ಹೆಬ್ರಿ ಮತ್ತೊಮ್ಮೆ ಸದ್ದು ಮಾಡಿದೆ. ಕಾರ್ಕಳ ಸಮೀಪದ ಕಾಡಂಚಿನ ಈ ಪ್ರಶಾಂತ ಪರಿಸರದಲ್ಲಿ ಇನ್ನೊಮ್ಮೆ ನೆತ್ತರಿನ ಕೋಡಿ ಹರಿದಿದೆ. 21 ವರ್ಷಗಳ ಹಿಂದೆ ಇದೇ ನವೆಂಬರ್‌ನಲ್ಲಿ ಮೊದಲ ಬಾರಿಗೆ ಇಲ್ಲಿನ ನೀರವ ಮೌನವನ್ನು ಭೇದಿಸಿದ್ದ ಪೊಲೀಸರ ಗುಂಡಿನ ಸದ್ದು, ಪಶ್ಚಿಮಘಟ್ಟದಲ್ಲಿ ಸದ್ದಿಲ್ಲದೇ ಸಂಘಟಿತವಾಗಿದ್ದ ಶಸ್ತ್ರಸಜ್ಜಿತ ಹೋರಾಟದ ಸುಳಿವನ್ನು ನಾಡಿಗೆ ನೀಡಿತ್ತು. ನೆರೆಯ ಆಂಧ್ರದಿಂದ ಕೋಲಾರ– ತುಮಕೂರು– ರಾಯಚೂರು ಭಾಗದಲ್ಲಷ್ಟೇ ವ್ಯಾಪಿಸಿದೆ ಎಂದುಕೊಂಡಿದ್ದ ನಕ್ಸಲ್ ಚಳವಳಿ, ಪಶ್ಚಿಮಘಟ್ಟದಲ್ಲೂ ಬಲವಾಗಿ ಬೇರುಬಿಟ್ಟಿದ್ದು ಜಗಜ್ಜಾಹೀರಾಗಿತ್ತು.
ಈ ಚಳವಳಿಯ ವಿರುದ್ಧ ರಾಜ್ಯದಲ್ಲಿ ನಡೆದ ಪೊಲೀಸರ ಆ ಮೊದಲ ಎನ್‌ಕೌಂಟರ್‌ನಲ್ಲಿ ಪಾರ್ವತಿ, ಹಾಜಿಮಾ ಎಂಬಿಬ್ಬರು ಯುವತಿಯರು ಬಲಿಯಾದದ್ದನ್ನು ನಾಡಿನ ಜನ ನಿಬ್ಬೆರಗಾಗಿ ನೋಡಿದ್ದರು. ಅಲ್ಲಿಂದೀಚೆಗೆ ಚಿಕ್ಕಮಗಳೂರು– ಮಂಗಳೂರು– ಉಡುಪಿ ಭಾಗದ ಕಾಡಂಚಿನಲ್ಲಿ ವ್ಯಾಪಕವಾಗಿ ಆರಂಭವಾದ ಹಿಂಸಾಸರಣಿ ಇದೀಗ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗುವುದರೊಂದಿಗೆ ಒಂದು ಸುತ್ತು ಬಂದು ನಿಂತಿದೆ. ಹತ್ತಾರು ನಕ್ಸಲರು, ಪೊಲೀಸರನ್ನು ಬಲಿ ಪಡೆದ ಕ್ರಾಂತಿಕಾರಿ ಚಳವಳಿಗೆ ಈ ಎರಡು ದಶಕಗಳ ಹೋರಾಟದಲ್ಲಿ ಸಿಕ್ಕಿದ್ದಾದರೂ ಏನು? ಇವರ ಹುಟ್ಟಡಗಿಸುವ ಶಪಥ ತೊಟ್ಟ ಸರ್ಕಾರ ಸಾಧಿಸಿದ್ದಾದರೂ ಏನನ್ನು? ಆಡಳಿತಗಾರರು ಮತ್ತು ಚಳವಳಿಗಾರರು ಇಬ್ಬರೂ ಈ ಪ್ರಶ್ನೆಯನ್ನು ಎದೆಮುಟ್ಟಿ ಕೇಳಿಕೊಳ್ಳಬೇಕಾಗಿದೆ.
2000ದ ಸುಮಾರಿಗೆ, ಒಕ್ಕಲಿನ ಭೀತಿ ಎದುರಿಸು ತ್ತಿದ್ದ ಕಾಡಂಚಿನ ಗ್ರಾಮಸ್ಥರನ್ನು ಸಂಘಟಿಸತೊಡಗಿದ ನಕ್ಸಲರಿಗೆ ಆರಂಭದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದರಲ್ಲಿ ಅತಿಶಯೋಕ್ತಿಯೇನಿರಲಿಲ್ಲ. ಆದರೆ ಬರಬರುತ್ತಾ ಅವರ ಉಪಟಳ ಮಿತಿಮೀರುತ್ತಿದೆ ಎನಿಸತೊಡಗಿ ದಾಗ, ಪ್ರಮುಖ ನಾಯಕ ಸಾಕೇತ್ ರಾಜನ್ ಸೇರಿದಂತೆ ತಂಡದ ಹಲವರನ್ನು ಪೊಲೀಸರು ಹೊಡೆದುರುಳಿಸಿದ್ದು,
ಹೋರಾಟದ ರಕ್ತಸಿಕ್ತ ಅಧ್ಯಾಯವನ್ನಷ್ಟೇ ಅಲ್ಲ ಈ ಭಾಗದ ಅಖಂಡ ಸಮಸ್ಯೆಗಳಿಗೂ ಕನ್ನಡಿ ಹಿಡಿದಿತ್ತು.
ಅಲ್ಲಿಂದೀಚೆಗೆ ಇದನ್ನು ಸಾಮಾಜಿಕ– ಆರ್ಥಿಕ ಸಮಸ್ಯೆ ಎಂದು ಬಣ್ಣಿಸತೊಡಗಿದ ಸರ್ಕಾರ, ಕೋಟ್ಯಂತರ ರೂಪಾಯಿಯ ಸರಣಿ ಅಭಿವೃದ್ಧಿ ಪ್ಯಾಕೇಜ್‌ಗಳನ್ನು ಘೋಷಿಸಿತು. ಐಎಎಸ್ ಅಧಿಕಾರಿಯಾಗಿದ್ದ ಚಿರಂಜೀವಿ ಸಿಂಗ್ ಅವರ ವರದಿ ಆಧರಿಸಿ, ಅಭಿವೃದ್ಧಿಗೆ ಪೂರಕವಾದ ಭರವಸೆಗಳು ಹರಿದುಬಂದವು. ಎಲ್ಲೆಡೆ ಎಲ್ಲ ಸಚಿವರೂ ಮಾಧ್ಯಮಗಳ ಮುಂದೆ ಇದೇ ಮಂತ್ರ ಜಪಿಸತೊಡಗಿ
ದರು. ಇದನ್ನೆಲ್ಲಾ ಕಂಡು, ಹಕ್ಕುಪತ್ರದ ಜೊತೆಗೆ ಮೂಲ ಸೌಲಭ್ಯಗಳನ್ನೂ ಒದಗಿಸಿ ಸರ್ಕಾರ ತಮ್ಮನ್ನು ಉದ್ಧರಿಸಲಿದೆ ಎಂಬ ನಂಬಿಕೆಯಿಂದ ಆದಿವಾಸಿಗಳು ನಿಟ್ಟುಸಿರುಬಿಟ್ಟಿದ್ದರು. ಆದರೆ ಆಗಿದ್ದೇನು?
ಬೆರಳೆಣಿಕೆಯಷ್ಟು ಊರುಗಳಿಗಷ್ಟೇ ಒಂದಷ್ಟು ಸೌಲಭ್ಯಗಳು ದಕ್ಕಿದವು. ಬೇಡಿಕೆ ಬೆಟ್ಟದಷ್ಟು, ಆಗಿದ್ದು ಹಿಡಿಯಷ್ಟು ಎಂಬಂತಹ ಸ್ಥಿತಿಯಲ್ಲಿ, ಸುಧಾರಣೆ ಅವರಿಗೆ ಕನಸಿನ ಮಾತೇ ಆಯಿತು. ಹಾಗಿದ್ದರೆ ಆ ಎಲ್ಲ ಪ್ಯಾಕೇಜ್‌ಗಳ ಕತೆ ಏನಾಯಿತು? ಅರಣ್ಯವಾಸಿ ಗಳನ್ನು ಸೂಕ್ತ ಸ್ಥಳಾಂತರ ಯೋಜನೆಯ ಮೂಲಕ ಮುಖ್ಯವಾಹಿನಿಗೆ ಕರೆತರುವ ಆಡಳಿತಾರೂಢರ ಮಹತ್ವಾಕಾಂಕ್ಷೆಯ ಮಾತುಗಳೆಲ್ಲ ಏನಾದವು? ಶಸ್ತ್ರ ಹಿಡಿದವರಿಗಾಗಿ ಘೋಷಿಸಿದ ಶರಣಾಗತಿ ಪ್ಯಾಕೇಜ್ ಆದರೂ ಸರಿಯಾಗಿ ಅನುಷ್ಠಾನಕ್ಕೆ ಬಂದಿದೆಯೇ ಎಂದರೆ ಇಲ್ಲೂ ಭ್ರಮನಿರಸನವೇ ಆಗುತ್ತದೆ. ಈ ವರ್ಷದ ಜನವರಿ ವೇಳೆಗೆ 14 ಮಂದಿ ಶರಣಾಗಿ ರುವುದಾಗಿ ಸರ್ಕಾರಿ ಅಂಕಿಅಂಶಗಳು ತಿಳಿಸುತ್ತವೆ. ಪರಿಹಾರದ ಹಣ, ಪ್ರೋತ್ಸಾಹಧನ, ಕೌಶಲ ತರಬೇತಿಗೆ ಆರ್ಥಿಕ ನೆರವು ನೀಡುವ ಭರವಸೆಯೊಂದಿಗೆ, 2015ರ ‘ನಕ್ಸಲರ ಶರಣಾಗತಿ’ ಪ್ಯಾಕೇಜನ್ನು ರಾಜ್ಯ ಗೃಹ ಇಲಾಖೆ ಇದೇ ವರ್ಷದ ಮಾರ್ಚ್ 14ರಂದು ಪರಿಷ್ಕರಿಸಿದೆ. ಈ ಸಂಬಂಧ ಅದು ಹೊರಡಿಸಿರುವ ಆದೇಶ ಓದುವುದಕ್ಕೇನೋ ಚೆನ್ನಾಗಿದೆ. ಆದರೆ ಶರಣಾದ ಎಷ್ಟು ಮಂದಿಗೆ ಇದರ ಪೂರ್ಣ ಪ್ರಯೋಜನ ದಕ್ಕಿದೆ?
‘ಮುಖ್ಯವಾಹಿನಿಗೆ ಬಂದ ನಾಲ್ಕೈದು ವರ್ಷಗಳ ಬಳಿಕ ನನಗೆ ಕೊಟ್ಟ 1 ಲಕ್ಷದಲ್ಲಿ 88 ಸಾವಿರ ರೂಪಾಯಿ ನನ್ನ ಮೇಲಿದ್ದ ಕೇಸುಗಳನ್ನು ನಡೆಸಿದ ಲಾಯರ್ ಫೀಸಿಗೇ ಖರ್ಚಾಗಿತ್ತು. ಸದ್ಯ ನಮಗೆ ಯಾವ ಪರಿಹಾರವೂ ಬೇಡ, ನಮ್ಮ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆದು, ನಾವು ಕೋರ್ಟಿಗೆ ಅಲೆಯುವುದನ್ನು ತಪ್ಪಿಸಿದರೆ ಸಾಕು’ ಎನ್ನುತ್ತಾರೆ ಶರಣಾದ ನಕ್ಸಲ
ರೊಬ್ಬರು. ಪರಿಹಾರದ ಘೋಷಣೆಗಳೆಲ್ಲಾ ಮೀನು ಹಿಡಿಯುವ ಗಾಳಕ್ಕೆ ಕಟ್ಟಿದ ತಿಂಡಿಯ ಆಮಿಷದಂತೆ ಶರಣಾಗತರಿಗೆ ಭಾಸವಾಗಿದ್ದರೆ ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ.
ಈ ನಡುವೆ, ಈ ಭಾಗದ ಸಮಸ್ಯೆಗಳು ಈಗ ಹಿಂದೆಂದಿಗಿಂತಲೂ ವ್ಯಾಪಕವಾಗಿವೆ. ತೆರವಿನ ಭೀತಿ,
ಮೂಲ ಸೌಲಭ್ಯಗಳ ಕೊರತೆಯಿಂದ ಆದಿವಾಸಿಗಳು, ತಳವರ್ಗದವರು ನಲುಗುತ್ತಿದ್ದರೆ, ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳಿಗೆ ತಗುಲಿರುವ ರೋಗಬಾಧೆಯಿಂದ ಬೆಳೆಗಾರರು ಕಂಗೆಟ್ಟಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿನ ಪರಿಸರವು ಸೂಕ್ಷ್ಮ ಸ್ಥಿತಿ ತಲುಪಿದ್ದರೆ, ಅಭಿವೃದ್ಧಿ ಕಾಣದ ಜನರ ಬದುಕು ಇನ್ನೊಂದು ರೀತಿಯಲ್ಲಿ ಸೂಕ್ಷ್ಮವಾದ ಹಂತಕ್ಕೆ ಬಂದು ನಿಂತಿದೆ. ಅಷ್ಟರನಡುವೆಯೂ ಶಸ್ತ್ರಸಜ್ಜಿತ ಹೋರಾಟದ ಕಾವು ತಗ್ಗಿರುವುದಕ್ಕೆ, ಪ್ರಜಾಪ್ರಭುತ್ವದಲ್ಲಿ ಇಂಥ ಅರ್ಥರಹಿತ ಭೂಗತ ಹೋರಾಟಗಳಿಗೆ ನೆಲೆಯಿಲ್ಲ ಎಂಬ ವಾದದಲ್ಲಿ ಹುರುಳಿರುವುದಕ್ಕೆ, ಒಂದಂಕಿಗೆ ಬಂದು ನಿಂತಿರುವ ನಕ್ಸಲೀಯರ ಸಂಖ್ಯೆಯೇ
ನಿದರ್ಶನವಾಗಿದೆ.
ಸದುದ್ದೇಶದ ಹೋರಾಟಗಳಿಗೆ ಸಾವಿಲ್ಲ, ಆದರೆ ಹೋರಾಟದ ಮಾರ್ಗ ಬದಲಾಗದೇ ಗತ್ಯಂತರವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.