ADVERTISEMENT

ಸಂಗತ: ರಾಜಕೀಯ ಚಿಂತನೆ ಯಾರಿಗೆ ಬೇಕಾಗಿದೆ?

ಸದನಗಳನ್ನು ಕಾದಾಟ, ಬೈದಾಟದ ಕಣಗಳನ್ನಾಗಿ ಮಾರ್ಪಡಿಸಿರುವ ರಾಜಕಾರಣಿಗಳ ಮಧ್ಯದಿಂದ ರಾಜಕೀಯ ಚಿಂತನೆ ಮೂಡಿಬರಬೇಕೆಂದು ನಿರೀಕ್ಷಿಸಲಾಗದ ಸ್ಥಿತಿ ಇದೆ

ಆರ್.ಲಕ್ಷ್ಮೀನಾರಾಯಣ
Published 3 ಸೆಪ್ಟೆಂಬರ್ 2024, 19:28 IST
Last Updated 3 ಸೆಪ್ಟೆಂಬರ್ 2024, 19:28 IST
<div class="paragraphs"><p>ಸಂಗತ: ರಾಜಕೀಯ ಚಿಂತನೆ ಯಾರಿಗೆ ಬೇಕಾಗಿದೆ?</p></div>

ಸಂಗತ: ರಾಜಕೀಯ ಚಿಂತನೆ ಯಾರಿಗೆ ಬೇಕಾಗಿದೆ?

   

‘ನಮ್ಮ ದೇಶದ ರಾಜಕೀಯ ಚಿಂತನೆಗೆ ಬರಗಾಲ ಏಕೆ ಬಂತು? ನಮ್ಮ ರಾಜಕೀಯ ಚಿಂತಕರು ಎಲ್ಲಿ ಹೋದರು?’ ಎಂದು ಲೇಖಕ ಯೋಗೇಂದ್ರ ಯಾದವ್ ವ್ಯಗ್ರರಾಗಿ, ತುಂಬ ಕಳಕಳಿ ವ್ಯಕ್ತಪಡಿಸುತ್ತ, ತಮ್ಮ ಲೇಖನದಲ್ಲಿ (ಪ್ರ.ವಾ., ಆ. 31) ಅತ್ಯಂತ ಪ್ರಸ್ತುತವಾದ ಪ್ರಶ್ನೆಯನ್ನು ಎತ್ತಿದ್ದಾರೆ. ಎಲ್ಲದಕ್ಕೂ ಅನ್ವಯವಾಗುವ ‘ಬೇಡಿಕೆ ಮತ್ತು ಪೂರೈಕೆ’ ಸಿದ್ಧಾಂತ ಇದಕ್ಕೂ ಬಹುಶಃ ಅನ್ವಯಿಸುತ್ತದೆ.

ಇಂದು ರಾಜಕೀಯ ಚಿಂತನೆ ಯಾರಿಗೆ ಬೇಕಾಗಿದೆ? ಅವರು ಹೇಳಿದಂತೆ, ಸ್ವಾತಂತ್ರ್ಯ ಬಂದ ಮೊದಲ ಕಾಲು ಶತಮಾನದಲ್ಲಿ ಎಂ.ಎನ್.ರಾಯ್, ಬಿ.ಆರ್.ಅಂಬೇಡ್ಕರ್, ಲೋಹಿಯಾ, ಜೆ.ಪಿ., ರಾಜಾಜಿ, ಕೃಪಲಾನಿ ಅವರಂತಹ ಪ್ರಖರ ರಾಜಕೀಯ ಚಿಂತಕರ ಒಂದು ಗ್ಯಾಲಕ್ಸಿಯೇ ಇತ್ತು. ಆಗಲೂ ಚುನಾವಣಾ ರಾಜಕಾರಣ ಮತ್ತು ತನ್ಮೂಲಕ ರಾಜಕೀಯ ಅಧಿಕಾರ ಗ್ರಹಣ ಮಾಡುವುದು ಇದ್ದೇ ಇತ್ತು. ಆದರೆ ಅದಕ್ಕೆ ಪೂರಕವಾಗುವಂತೆ ಉತ್ತಮ ರಾಜಕೀಯ ಚಿಂತನೆ ತಮ್ಮನ್ನು ರಾಜಕೀಯವಾಗಿ ವಿರೋಧಿಸುವವರಿಂದ ಬಂದರೂ ಅದನ್ನು ಪುರಸ್ಕರಿಸುತ್ತಿದ್ದ ನೆಹರೂ ಅವರಂಥ ಉದಾರವಾದಿ ಪ್ರಜಾಪ್ರಭುತ್ವದ ಪ್ರತಿಪಾದಕ
ರಿದ್ದರು. ಅವರಿಗೆ ಅವರದ್ದೇ ಆದ ಮಿತಿಗಳು ಇದ್ದರೂ ದೇಶದ ಹಿತವೇ ಅವರಿಗೆ ಮುಖ್ಯವಾಗಿದ್ದರಿಂದ ಉಳಿದವನ್ನು ಕಡೆಗಣಿಸುತ್ತಿದ್ದರು.

ADVERTISEMENT

ಜಗತ್ತಿನ ಇತಿಹಾಸ ಮತ್ತು ಸರ್ವಾಧಿಕಾರಿಗಳ ಕಥೆಯನ್ನು ಬಲ್ಲ ಅವರಿಗೆ ತಮ್ಮ ದೀರ್ಘಕಾಲದ ಅಪಾರ ಅಧಿಕಾರದ ಬಗ್ಗೆ ಶಂಕೆ ಬಂದು, ತಮ್ಮ ಬಗ್ಗೆ ತಾವೇ ಗುಪ್ತನಾಮದಿಂದ ಪತ್ರಿಕೆಯೊಂದರಲ್ಲಿ ‘ಈತ ಸರ್ವಾಧಿಕಾರಿಯಾಗಿ ಬಿಡಬಹುದು’ ಎಂದು ಬರೆದು
ಕೊಳ್ಳುವಂಥ ವ್ಯಕ್ತಿ ಅವರಾಗಿದ್ದರು (ನೋಡಿ: ‘ಲೋಕದೇವ ನೆಹರೂ’. ಲೇಖಕ: ರಾಮಧಾರೀ ಸಿಂಹ ದಿನಕರ್) ಅಷ್ಟರ ಮಟ್ಟಿಗಿನ ಆತ್ಮಾವಲೋಕನ ಅವರಲ್ಲಿ ಇತ್ತು. ಆದರೆ ಆಮೇಲೆ ಆದದ್ದೇನು? ಅವರ ಪ್ರಿಯಪುತ್ರಿ ಅಧಿಕಾರ ಹಿಡಿದ ಮೇಲೆ ಅಪ್ಪ ಆಗಲು ಹೆದರಿದ್ದನ್ನು, ಆಗದೇ ಇದ್ದದ್ದನ್ನು ತಾನು ಆಗಿ ತೋರಿಸುತ್ತೇನೆ ಎನ್ನುವ ರೀತಿ ನಡೆದುಕೊಂಡದ್ದು ಈಗ ಇತಿಹಾಸ.

ಅಲ್ಲಿಂದ ಮುಂದಕ್ಕೆ ಚುನಾವಣೆಗಳನ್ನು ಗೆಲ್ಲುವ, ಅದಕ್ಕೆ ಯಾವ ತಳತಂತ್ರಗಳನ್ನು ಬೇಕಾದರೂ ಮಾಡುವ, ಮತದಾರರಿಗೆ ಯಾವ ಬಗೆಯ ಆಮಿಷಗಳನ್ನು ಬೇಕಾದರೂ ಒಡ್ಡುವ ಮತ್ತು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ನಂತರದಲ್ಲಿ ಸರ್ಕಾರದ ರಾಜಕೀಯ ಹಗರಣಗಳು, ಭ್ರಷ್ಟಾಚಾರ ಇವುಗಳ ಬಗ್ಗೆ ಎಷ್ಟೇ ವಿರೋಧಗಳು ಬಂದರೂ ಅವನ್ನು ಎಲ್ಲ ಬಗೆಯ ಬಲ ಹಾಗೂ ತಂತ್ರಗಳನ್ನು ಬಳಸಿ ಹತ್ತಿಕ್ಕುವ, ಅದಕ್ಕಾಗಿ ತನಗೆ ಅಪಾರ ಜನಬೆಂಬಲ ಇದೆ ಎಂದು ತೋರಿಸಲು ಲಾರಿಗಳಲ್ಲಿ ಜನರನ್ನು ಕರೆತಂದು ರ‍್ಯಾಲಿಗಳನ್ನು ಏರ್ಪಡಿಸುವ, ತನ್ನ ಸುತ್ತ ಭಟ್ಟಂಗಿಗಳ ದೊಡ್ಡ ಪಡೆಯನ್ನೇ ಕಟ್ಟಿಕೊಂಡು ಅಧಿಕಾರವನ್ನು ಶತಾಯಗತಾಯ ಉಳಿಸಿಕೊಳ್ಳುವ ಶಕೆ ಶುರುವಾಯಿತು.

ದೇಶದಾದ್ಯಂತ ಇರುವ ರಾಜಕೀಯ ಅಧಿಕಾರಸ್ಥ
ರೆಲ್ಲರೂ ಅದನ್ನೇ ಮೇಲ್ಪಂಕ್ತಿಯಂತೆ ಅನುಕರಿಸತೊಡಗಿದ ಮೇಲೆ, ರಾಜಕೀಯ ಚಿಂತಕರು, ತಮ್ಮ ಚಿಂತನೆಗಳನ್ನು ಸ್ವೀಕರಿಸಲು ಈಗ ಯಾರೂ ಇಲ್ಲ ಅವುಗಳಿಂದ ಸದ್ಯಕ್ಕಂತೂ ಏನೂ ಪ್ರಯೋಜನವಿಲ್ಲ ಎನ್ನುವ ತೀರ್ಮಾನಕ್ಕೆ ಬಂದರು. ಈ ಕಾರಣದಿಂದ ಬಹುಶಃ ಅದಕ್ಕೆ ಕೊನೆ ಬಂದಂತೆ ತೋರುತ್ತದೆ. ಅಲ್ಲದೆ ಪಕ್ಷವೊಂದರ ನೀತಿ, ಸಿದ್ಧಾಂತಗಳನ್ನು ಒಪ್ಪಿಕೊಂಡು, ಹಲವಾರು ವರ್ಷ ಅದರಲ್ಲಿ ಸಕಲ ಅಧಿಕಾರಗಳನ್ನೂ ಅನುಭವಿಸಿದವರು, ಹಣದ ಹಪಹಪಿಯಿಂದಲೋ ಅಧಿಕಾರದ ಹಪಹಪಿಯಿಂದಲೋ ಅಥವಾ ಟಿಕೆಟ್ ಸಿಗದಿರುವ ಕಾರಣಕ್ಕೋ ಅಂಗಿ ಬದಲಿಸಿದಷ್ಟು ಸುಲಭವಾಗಿ ಪಕ್ಷವನ್ನು ಬದಲಿಸಿ, ಅದಕ್ಕೆ ‘ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ’ ಎಂಬ ತಮ್ಮದೇ ಅನುಕೂಲಸಿಂಧು ವಾದವನ್ನು ಮುಂದಿಡುತ್ತಾ ಬರುತ್ತಿರುವಂಥದ್ದು ಈಚಿನ ವರ್ಷಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಈ ವಿದ್ಯಮಾನಗಳನ್ನು ಅವಲೋಕಿಸಿದರೆ, ಯಾವ ರಾಜಕೀಯ ಚಿಂತನೆ ಅಥವಾ ಚಿಂತಕ ಇಂಥವರಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ಅನಿಸದೇ ಇರದು. ಹಾಗಾಗಿ, ಕೊರತೆ ಇರುವುದು ಚಿಂತನೆ, ಚಿಂತಕರದ್ದಲ್ಲ, ಅದನ್ನು ಪುರಸ್ಕರಿಸುವವರದು.

ಇಂದು ನೌಕರಶಾಹಿ ಮತ್ತು ರಾಜಕೀಯ ಅಧಿಕಾರಸ್ಥರು ಅಮಿತೋತ್ಸಾಹದಿಂದ ಪರಸ್ಪರ ಕೈಹಿಡಿದು ಭ್ರಷ್ಟಾಚಾರದ ಪರ್ವತದ ತುದಿ ಮುಟ್ಟಲು ಸಿದ್ಧರಾಗಿದ್ದು, ಅದರ ಬಗ್ಗೆ ಯಾರಾದರೂ ಎತ್ತಿ ಹೇಳಿದರೆ ‘ಅಯ್ಯೋ ಅದೊಂದು ಪ್ರಪಂಚದಾದ್ಯಂತ ವ್ಯಾಪಿಸಿರುವ ವಿದ್ಯಮಾನ, ನಾವೇನು ಮಾಡಲು ಸಾಧ್ಯ?’ ಎಂಬ ಸಿದ್ಧ ಉತ್ತರ ಸಿಗುತ್ತದೆ. ಇಂಥ ಮುಗಿಲು ಮುಟ್ಟುವ ಭ್ರಷ್ಟಾಚಾರದಿಂದ ಜನತೆ ಕಂಗೆಟ್ಟುಹೋಗಿರುವುದರ ಪರಿವೆಯಿಲ್ಲದೆ, ಸಂಸತ್ತು ಮತ್ತು ವಿಧಾನಸಭೆಗಳನ್ನು ಕಾದಾಟ ಮತ್ತು ಬೈದಾಟದ ಕಣಗಳನ್ನಾಗಿ ಮಾರ್ಪಡಿಸಿರುವ ರಾಜಕಾರಣಿಗಳ ಮಧ್ಯದಿಂದ ರಾಜಕೀಯ ಚಿಂತನೆ ಮೂಡಿಬರಬೇಕೆಂದು ನಿರೀಕ್ಷಿಸುವುದು ಮೊಲದ ಕೋಡಲ್ಲದೆ ಮತ್ತೇನು? ಅದಕ್ಕೆ ಬೇಕಾದದ್ದು ಜಗತ್ತಿನ ರಾಜಕೀಯ ಚಿಂತಕರ ಚಿಂತನೆಗಳನ್ನು ತಮ್ಮ ತತ್ವರಹಿತ ರಾಜಕಾರಣದ ಮಧ್ಯದಲ್ಲೂ ಅಧ್ಯಯನ ಮಾಡುವಷ್ಟು, ನಾಡಿನ ವಿವೇಕಿಗಳ ಮಾತಿಗೆ ಕಿವಿಗೊಡುವಷ್ಟು ವಿವೇಚನೆ ತೋರುವ, ಬಸವಣ್ಣನವರಷ್ಟು ಅಲ್ಲದಿದ್ದರೂ ಕಿಂಚಿತ್ತಾದರೂ ತಮ್ಮ ಬಗ್ಗೆ ತಾವೇ ಆತ್ಮನಿರೀಕ್ಷಣೆ ಮಾಡಿಕೊಳ್ಳುವಷ್ಟು ವಿವೇಕ, ಔದಾರ್ಯ ತೋರುವ ಅಧಿಕಾರಸ್ಥ ರಾಜಕಾರಣಿಗಳು. ಅಂಥವರಿಗಾಗಿ ಕಾಯೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.