ADVERTISEMENT

ಎಲ್ಲಿ ಮನಕೆ ಅಳುಕಿರದೋ...

21ನೇ ಶತಮಾನದ ಜಾಗತಿಕ ಅಗತ್ಯಗಳು ವಿಭಿನ್ನ ಮಾತ್ರವಲ್ಲ, 19ನೇ ಶತಮಾನದ ರಾಷ್ಟ್ರೀಯತೆಯಿಂದ ನಾವೀಗ ಬಹಳ ದೂರ ಕ್ರಮಿಸಿ ಬಂದಿದ್ದೇವೆ

ಡಾ.ಜ್ಯೋತಿ
Published 30 ಡಿಸೆಂಬರ್ 2019, 23:04 IST
Last Updated 30 ಡಿಸೆಂಬರ್ 2019, 23:04 IST
   

ಸ್ವಾತಂತ್ರ್ಯೋತ್ತರ ಭಾರತ ಹೇಗಿರಬೇಕೆಂಬ ಚಿತ್ರಣವನ್ನು ಸ್ವಾತಂತ್ರ್ಯಪೂರ್ವದಲ್ಲಿಯೇ ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಿದ ಅನೇಕ ಬುದ್ಧಿಜೀವಿಗಳಲ್ಲಿ ಕವಿ ರವೀಂದ್ರನಾಥ ಟ್ಯಾಗೋರ್ ಒಬ್ಬರು. ಅವರು 1941ರಲ್ಲಿ ನಿಧನರಾದರೂ, ಸ್ವಾತಂತ್ರ್ಯ ಸಿಗುವ ಮುನ್ಸೂಚನೆಯ ಆಧಾರದಲ್ಲಿ, ಸ್ವತಂತ್ರ ಭಾರತದ ಉಜ್ವಲ ಭವಿಷ್ಯ ಹೇಗಿರಬೇಕೆಂಬ ಪರಿಕಲ್ಪನೆಯನ್ನು ತಮ್ಮ ಕವನಗಳ ಮೂಲಕ ದೇಶವಾಸಿಗಳೊಂದಿಗೆ ಹಂಚಿಕೊಂಡಿದ್ದರು. ಅಂತಹ ಕವನಗಳಲ್ಲಿ ಬಹಳ ಮುಖ್ಯವೆನಿಸುವುದು, ಒಂದು ದೇಶ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಬಹಳ ವಿಸ್ತೃತವಾಗಿ ತೆರೆದಿಟ್ಟ, ‘ವೇರ್ ದಿ ಮೈಂಡ್ ಈಸ್ ವಿತೌಟ್ ಫಿಯರ್’ (ಅದನ್ನು ಬಿಎಂಶ್ರೀ ಅವರು, ‘ಎಲ್ಲಿ ಮನಕೆ ಅಳುಕಿರದೋ...’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ). ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತ ಪರ– ವಿರೋಧದ ನಡುವಿನ ಈಗಿನ ತಿಕ್ಕಾಟದಲ್ಲಿ ಈ ಕವನ ನಮಗೆ ಹೆಚ್ಚು ಪ್ರಸ್ತುತ ಎನಿಸುತ್ತದೆ.

ಟ್ಯಾಗೋರ್ ಈ ಕವನದಲ್ಲಿ ಆಶಿಸಿರುವ ಸ್ವತಂತ್ರ ಭಾರತದ ಒಂದಂಶವನ್ನೂ ನಾವು ಇನ್ನೂ ಅಳವಡಿಸಿಕೊಳ್ಳಲಾಗದೇ ಇರುವುದು ವಿಷಾದನೀಯ. ಅವರು ಹೇಳುವಂತೆ, ಒಂದು ಸ್ವತಂತ್ರ ದೇಶವು ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು; ಅಲ್ಲಿನ ಜನಸಾಮಾನ್ಯರು ತಮ್ಮ ಅನಿಸಿಕೆಗಳನ್ನು ನಿರ್ಭೀತಿಯಿಂದ ಸಾರ್ವಜನಿಕವಾಗಿ ಚರ್ಚಿಸುವಂತೆ ಇರಬೇಕು, ಕೆಳಸ್ತರದ ಜನರೂ ತಲೆಯೆತ್ತಿ ಹೆಮ್ಮೆಯಿಂದ ಬದುಕುವಂತೆ ಇರಬೇಕು, ಜ್ಞಾನವು ಮುಕ್ತವಾಗಿ ಎಲ್ಲರಿಗೂ ಸಿಗುವಂತೆ ಇರಬೇಕು. ವರ್ತಮಾನದ ಪರಿಸ್ಥಿತಿಗೆ ಪ್ರಸ್ತುತವೆನಿಸುವಂತೆ ದೇಶವು ಜಾತಿ, ಧರ್ಮ, ಲಿಂಗ, ಭಾಷೆ ಇತ್ಯಾದಿ ಮಾನವ ನಿರ್ಮಿತ ಸಂಕುಚಿತ ಗೋಡೆಗಳನ್ನು ಒಳಗೊಂಡಿರಬಾರದು.

ಇನ್ನೂ ಮುಂದುವರಿದು ಟ್ಯಾಗೋರ್ ಹೇಳುತ್ತಾರೆ, ಜನರ ದೈನಂದಿನ ಮಾತುಕತೆಯು ಸತ್ಯದ ಆಳದಿಂದ ಮೂಡಿಬರಲಿ. ವಿಶೇಷವಾಗಿ, ಜನರು ಕ್ಷುಲ್ಲಕ ವಿಷಯಗಳಿಗಾಗಿ ಜೀವನವನ್ನು ವ್ಯರ್ಥ ಮಾಡದೆ, ಪರಿಪೂರ್ಣ ವ್ಯಕ್ತಿತ್ವ ಸಾಧಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿರಲಿ. ಶುದ್ಧ, ನೂತನ ವಿಚಾರಗಳ ತೊರೆ ನಿರಂತರವಾಗಿ ಹರಿಯುತ್ತಿರಲಿ. ವಿದ್ಯೆ, ಜ್ಞಾನ ಸಂಪಾದನೆ ಮಾಡಿದಷ್ಟೂ ಮನುಷ್ಯನ ಮನಸ್ಸು ವಿಕಸಿತಗೊಳ್ಳುತ್ತದೆ, ಆಲೋಚನೆ ಮತ್ತು ಕೃತಿಯಲ್ಲಿ ಅದು ಗೋಚರಿಸುವಂತಿರಲಿ. ಈ ಮೇಲಿನ ಎಲ್ಲಾ ಲಕ್ಷಣಗಳಿರುವ ನಿಜ ಅರ್ಥದ ಸ್ವಾತಂತ್ರ್ಯಕ್ಕೆ ನನ್ನ ದೇಶ ಎಚ್ಚರಗೊಳ್ಳಲಿ ಎಂದು ಅವರು ಹಾರೈಸುತ್ತಾರೆ.

ADVERTISEMENT

ಇಲ್ಲಿ ಪ್ರಸ್ತಾಪಿಸಿರುವ ಸ್ವಾತಂತ್ರ್ಯವು ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಇದೊಂದು ಪರಿಪೂರ್ಣ ವಿಶ್ವಮಾನವ ದೃಷ್ಟಿಯುಳ್ಳ, ವರ್ತಮಾನಕ್ಕೆ ಅಗತ್ಯವಿರುವ ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯತೆಯ ಪರಿಕಲ್ಪನೆ. ಇಲ್ಲಿನ ರಾಷ್ಟ್ರಕಲ್ಪನೆಯಲ್ಲಿ ಮುಕ್ತತೆ, ವೈಚಾರಿಕತೆ, ಸಮಾನತೆ, ಸಹೋದರತ್ವ, ವಿಶಾಲ ಮನೋಭಾವ ಉಂಟು. ಸದ್ಯಕ್ಕೆ, ನಮಗೆ ಮನಸ್ಸುಗಳನ್ನು ಜೋಡಿಸುವ ರಾಷ್ಟ್ರೀಯತೆ ಬೇಕು. ಗೋಡೆಗಳು, ಕಂದಕಗಳು, ಬಿರುಕುಗಳನ್ನು ಸೃಷ್ಟಿಸುವ, ಮನಸ್ಸುಗಳನ್ನು ಒಡೆಯುವ, ಒಬ್ಬರನ್ನೊಬ್ಬರು ಸಂಶಯದಿಂದ ನೋಡಬೇಕಾದ ಪರಿಸ್ಥಿತಿ ನಿರ್ಮಿಸುವ ರಾಷ್ಟ್ರೀಯತೆ ಬೇಕಾಗಿಲ್ಲ.

ಪ್ರಸ್ತುತ, ನಮ್ಮ ದೇಶದಲ್ಲಿ ಅನಿವಾರ್ಯವೆಂದು ಬಿಂಬಿಸಲಾಗಿರುವ ರಾಷ್ಟ್ರೀಯತೆಯ ಮೂಲ, 19ನೇ ಶತಮಾನದ ಯುರೋಪ್‌ನಲ್ಲಿದೆ. ರಾಷ್ಟ್ರೀಯತೆಯು ಆ ಕಾಲಘಟ್ಟದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಅವಶ್ಯವೆಂದು ಪರಿಗಣಿಸಲಾಗಿದ್ದ ಒಂದು ಪರಿಕಲ್ಪನೆ. ಆ ಕಾಲದಲ್ಲಿ ಉದಯವಾದ ಬೃಹತ್ ಕೈಗಾರಿಕೀಕರಣ ಮತ್ತು ವಸಾಹತು ನೀತಿಯ ಬಳುವಳಿಯಾಗಿ, ಕ್ರೋಡೀಕರಿಸಲ್ಪಟ್ಟ ಅಗಾಧ ಸಂಪತ್ತನ್ನು, ತಮ್ಮ ತಮ್ಮ ಭೌಗೋಳಿಕ ಗಡಿಯೊಳಗೆ ಹಿಡಿದಿಟ್ಟುಕೊಳ್ಳುವಲ್ಲಿ ‘ರಾಷ್ಟ್ರೀಯತೆ’ ಎನ್ನುವ ಒಂದು ಸಂಕುಚಿತ ಕಲ್ಪನೆ ವಿಶೇಷ ಪಾತ್ರ ವಹಿಸಿತು. ಪರಿಣಾಮವಾಗಿ, ಈ ಮಾದರಿಯ ರಾಷ್ಟ್ರೀಯತೆ ಎರಡು ಮಹಾಯುದ್ಧಗಳಿಗೂ ನಾಂದಿ ಹಾಡಿತು. ಮಹಾಯುದ್ಧಗಳಿಂದಾದ ಅಪಾರ ಹಾನಿಯು ರಾಷ್ಟ್ರಗಳ ಕಣ್ಣು ತೆರೆಸಿ, ಅನಿವಾರ್ಯವಾಗಿ ವಿಶಾಲ ಮನೋಭಾವ ಹೊಂದಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವಿಶೇಷವಾಗಿ, ಬೇರೆ ಬೇರೆ ಕಾರಣಗಳಿಂದ ವಿದೇಶಗಳಲ್ಲಿ ನೆಲೆ ಕಾಣಬೇಕಾದ ವಲಸಿಗರಿಗೆ, ದೇಶಗಳ ಗಡಿಗಳು ತೆರೆದವು.

ಈ ತೆರೆದಿರುವ ಗಡಿಗಳನ್ನು ನಾವು ಈಗ ಮುಚ್ಚಿಸಿದರೆ, ಕಾಲಚಕ್ರದಲ್ಲಿ ನಾವು ಹಿಮ್ಮುಖವಾಗಿ ಚಲಿಸಿದಂತೆ. 21ನೇ ಶತಮಾನದ ಜಾಗತಿಕ ಅಗತ್ಯಗಳು ವಿಭಿನ್ನ ಮಾತ್ರವಲ್ಲ, 19ನೇ ಶತಮಾನದ ರಾಷ್ಟ್ರೀಯತೆಯಿಂದ ನಾವೀಗ ಬಹಳ ದೂರ ಕ್ರಮಿಸಿ ಬಂದಿದ್ದೇವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳ ಬೇಕಾಗಿದೆ. ಅದಕ್ಕೀಗ ಪುನಃ ಮರಳಿದರೆ, ಮನುಷ್ಯ ಕುಲಕ್ಕೆ ದೊಡ್ಡ ಹಿನ್ನಡೆ. ಸಾರ್ವತ್ರಿಕವಾಗಿ ಈಗ ಎದುರಿಸುತ್ತಿರುವ ಸಮಸ್ಯೆಗಳಾದ ಹವಾಮಾನ ವೈಪರೀತ್ಯ, ನೈಸರ್ಗಿಕ ವಿಕೋಪಗಳು, ಮಾಲಿನ್ಯ ಇತ್ಯಾದಿಗಳನ್ನು ಜಾಗತಿಕ ಮಟ್ಟದಲ್ಲಿ ಎದುರಿಸಬೇಕಾಗಿದೆ.

ತತ್ವಶಾಸ್ತ್ರಜ್ಞ ಯುವಾನ್ ನೋಹ ಹರಾರಿ ಹೇಳುವಂತೆ, ಪ್ರಸ್ತುತ ಸ್ಥಿತಿಯ ಅಗತ್ಯವೆಂದರೆ ಒಂದು ಜಾಗತಿಕ ಸರ್ಕಾರವೇ ಹೊರತು ರಾಷ್ಟ್ರೀಯತೆ ಅಲ್ಲ. ಈ ನಿಟ್ಟಿನಲ್ಲಿ, ಟ್ಯಾಗೋರ್ ಅವರ ವಿಶಾಲ ಮನೋಭಾವದ ರಾಷ್ಟ್ರ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ದೇಶಕ್ಕೆ, ದೇಶಭಕ್ತರಿಗೆ ಹಿತ. ದೇಶ, ಮನಸ್ಸುಗಳ ಮಧ್ಯೆ ಎದ್ದಿರುವ ಗೋಡೆಗಳನ್ನು ಕೆಡಹುವ ನಿಟ್ಟಿನಲ್ಲಿ ಸರ್ಕಾರಗಳು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.