ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ಪ್ರೌಢಶಾಲಾ ವಿದ್ಯಾರ್ಥಿಗಳು ಶಿಕ್ಷಕರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿ, ಕೊನೆಗೆ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದರು. ಅಲ್ಲಿಗೆ ಮುಗಿದದ್ದು ಆ ಪ್ರಕರಣವಷ್ಟೇ; ಅಂತಹ ಪ್ರಕರಣಗಳಲ್ಲ. ಲೆಕ್ಕ ಹಾಕಿದರೆ ಅಂತಹವು ದಿನಕ್ಕೆ ಹತ್ತೆಂಟು ಸಿಕ್ಕಾವು, ಬಗೆಬಗೆಯವು ಸಿಕ್ಕಾವು. ಆದರೆ, ಹೊರಬಿದ್ದು ವರದಿಯಾಗುವುದು ಬೆರಳೆಣಿಕೆಯಷ್ಟು ಮಾತ್ರ!
ಈಗೀಗಂತೂ ಮಕ್ಕಳ ಬಗ್ಗೆ ದೂರುಗಳು ಕೇಳಿಬರುತ್ತಲೇ ಇರುತ್ತವೆ. ನಯ ವಿನಯವಿಲ್ಲ, ಗುರು ಹಿರಿಯರೆಂದರೆ ಗೌರವವಿಲ್ಲ, ಮೌಲ್ಯಗಳಂತೂ ಇಲ್ಲವೇ ಇಲ್ಲ, ವರ್ತನೆ ಹದ್ದು ಮೀರುತ್ತಿದೆ, ಶಿಸ್ತನ್ನಂತೂ ಕೇಳಲೇಬೇಡಿ, ಚಟಗಳು ಬೆನ್ನುಹತ್ತಿವೆ... ಹೀಗೆ ನೂರೆಂಟು.
ಹಾಗಾದರೆ ಇಲ್ಲಿ ತಪ್ಪು ಯಾರದು? ಸ್ವತಃ ಮಕ್ಕಳದೋ? ಅವರಿಗೆ ಪಾಠ ಹೇಳುವ ಶಿಕ್ಷಕರದೋ? ಪೋಷಕರದೋ? ಇಡೀ ವ್ಯವಸ್ಥೆಯದೋ? ಒಂದೇ ಸಾಲಿನಲ್ಲಿ ಉತ್ತರಿಸುವುದಾದರೆ, ಮಗುವಿನ ಇಂತಹ ಸ್ಥಿತಿಗೆ ನಾವೆಲ್ಲರೂ ಕಾರಣ. ಮಕ್ಕಳ ಮೇಲೆ ಆಳಿಗೊಂದು ಕಲ್ಲು ಎಸೆದರೆ ಅವರಾದರೂ ಹೇಗೆ ತಡೆದುಕೊಂಡಾರು?!
ತಪ್ಪನ್ನು ಮಕ್ಕಳ ಮೇಲೆ ಹೊರಿಸಲಾಗದು. ಹಾಗೆ ವರ್ತಿಸುವಂತೆ ಅವರನ್ನು ಅಣಿಗೊಳಿಸಿದ ಇಡೀ ವ್ಯವಸ್ಥೆ ಅದರ ಭಾರವನ್ನು ಹೊರಬೇಕು. ಮಗು ಕೆಟ್ಟ ಗುಣಗಳನ್ನು ತೊಟ್ಟುಕೊಂಡೇನೂ ಹುಟ್ಟಿರುವುದಿಲ್ಲ. ನಮ್ಮ ಪುರಾಣಗಳು ಹೇಳುವಂತೆ, ಹದಿನೈದು ವರ್ಷ ತುಂಬುವವರೆಗೂ ಮಗು ಮಾಡುವ ಎಲ್ಲಾ ಪಾಪಕಾರ್ಯಗಳು ಹೆತ್ತವರ ಖಾತೆಗೆ ಜಮೆಯಾಗುತ್ತವೆಯಂತೆ! ಅಂದರೆ ಅದರ ಅರ್ಥವೇನು? ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತೀರ್ಮಾನಿಸುವಷ್ಟು ಅವರು ಪ್ರಬುದ್ಧರಲ್ಲ ಅನ್ನುವುದು. ನಿಜಕ್ಕೂ ಅಂತಹ ಹೊಣೆಗಾರಿಕೆಯನ್ನು ಹೇಳಿಕೊಡದಿರುವುದು ಮಗುವಿನ ತಪ್ಪು ಹೇಗಾಗುತ್ತದೆ? ಕಾಲ ಕೆಟ್ಟಿದೆ ಎನ್ನುತ್ತೇವೆ. ಕೆಡುತ್ತಿರುವುದು ಮಕ್ಕಳು, ಅಂತಹ ಮಕ್ಕಳು ಕಾಲವನ್ನು ಕೆಡಿಸದೆ ಇನ್ನೇನು ಮಾಡಿಯಾರು?
ಮಕ್ಕಳ ಬಾಲ್ಯವನ್ನು ಎಂದೋ ಕಸಿದುಕೊಂಡು ಬಿಟ್ಟಿದ್ದೇವೆ. ಸಸಿಯೊಂದಕ್ಕೆ ಮೂಟೆಗಟ್ಟಲೆ ಗೊಬ್ಬರ ಸುರಿಯುವಂತೆ ಒತ್ತಡವನ್ನು ಅವರಲ್ಲಿ ಸುರಿಯುತ್ತಿದ್ದೇವೆ. ನಡೆಯಲು ಆರಂಭಿಸಿದ ಕೂಡಲೇ ಶಾಲೆಗೆ ತಳ್ಳಿ ಬೀಗುತ್ತೇವೆ. ಬದುಕಿಗೆ ಅಂಕಗಳಷ್ಟೇ ಮುಖ್ಯ, ಅದರಾಚೆಯ ಬದುಕು ಶೂನ್ಯ ಎಂದು ತಲೆಯಲ್ಲಿ ತುಂಬುತ್ತೇವೆ. ಸಂಜೆ ಮನೆಗೆ ಬಂದ ಮಗುವಿಗೆ ‘ಹೋಂವರ್ಕ್ ಏನಿದೆ?’ ಎಂದು ಕೇಳುತ್ತಲೇ ಬರಮಾಡಿಕೊಳ್ಳುವ ಎಷ್ಟೋ ಪೋಷಕರಿದ್ದಾರೆ. ಮಗು ಓದಿ, ಬರೆಯಲಿಕ್ಕೇ ಹುಟ್ಟಿದೆಯೇನೋ ಎಂಬ ಭಾವ. ಅದು ಅಂದು ಹೊಸತೇನನ್ನು ಕಲಿಯಿತು ಎನ್ನುವುದು ಯಾರಿಗೂ ಬೇಕಿಲ್ಲ.
ಸತ್ಯಹರಿಶ್ಚಂದ್ರನ ಬಗ್ಗೆ ಸೊಗಸಾಗಿ ಬರೆದ ಪ್ರಬಂಧಕ್ಕೆ ಮಗುವಿಗೆ ಉತ್ತಮ ಅಂಕಗಳು ಸಿಗಬಹುದು. ಆದರೆ ಆ ಮಗುವಿಗೆ ಎಷ್ಟರಮಟ್ಟಿಗೆ
ಸತ್ಯದ ಅರಿವಾಗಿರಬಹುದು ಎಂದು ತಲೆಕೆಡಿಸಿಕೊಳ್ಳುವವರು ಯಾರು? ನಮಗೆ ಅಂಕಗಳು ಸಾಕು. ಅಮ್ಮ ಸೀರಿಯಲ್ ನೋಡುತ್ತಾ ‘ಹೋಂವರ್ಕ್’ ಬರೆಸುತ್ತಾಳೆ. ಅಪ್ಪ ‘ಬ್ರೇಕಿಂಗ್ ನ್ಯೂಸ್’ ನೋಡುತ್ತಾ ಮೈಮರೆಯುತ್ತಾನೆ. ಇದನ್ನೆಲ್ಲಾ ನೋಡುವ ಮಗುವಿನ ಮನಸ್ಸು ಗೊಂದಲದ ಗೂಡಾಗುತ್ತದೆ.
ಮೊಬೈಲ್ ಮೂಲಕ ವಿಚಿತ್ರ ಜಗತ್ತೊಂದು ಮನೆಯೊಳಗೆ ಇಣುಕಿದೆ. ಬಹುತೇಕ ಸಿನಿಮಾಗಳಲ್ಲಿ ಕ್ರೌರ್ಯವೇ ನಾಯಕ. ಮೋಸ, ಅನ್ಯಾಯ, ಅನಾಚಾರ ಜಗತ್ತನ್ನು ಆಳುತ್ತಿವೆ. ಅವೆಲ್ಲಾ ಮಗುವನ್ನು ತಲುಪಲು ತಡಮಾಡುವುದಿಲ್ಲ. ನಮ್ಮ ಕೆಲವು ಶಿಕ್ಷಕರು ಹೇಗಿದ್ದಾರೆ ಎಂಬುದನ್ನು ಮಗುವಿನ ವರ್ತನೆಯೇ ಹೇಳಿಬಿಡುತ್ತದೆ. ಮಗುವಿನ ಮೇಲೆ ಶಿಕ್ಷಕರು ಬೀರುವಷ್ಟು ಪ್ರಭಾವವನ್ನು ಇನ್ಯಾರೂ ಬೀರಲಾರರು. ಕೆಲವು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವುದನ್ನು ಎಂದೋ ಬಿಟ್ಟಿದ್ದಾರೆ. ಶಿಕ್ಷಕರು ಕೂಡ ಈಗ ಒಂದು ಮಿತಿಯಲ್ಲಿ ಕೆಲಸ ಮಾಡಬೇಕಿದೆ. ಎಷ್ಟೋ ಬಾರಿ ಮೌಲ್ಯಯುತ ಶಿಕ್ಷಣವು ಪರೀಕ್ಷೆಯಲ್ಲಿ ಉತ್ತರ ಬರೆಯಲಷ್ಟೇ ಬಳಕೆಯಾಗುತ್ತದೆ...
ಹೀಗೆ ಮಗುವನ್ನು ಹಳ್ಳಕ್ಕೆ ತಳ್ಳುತ್ತಿರುವ ಕಾರಣಗಳ ಪಟ್ಟಿ ಬರೆದಷ್ಟೂ ದೀರ್ಘ. ಎಲ್ಲಾ ಮಕ್ಕಳು ದಾರಿ ತಪ್ಪಿದ್ದಾರೆ ಎಂಬುದು ಇದರ ಅರ್ಥವಲ್ಲ. ಕೆಲವರು ತಪ್ಪಿದ್ದಾರೆ, ಇನ್ನು ಕೆಲವರು ತಪ್ಪಲು ಸಿದ್ಧರಾಗುತ್ತಿದ್ದಾರೆ, ಒಂದಷ್ಟು ಮಕ್ಕಳು ಹೆತ್ತವರು ಹಾಗೂ ಶಿಕ್ಷಕರ ಕೃಪೆಯಿಂದ ದಾರಿ ತಪ್ಪದೇ ಉಳಿದಿದ್ದಾರೆ.
ಪುಟ್ಟ ಕತೆಯೊಂದಿದೆ. ಎರಡು ಎಳೆಗಿಳಿಗಳು ಗೂಡಿನಿಂದ ಹೊರಬೀಳುತ್ತವೆ. ಒಂದನ್ನು ಕಟುಕ ಎತ್ತಿಕೊಂಡು ಹೋದರೆ, ಮತ್ತೊಂದನ್ನು ಸಾಧು ತಂದು ಸಾಕುತ್ತಾನೆ. ಕಟುಕನ ಗಿಳಿ ‘ಹಿಡಿ, ಹೊಡೆ, ಕೊಲ್ಲು’ ಎನ್ನುವ ಮಾತನ್ನು ಕಲಿತರೆ, ಸಾಧುವಿನ ಗಿಳಿ ‘ಬನ್ನಿ, ಕುಳಿತುಕೊಳ್ಳಿ. ನಿಮಗೇನು ಬೇಕು?’ ಎನ್ನುವ ಸಂಸ್ಕಾರದ ಮಾತನ್ನು ಕಲಿಯುತ್ತದೆ. ನಮಗೆ ಯಾವ ಬಗೆಯ ವಾತಾವರಣ ಸಿಗುತ್ತದೋ ಅದರಿಂದ ನಮ್ಮ ಸಂಸ್ಕಾರ ರೂಪುಗೊಳ್ಳುತ್ತದೆ. ಹೀಗಿರುವಾಗ, ಯಾರನ್ನು ದೂರೋಣ? ಮಕ್ಕಳನ್ನೋ? ವ್ಯವಸ್ಥೆಯನ್ನೋ?
ನಾವೇನು ಮಾಡಬೇಕೆಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಆದರೆ ಮಾಡಲು ಮನಸ್ಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿಕೊಂಡು ಪರಸ್ಪರ ಚರ್ಚೆಗೆ ಕೂರುತ್ತೇವೆ. ಬೇವು ಬಿತ್ತಿ, ಮಾವು ಹುಡುಕುತ್ತೇವೆ. ‘ಅಯ್ಯೋ, ಇದೇನಿದು ಬೇವು?’ ಎಂದು ಅರಚುತ್ತೇವೆ. ನಮ್ಮ ಮಕ್ಕಳು ಕಿಂದರಿಜೋಗಿಯ ಬೆನ್ನುಹತ್ತಿ ಹೊರಟಂತೆ ವ್ಯವಸ್ಥೆಯ ಹಿಂದೆ ಹೊರಟಿವೆ. ನಾವು ಮೂಕಪ್ರೇಕ್ಷಕರಾಗಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.