, ‘ತೆಳ್ಳಗಾಗಲು ಯಾವುದಾದರೂ ಮಾತ್ರೆ ಕೊಡಿ ಡಾಕ್ಟ್ರೇ’ ಎಂದರೆ ‘ಮಾತ್ರೆ ಗೀತ್ರೆ ಇಲ್ಲ, ನೀವು ಪ್ರತಿನಿತ್ಯ ಎದ್ದು ಬೆಳಿಗ್ಗೆ ಕನಿಷ್ಠ 3-4 ಕಿ.ಮೀ. ನಡೆಯಿರಿ, ಹಿತಮಿತವಾಗಿ ತಿನ್ನಿ’ ಎನ್ನುವ ವೈದ್ಯರು; ಇನ್ನೊಂದೆಡೆ, ತೆಳ್ಳಗಾಗಲು ಪವಾಡದಂತಹ ಪರಿಹಾರ ನೀಡುವ ‘ಪೂರಕ ಆಹಾರ’ಗಳು (ಸಪ್ಲಿಮೆಂಟ್) ಮತ್ತು ಸಾಧನಗಳು. ಜನ ಯಾವುದನ್ನು ಆಯ್ದುಕೊಂಡಾರು?! ಉತ್ತರ ಸುಲಭ. ಇದ್ದಕ್ಕಿದ್ದಂತೆ ತೆಳ್ಳಗಾಗಿ, ಒಮ್ಮೆಲೇ ತಮ್ಮ ‘ಒರಿಜಿನಲ್’ ರೂಪದ ಮಿನಿಯೇಚರ್‌ಗಳಂತೆ ವೈದ್ಯರ ಮುಂದೆ ಬರುವ ಜನರೀಗ ಹೆಚ್ಚಾಗಿದ್ದಾರೆ.
ತೂಕ ಹೆಚ್ಚುವುದರಿಂದ, ದೇಹದಲ್ಲಿನ ಕೊಲೆಸ್ಟರಾಲ್ ಅಂಶ ಜಾಸ್ತಿಯಾಗುವುದರಿಂದ, ಪ್ರಾಣಾಪಾಯ ತರಬಲ್ಲ, ದೀರ್ಘಕಾಲಿಕ ಅಸಮರ್ಥತೆಗೆ ಕಾರಣವಾಗಬಲ್ಲ ಕಾಯಿಲೆಗಳ ಸಾಧ್ಯತೆ ಹೆಚ್ಚುತ್ತದೆ. ಹಾಗಾಗಿ ‘ಆರೋಗ್ಯಕ್ಕಾಗಿ ನಾವು ತೂಕ ಕಡಿಮೆ ಮಾಡಿ
ಕೊಳ್ಳಬೇಕು’ ಎಂಬ ಆತಂಕ ಜನರನ್ನು ಸಹಜವಾಗಿ ಕಾಡುತ್ತದೆ. ಆದರೆ ವ್ಯಾಯಾಮದ ಶಿಸ್ತು, ಹಿತಮಿತವಾದ ಆಹಾರ ಕ್ರಮಗಳನ್ನು ನಿಯಮಿತವಾಗಿ ರೂಢಿಸಿಕೊಳ್ಳುವುದು ಬಹುಜನರಿಗೆ ಸುಲಭವಲ್ಲ. ನೂರೊಂದು ಕೆಲಸ, ನಾಲಿಗೆ ಚಪಲ, ಬೆಳಗಿನ ಸವಿ ನಿದ್ರೆ ಇವುಗಳನ್ನು ಬದಿಗಿಟ್ಟು ವ್ಯಾಯಾಮ- ಆಹಾರದ ಶಿಸ್ತನ್ನು ಸದಾ ಪಾಲಿಸುವುದು ಕಷ್ಟವೇ.
ಹೀಗೆ ಅತ್ತ ತೂಕ ಕಳೆದುಕೊಳ್ಳಬೇಕು, ಇತ್ತ ಶಿಸ್ತೂ ಸಾಧ್ಯವಾಗದು ಎಂಬ ಗೊಂದಲದಿಂದ ಹೊಯ್ದಾಡುವ ಮನಸ್ಸುಗಳನ್ನು ಓಲೈಸಿ, ಲಾಭ ಪಡೆದುಕೊಳ್ಳುವ ವ್ಯಾಪಾರಿ ತಂತ್ರಗಳು ಹೆಚ್ಚುತ್ತಿವೆ. ಅಚ್ಚರಿಯ ಮಾತೆಂದರೆ, ಬಹುಜನ ಇಂತಹ ಉತ್ಪನ್ನಗಳಿಗೆ ಮೊರೆ ಹೋಗುವ ಪ್ರಾಥಮಿಕ ಉದ್ದೇಶ ಆರೋಗ್ಯದ ಸಮಸ್ಯೆಗಳಲ್ಲ. ಅದರ ಬದಲು, ತೆಳ್ಳಗಾಗಿ ತಮ್ಮ ದೇಹವನ್ನು ‘ಸುಂದರ’ವಾಗಿಸಿಕೊಳ್ಳಬೇಕು ಎನ್ನುವ ಹಂಬಲ.
ಕೋವಿಡ್ ನಂತರದ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳ ಕುರಿತ ಅಧ್ಯಯನವೊಂದು ‘ಆದರ್ಶ ದೇಹ’ ಎಂದರೆ ಈಗ ಕೊಬ್ಬಿರದ ದೇಹವಷ್ಟೇ ಅಲ್ಲ, ಅದರೊಂದಿಗೆ ‘ಮಸಲ್ಸ್’ (ಬಲಿಷ್ಠ ಸ್ನಾಯು) ಇರುವ ದೇಹ ಎಂದು ದಾಖಲಿಸಿದೆ. ಕೊಬ್ಬಿನ ಕುರಿತು ಭಯ ಮತ್ತು ಕೊಬ್ಬಿನ ಅಂಶದ ಬಗ್ಗೆ ಪೂರ್ವಗ್ರಹಗಳನ್ನೂ ಈ ಅಧ್ಯಯನ ಗುರುತಿಸಿದೆ. ಇದು ವಿಶೇಷವಾಗಿ ಹದಿಹರೆಯದ ಮಕ್ಕಳಲ್ಲಿ ಹೆಚ್ಚು ಎಂಬುದನ್ನು ಗುರುತಿಸಿರುವುದು ನಮಗೆ ಯಾವ ಅಚ್ಚರಿಯನ್ನೂ ತರಲಾರದು.
ಶೀಘ್ರವಾಗಿ ತೂಕವನ್ನು ಇಳಿಸುವ ಪ್ರಕ್ರಿಯೆಯು ದೇಹ- ಮನಸ್ಸುಗಳ ಆರೋಗ್ಯಕ್ಕೆ ಸವಾಲೆಸೆಯುತ್ತದೆ. ಆಹಾರವನ್ನೇ ಬಿಡುವ, ಪಿಷ್ಟವಿರದ (no carbs diet– ಅನ್ನ-ಚಪಾತಿ-ಮುದ್ದೆಗಳಿರದ ಊಟ!) ಆಹಾರ ಸೇವಿಸುವ, ಅರ್ಧ ಚಮಚೆ ಎಣ್ಣೆಯನ್ನಷ್ಟೇ ಬಳಸುವ ಛಲವಾದಿಗಳು ಕೆಲವರಿರಬಹುದು. ಉಳಿದವರಿಗೆ ಈ ಹಟ ತಾತ್ಕಾಲಿಕ. ಹಿತಮಿತವಾಗಿ ತಿನ್ನುವ, ನಾಲಿಗೆಗೆ ಒಂದಷ್ಟು ಕಡಿವಾಣ ಹಾಕುವ ಶಿಸ್ತು ಬೆಳೆಯಬೇಕಾದ್ದು ಬಾಲ್ಯದಿಂದ. ಆಹಾರವನ್ನು ಆನಂದಿಸುವುದು, ಆಹಾರದೊಂದಿಗೆ ಸಂಬಂಧ- ಮಾತುಕತೆಗಳನ್ನು ಬೆಸೆಯುವ ಅಭ್ಯಾಸವು ಕೌಟುಂಬಿಕ ವಾತಾವರಣದಲ್ಲಿ ಬೆಳೆದು ಬರಬೇಕಾದ್ದು ಅತ್ಯವಶ್ಯ.
14 ವರ್ಷಗಳ ಕಾಲ ನಡೆದ ಸುದೀರ್ಘ ಅಧ್ಯಯನವೊಂದು ಮೂರು ಮುಖ್ಯ ಜೀವನಶೈಲಿಯ ಅಭ್ಯಾಸಗಳಿಗೂ ಸಾವಿನ ಸಾಧ್ಯತೆಗೂ ಇರುವ ಸಂಬಂಧವನ್ನು ಪರಿಶೀಲಿಸಿತು. ಹಣ್ಣು- ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು, ಪ್ರತಿವಾರ 5 ದಿನಗಳ ಕಾಲ ವ್ಯಾಯಾಮ ಮಾಡುವುದು, ಧೂಮಪಾನ- ಮದ್ಯಪಾನ ಮಾಡದಿರುವುದು, ಇವು ಆ ಅಂಶಗಳು. ದಪ್ಪ ಇದ್ದವರೂ ಇವುಗಳನ್ನು ನಿಯಮಿತವಾಗಿ ರೂಢಿಸಿಕೊಂಡರೆ ಸಾವಿನ ಅಪಾಯದ ಸಾಧ್ಯತೆಯು ತೂಕ ಸಹಜವಾಗಿದ್ದವರಲ್ಲಿ ಇರುವಷ್ಟಕ್ಕೇ ಇಳಿದುಬಿಡುತ್ತದೆ ಎಂದು ಅಧ್ಯಯನ ಗುರುತಿಸಿದ್ದು ಗಮನಾರ್ಹ.
ಆತಂಕಕಾರಿಯಾದ ಇನ್ನೊಂದು ವಿಷಯವೆಂದರೆ, ಹಿತಮಿತ ಆಹಾರ-ವ್ಯಾಯಾಮಗಳ ಬದಲು ಶೀಘ್ರ ತೂಕ ಕಳೆದುಕೊಳ್ಳುವಿಕೆಗಾಗಿ ಪೂರಕ ಆಹಾರ ತೆಗೆದುಕೊಳ್ಳುವವರಲ್ಲಿ ಕಾಣಿಸುತ್ತಿರುವ ವಿವಿಧ ಆರೋಗ್ಯ ಸಮಸ್ಯೆಗಳು. ‘ಪೂರಕ ಆಹಾರ’ಗಳನ್ನು ಅಮೆರಿಕದ ಎಫ್‌ಡಿಎ (ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸೇರಿದಂತೆ ಗುಣಮಟ್ಟ ಪರಿಶೀಲಿಸುವ- ನಿಯಂತ್ರಿಸುವ ಯಾವ ಸಂಸ್ಥೆಯೂ ಔಷಧಿಗಳಂತೆ ಕಟ್ಟುನಿಟ್ಟಾದ ಟ್ರಯಲ್‍ಗಳನ್ನು ಹಾದುಹೋಗುವಂತೆ ಮಾಡುತ್ತಿಲ್ಲ. ಹಾಗಾಗಿ ಇವುಗಳನ್ನು ಸೇವಿಸಿದ ಜನರಲ್ಲಿ ಕಾಣುವ ಅತಿ ಶೀಘ್ರ ತೂಕ ಕಳೆದುಕೊಳ್ಳುವಿಕೆಯ ದೀರ್ಘ ಪರಿಣಾಮ, ಆರೋಗ್ಯ ಸಮಸ್ಯೆಗಳ ಬಗೆಗೆ ಅಧ್ಯಯನಗಳಾಗಲೀ ಮಾಹಿತಿಯಾಗಲೀ ಹೊರಬರುತ್ತಿಲ್ಲ.
ಆದ್ದರಿಂದಲೇ ನಾವು ಎಚ್ಚರದಿಂದಿದ್ದು, ಅನಾದಿ ಕಾಲದಿಂದ ನಮಗೆ ಗೊತ್ತಿರುವ ‘ವ್ಯಾಯಾಮ-ಆಹಾರ’ಗಳ ಶಿಸ್ತನ್ನೇ ರೂಢಿಸಿಕೊಳ್ಳದೆ ಗತ್ಯಂತರವಿಲ್ಲ. ಬೆಳೆಯುವ ಮಕ್ಕಳಿಗೂ ಇದನ್ನೇ ಕಲಿಸುವುದು ಹಿರಿಯರ ಕರ್ತವ್ಯ. ‘ಪೂರಕ ಆಹಾರ’, ಶೀಘ್ರ ತೂಕ ಕಳೆದು
ಕೊಳ್ಳುವ ಸಾಧನಗಳಿಂದ ತೂಕಕ್ಕೆ ಮ್ಯಾಜಿಕ್ ಪರಿಹಾರ, ಅದರೊಂದಿಗೆ ‘ಒಂದು ಕೊಂಡರೆ ಇನ್ನೊಂದು ಉಚಿತ’ ಎಂಬಂತೆ ಅನಾರೋಗ್ಯವೂ ಜೊತೆಗೆ ಬಂದೀತು ಎಂಬ ಎಚ್ಚರ ಅತ್ಯಗತ್ಯ.
ಲೇಖಕಿ: ಮನೋವೈದ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.