ಇಂಗ್ಲಿಷ್ ಪತ್ರಿಕೆಯೊಂದರ ಆನ್‌ಲೈನ್ ಆವೃತ್ತಿಯಲ್ಲಿ ಇತ್ತೀಚೆಗೆ ಪ್ರಕಟವಾದ ಸುದ್ದಿಯೊಂದು ಗಮನ ಸೆಳೆಯಿತು. ‘ಅರಿಸಿನವು ಜನರನ್ನು ಸಾಯಿಸುವುದನ್ನು ತಡೆಯುವುದು ಹೇಗೆ?’ ಎಂಬ ತಲೆಬರಹವಿದ್ದ ಸುದ್ದಿಯನ್ನೋದಿ ಕಣ್ಣುಗಳನ್ನು ನಂಬಲಾಗಲಿಲ್ಲ. ತಲೆತಲಾಂತರದಿಂದ ಭಾರತೀಯ ಅಡುಗೆಯ ಅವಿಭಾಜ್ಯ ಅಂಗವಾಗಿರುವ ಮತ್ತು ಔಷಧದ ಭಂಡಾರವಾಗಿರುವ ಅರಿಸಿನದ ಕುರಿತು ಇದೆಂತಹ ಸುದ್ದಿ ಎಂಬ ವಿಚಾರ ತೀವ್ರ ಕಳವಳವನ್ನು ಉಂಟುಮಾಡಿತ್ತು.
ಸುದ್ದಿಯ ಮೇಲೆ ಕ್ಲಿಕ್ ಮಾಡಿ ವಿವರಗಳನ್ನು ಓದಿದಾಗ ಸುದ್ದಿಯ ಸತ್ಯಾಸತ್ಯತೆ ತಿಳಿದುಬಂತು. ಅರಿಸಿನವನ್ನು ಇನ್ನಷ್ಟು ಹಳದಿ ಮಾಡಲು, ಆ ಮೂಲಕ ಹೆಚ್ಚು ದರ ಗಿಟ್ಟಿಸಲು ಕೊಯ್ಲೋತ್ತರ ಸಂಸ್ಕರಣೆ
ಯಲ್ಲಿ ಸೀಸದ ಕ್ರೋಮೇಟ್ ರಾಸಾಯನಿಕವನ್ನು ಬಳಸಲಾಗುತ್ತದೆ. ಹೀಗಾಗಿ, ಅಂತಹ ಅರಿಸಿನವನ್ನು ಬಳಸುವುದರಿಂದ ನರಮಂಡಲಕ್ಕೆ ಹಾನಿಯಾಗಿ ಕ್ರಮೇಣ ಅಂಗಾಂಗಗಳು ಬಾಧೆಗೊಳಗಾಗಿ ವ್ಯಕ್ತಿ, ವಿಶೇಷವಾಗಿ ಮಕ್ಕಳು ಸಾಯುವ ಸಂಭವವುಂಟು. ಇದು ಲೇಖನದ ಸಾರಾಂಶ. ಜೊತೆಗೆ, ಅದನ್ನು ತಡೆಯಲು ಯಾವ ದೇಶದಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬಂತಹ ವಿವರಗಳು ನಮೂದಾ
ಗಿದ್ದವು. ಲೇಖನದ ಕೊನೆಯಲ್ಲಿ ಸಣ್ಣ ಅಕ್ಷರಗಳಲ್ಲಿ ಲೇಖಕಿಯು ‘ಈ ಲೇಖನವನ್ನು ಯಾವುದೋ ಸುದ್ದಿಯ ಮೂಲದಿಂದ ಯಥಾವತ್ ಪ್ರಕಟಿಸಲಾಗಿದೆ. ಶೀರ್ಷಿಕೆಯನ್ನಷ್ಟೇ ಬದಲಾಯಿಸಿದ್ದೇವೆ’ ಎಂದು ಘೋಷಿಸಿಕೊಂಡಿದ್ದರು.
ವಿಷಯವನ್ನು ರಸವತ್ತಾಗಿಸಲು ಏನೆಲ್ಲಾ ವಾಮಮಾರ್ಗಗಳನ್ನು ಬಳಸಬಹುದು ಎಂಬುದಕ್ಕೆ ಇದು ಉದಾಹರಣೆಯಷ್ಟೇ. ಹಲವಾರು ವೆಬ್‌ಸೈಟುಗಳ ಬಂಡವಾಳ ಇಂತಹವೇ ಆಗಿರುತ್ತವೆ. ಆಕರ್ಷಕ, ಕುತೂಹಲಕಾರಿ, ವಿವಾದಾತ್ಮಕ ಶೀರ್ಷಿಕೆಗಳನ್ನು ಕೊಟ್ಟಷ್ಟೂ ಓದುಗರ ಸಂಖ್ಯೆ ಜಾಸ್ತಿಯಾಗುವುದನ್ನು
ಅವರು ಕಂಡುಕೊಂಡಿದ್ದಾರೆ. ಒಮ್ಮೆ ಯೋಚಿಸಿ ನೋಡಿ: ಈ ಮೇಲಿನ ಶೀರ್ಷಿಕೆಯನ್ನು ನೋಡಿ, ಇಷ್ಟು ವರ್ಷಗಳಿಂದ ಬಳಸಿಕೊಂಡು ಬಂದಿದ್ದ ವಸ್ತು ಎಷ್ಟು ಘಾತಕವೆಂದು ಯಾರಾದರೂ ನಂಬಿ, ಅದನ್ನು ಯಥಾವತ್ ಯಾರಿಗಾದರೂ ಫಾರ್ವರ್ಡ್ ಮಾಡಿದರೆ ಏನಾದೀತು? ಎಷ್ಟೋ ಜನರಿಗೆ ವಾಟ್ಸ್‌ಆ್ಯಪ್, ಯುಟ್ಯೂಬಿನಲ್ಲಿ ಬರುವ ಮಾಹಿತಿಗಳಿಗೆ ತಲೆಬುಡ ಇರುವುದಿಲ್ಲ ಎಂಬುದೇ ಗೊತ್ತಿರುವುದಿಲ್ಲ. ಅದರಲ್ಲೂ ವಿಶೇಷವಾಗಿ ಹಿರಿಯರು, ಹಳ್ಳಿಗಾಡಿನ ಅಮಾಯಕರು ಇತ್ತೀಚೆಗಷ್ಟೇ ಇಂಟರ್ನೆಟ್ ಯುಗಕ್ಕೆ ತೆರೆದುಕೊಳ್ಳು
ತ್ತಿದ್ದಾರೆ. ಅಂತಹವರ ಗತಿ ಏನಾಗಬೇಡ?
ನಾವು ಚಿಕ್ಕವರಿದ್ದಾಗ, ವೀರಪ್ಪನ್ ಬಂಧನದಂತಹ ಕೋಲಾಹಲಕರ ವಿಷಯಗಳತ್ತಲೇ ಗಿರಕಿ ಹೊಡೆಯುತ್ತಾ, ಅವುಗಳನ್ನೇ ಬಂಡವಾಳ ಮಾಡಿಕೊಂಡ ಕೆಲವು ಸಂಜೆ ಪತ್ರಿಕೆಗಳಿದ್ದವು. ಗಮನಸೆಳೆಯುವ ತಲೆಬರಹ ಕೊಟ್ಟು, ಬಿಸಿದೋಸೆಯಂತೆ ತಮ್ಮ ಪತ್ರಿಕೆಯ ಪ್ರತಿಗಳನ್ನು ಮಾರುತ್ತಿದ್ದವು.
ಕೆಲ ದಿನಗಳ ಕೆಳಗೆ ಹಿರಿಯರೊಬ್ಬರು ಫೋನ್ ಮಾಡಿ, ಜೈವಿಕ ಕಳೆನಾಶಕಗಳ ಕುರಿತು ಮಾಹಿತಿ ಕೇಳಿದರು. ಅವರು ಇತ್ತೀಚೆಗಷ್ಟೇ ಸ್ಮಾರ್ಟ್‌ಫೋನ್ ತೆಗೆದುಕೊಂಡಿದ್ದಾರೆ. ಪರಿಸರ ಪರ ಒಲವಿರುವ ವ್ಯಕ್ತಿ. ಸಾಧ್ಯವಾದಷ್ಟೂ ರಾಸಾಯನಿಕ ಮುಕ್ತ ಜೀವನ ನಡೆಸುವ ಧ್ಯೇಯವುಳ್ಳವರು. ಅಂತಹವರು ಯುಟ್ಯೂಬಿನಲ್ಲಿ ಏನನ್ನೋ ಹುಡುಕುತ್ತಿದ್ದಾಗ ಅವರೆದುರು ಜೈವಿಕ ಕಳೆನಾಶಕಗಳ ತಯಾರಿ ಮತ್ತು ಉಪಯೋಗಗಳ ಕುರಿತು ಹಲವಾರು ವಿಡಿಯೊಗಳು ತೆರೆದುಕೊಂಡವು. ಕುತೂಹಲಗೊಂಡ ಅವರು ಅವುಗಳ ಕುರಿತು ಹೆಚ್ಚಿನ ವಿವರ ಮತ್ತು ಮಾಹಿತಿಯನ್ನು ನನ್ನಿಂದ ಬಯಸಿದ್ದರು. ಅವರಿಂದ ಪಡೆದ ವಿವರಣೆಯಲ್ಲಿ, ನಿರ್ದಿಷ್ಟ ಸಸ್ಯಗಳನ್ನು ಕೊಳೆಸಿ, ಕಷಾಯ ಮಾಡಿ ನಂತರ ಉಪ್ಪು ಮತ್ತು ಸುಣ್ಣವನ್ನು ಹೆಚ್ಚಾಗಿ ಬಳಕೆ ಮಾಡಿ, ಆ ಮೂಲಕ
ಕಳೆಗಿಡಗಳನ್ನು ನಾಶ ಮಾಡಬಹುದು ಎಂಬ ಸಂಗತಿಯ ಅನಾವರಣವಾಯಿತು.
ಸಾಮಾನ್ಯವಾಗಿ ಉಪ್ಪು ಮತ್ತು ಸುಣ್ಣವನ್ನು ನೀರಿಗೋ ಮಣ್ಣಿಗೋ ಬೆರೆಸಿದಾಗ ಕ್ಷಾರೀಯತೆ ಹೆಚ್ಚಿ ಆ ಮೂಲಕ ತಾತ್ಕಾಲಿಕವಾಗಿ ಸ್ವಲ್ಪಮಟ್ಟಿಗೆ ಕಳೆಗಿಡಗಳು ಬೆಳೆಯಲಾರವೇನೊ. ಕ್ರಮೇಣ ಕ್ಷಾರೀಯತೆಗೆ ಹೊಂದಿಕೊಳ್ಳುವ ಬೇರೆ ಸಸ್ಯಗಳು ಆ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ಆದರೆ, ಅವುಗಳ ಯಥೇಚ್ಛ ಬಳಕೆಯಿಂದ ಅವು ಕ್ರಮೇಣ ಮಣ್ಣಿನ ಗುಣಮಟ್ಟವನ್ನೇ ಬದಲಾಯಿಸಿ, ಇಲ್ಲಿಯವರೆಗೆ ಬೆಳೆಯಲಾಗುತ್ತಿದ್ದ ಬೆಳೆಯನ್ನೂ ಬಾಧಿಸದಿರವು. ಹಲವಾರು ಎಕರೆ ಅಡಿಕೆ ತೋಟವನ್ನು ಹೊಂದಿರುವ ಅವರು, ಆ ಮ್ಯಾಜಿಕ್ ಫಾರ್ಮುಲಾವನ್ನು ಅನುಸರಿಸಿ ತಯಾರಿಸಿದ ಮಿಶ್ರಣವನ್ನು ತಮ್ಮ ತೋಟಕ್ಕೆ ಸಿಂಪಡಿಸುತ್ತಾ ಹೋದರೆ, ಕ್ರಮೇಣ ಅವರ ತೋಟವೂ ಕ್ಷಾರೀಯತೆಯಿಂದ ಬಾಧೆಗೆ ಒಳಗಾಗಬಹುದು. ಈ ವಿಷಯವನ್ನು ಅವರಿಗೆ ಮನದಟ್ಟು ಮಾಡಿಸಿದೆ.
ಸ್ಮಾರ್ಟ್‌ಫೋನು ಮತ್ತು ಇಂಟರ್ನೆಟ್ ಈಗ ವ್ಯಾಪಕವಾಗಿವೆ. ಅಲ್ಲಿ ಮಾಹಿತಿಗಳ ಮಹಾಪೂರವೇ ಹರಿಯುತ್ತಿದೆ. ಸುದ್ದಿಯು ನಿಜವೋ ಸುಳ್ಳೋ ಎಂಬುದರ ಮೂಲಕ್ಕೇ ಹೋಗಿ ಹುಡುಕಿ, ಉತ್ತರ ಕಂಡುಕೊಂಡ ನಂತರವಷ್ಟೇ ಅಪ್‌ಲೋಡ್, ಫಾರ್ವರ್ಡ್ ಮಾಡುವುದರಿಂದ ಎಲ್ಲರಿಗೂ ಹಿತವಲ್ಲವೇ?
ಲೇಖಕ: ಸಹಪ್ರಾಧ್ಯಾಪಕ, ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗ, ಎಸ್‌ಡಿಎಂ ಕಾಲೇಜು, ಉಜಿರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.