ದೇಶದ ಜನ ತಮ್ಮ ಹಣಕಾಸಿನ ಆಸ್ತಿಯನ್ನು ಷೇರುಗಳಲ್ಲಿ ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸುವ ಪ್ರಮಾಣವು ಈಚಿನ ವರ್ಷಗಳಲ್ಲಿ ಹೆಚ್ಚಳ ಕಾಣುತ್ತಿದೆ ಎಂಬುದನ್ನು ಹಲವು ಅಂಕಿ–ಅಂಶಗಳು ಹೇಳಿವೆ. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರೂ ಈ ಮಾತನ್ನು ಈಚೆಗೆ ಹೇಳಿದ್ದಾರೆ.
ಕುಟುಂಬಗಳ ಹಣಕಾಸಿನ ಆಸ್ತಿಯಲ್ಲಿ ಪ್ರಧಾನವಾದ ಪಾಲು ಬ್ಯಾಂಕ್ ಠೇವಣಿಗಳ ರೂಪದಲ್ಲಿ ಇದೆಯಾ
ದರೂ, ಕುಟುಂಬಗಳು ತಮ್ಮ ಉಳಿತಾಯವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ, ಪಿಂಚಣಿ ನಿಧಿಗಳಲ್ಲಿ ತೊಡಗಿಸುವುದು ಹೆಚ್ಚಾಗುತ್ತಿರುವ ಕಾರಣ, ಬ್ಯಾಂಕ್ ಠೇವಣಿ ಪಾಲು ಕಡಿಮೆ ಆಗುತ್ತಿದೆ ಎಂದು ದಾಸ್ ಅವರು ಈಚೆಗೆ ಹೇಳಿದ್ದಾರೆ. ಅಲ್ಲದೆ, ಆರ್‌ಬಿಐ ಸಿದ್ಧಪಡಿಸಿರುವ ವರದಿಯೊಂದು, ಜನರು ಬ್ಯಾಂಕ್ ಠೇವಣಿಗಳ ಜೊತೆಯಲ್ಲೇ ಈಕ್ವಿಟಿ ಹಾಗೂ ಹೂಡಿಕೆ ಫಂಡ್‌ಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹೇಳಿದೆ. 2011–12ರಿಂದ 2022–23ರ ನಡುವಿನ ಅವಧಿಯಲ್ಲಿ ಕುಟುಂಬಗಳ ಹಣಕಾಸಿನ ಆಸ್ತಿಗಳಲ್ಲಿ ಈಕ್ವಿಟಿ ಹಾಗೂ ಹೂಡಿಕೆ ನಿಧಿಗಳ ಪಾಲು ಶೇಕಡ 50ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ.
ಆರ್‌ಬಿಐ ಹಾಗೂ ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ನೀಡುವ ಅಂಕಿ–ಅಂಶಗಳನ್ನು ಒಗ್ಗೂಡಿಸಿ ಸಿದ್ಧಪಡಿಸಿದ ಈಚಿನ ವರದಿಯೊಂದು ಇನ್ನೊಂದು ಆಸಕ್ತಿಕರ ಅಂಶವನ್ನು ತೆರೆದಿರಿಸಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮ್ಯೂಚುವಲ್ ಫಂಡ್ ಕಂಪನಿಗಳು ನಿರ್ವಹಿಸುತ್ತಿರುವ ಸಂಪತ್ತಿನ ಒಟ್ಟು ಮೊತ್ತವು ನಾಲ್ಕು ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಬ್ಯಾಂಕ್ ಠೇವಣಿಗಳ ಮೊತ್ತದಲ್ಲಿ ಆಗಿರುವ ಹೆಚ್ಚಳ 1.6ರಷ್ಟು ಮಾತ್ರ ಎಂದು ಆ ವರದಿ ಹೇಳುತ್ತದೆ.
2020ರ ಮಾರ್ಚ್ ತಿಂಗಳಲ್ಲಿ ಒಟ್ಟಾರೆ ಬ್ಯಾಂಕ್ ಠೇವಣಿಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್
ಗಳಲ್ಲಿ ತೊಡಗಿಸಿರುವ ಮೊತ್ತವು ಶೇ 16ರಷ್ಟಾಗಿತ್ತು. ಈಗ ಅದು ಶೇ 26ಕ್ಕೆ ಏರಿಕೆ ಆಗಿದೆ. ನಿಶ್ಚಿತ ಠೇವಣಿಗಳ ಆಚೆಗೂ ಜನ ನೋಟ ಹರಿಸಿದ್ದಾರೆ. ಅವರು ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ತೊಡಗಿಸುತ್ತಿದ್ದಾರೆ. ಇದಕ್ಕೆ, ದೇಶದ ಬಂಡವಾಳ ಮಾರುಕಟ್ಟೆಗಳು ಒಳ್ಳೆಯ ಪ್ರಮಾಣದಲ್ಲಿ ಲಾಭ ತಂದು
ಕೊಡುತ್ತಿರುವುದು ಸೇರಿದಂತೆ ಹಲವು ಕಾರಣಗಳಿವೆ. ಷೇರು ಮಾರುಕಟ್ಟೆಗಳ ಬಗ್ಗೆ ಹೆಚ್ಚಿನ ಅರಿವು ಇರುವವರು, ನೇರವಾಗಿ ಷೇರುಗಳಲ್ಲಿ ಹಣ ತೊಡಗಿಸು
ತ್ತಿದ್ದಾರೆ. ಡಿ–ಮ್ಯಾಟ್ ಖಾತೆಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳವು ಇದನ್ನು ಸ್ಪಷ್ಟಪಡಿಸುತ್ತಿದೆ.
ಕುಟುಂಬಗಳ ಮಟ್ಟದಲ್ಲಿ, ಉಳಿತಾಯ–ಹೂಡಿಕೆ
ಯಂತಹ ಜೀವನದ ಅತಿಮುಖ್ಯ ಆಯಾಮವೊಂದ
ರಲ್ಲಿ ಇಂತಹ ಮಹತ್ವದ ಪರಿವರ್ತನೆ ಆಗುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರವು ಅಲ್ಪಾವಧಿ ಬಂಡವಾಳ ಲಾಭ (ಎಸ್‌ಟಿಸಿಜಿ) ತೆರಿಗೆ ಹಾಗೂ ದೀರ್ಘಾವಧಿ ಬಂಡವಾಳ ಲಾಭ (ಎಲ್‌ಟಿಸಿಜಿ) ತೆರಿಗೆಯನ್ನು ಹೆಚ್ಚು ಮಾಡಿದೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಲ್‌ಟಿಸಿಜಿಗೆ ಪೂರ್ತಿಯಾಗಿ ತೆರಿಗೆ ವಿನಾಯಿತಿ ಇತ್ತು ಎಂಬುದು ಗಮನಾರ್ಹ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಗಮನಿಸಿ ಹೇಳುವುದಾದರೆ, ತೆರಿಗೆ ಏರಿಕೆ ಕ್ರಮವು ಬಿಜೆಪಿಯ ಬಹುಮುಖ್ಯ ಬೆಂಬಲಿಗರಾದ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರಲ್ಲಿಯೇ ತೀವ್ರ ಅಸಮಾಧಾನ ಸೃಷ್ಟಿಸಿದೆ. ಆದರೆ, ಇಂಥದ್ದೊಂದು ಕ್ರಮಕ್ಕೆ ಕೇಂದ್ರ ಮುಂದಾಗಿರುವುದರ ಹಿಂದೆ, ವರಮಾನ ಸಂಗ್ರಹ ಹೆಚ್ಚಿಸುವುದಷ್ಟೇ ಅಲ್ಲದೆ, ಇತರ ಮಹತ್ವದ ಕಾರಣಗಳು ಇದ್ದಿರಲೇಬೇಕು.
ಮೊದಲಿಗೆ, ಕುಟುಂಬಗಳ ಉಳಿತಾಯದ ಹಣವು ಬ್ಯಾಂಕ್ ಠೇವಣಿಗಳ ಬದಲಿಗೆ ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆಗಳು) ಮೂಲಕ ಬಂಡವಾಳ ಮಾರುಕಟ್ಟೆಯ ಕಡೆಗೆ ಭಾರಿ ಪ್ರಮಾಣದಲ್ಲಿ ಹರಿಯು
ವುದು ಕೇಂದ್ರಕ್ಕೆ ಇಷ್ಟವಾಗದೆ ಇರಬಹುದು. ಎಸ್‌ಟಿಸಿಜಿ ಹಾಗೂ ಎಲ್‌ಟಿಸಿಜಿ ತೆರಿಗೆ ಹೆಚ್ಚಿಸುವ ಮೂಲಕ ಸರ್ಕಾರವು, ಜನರ ಉಳಿತಾಯದ ಒಂದಿಷ್ಟಾ
ದರೂ ಮೊತ್ತವು ಬ್ಯಾಂಕ್ ಕಡೆಗೇ ಸಾಗಲಿ ಎಂದು ಬಯಸಿರಬಹುದು. ದೇಶದ ಬಂಡವಾಳ ಮಾರು
ಕಟ್ಟೆಗಳಲ್ಲಿ ಹೂಡಿಕೆಯನ್ನು ನಿರುತ್ತೇಜಿಸುವ ನಕಾರಾತ್ಮಕ ಉದ್ದೇಶವು ಸರ್ಕಾರಕ್ಕೆ ಇರುವ ಸಾಧ್ಯತೆ ಕಡಿಮೆ. ಆದರೆ, ಬಂಡವಾಳ ಮಾರುಕಟ್ಟೆಗಳಲ್ಲಿ ಅಲ್ಪಾವಧಿಯ ಹೂಡಿಕೆ ತಗ್ಗಲಿ; ಅದರ ಬದಲಿಗೆ ದೀರ್ಘಾವಧಿಗೆ ಹೂಡಿಕೆ ಹೆಚ್ಚಾಗಲಿ ಎಂಬ ಉದ್ದೇಶ ಸರ್ಕಾರದ್ದಾಗಿರಬಹುದು. ಬಹುಶಃ ಇದೇ ಉದ್ದೇಶದಿಂದ ಅಲ್ಪಾವಧಿ ಹೂಡಿಕೆಗೆ ಸಂಬಂಧಿಸಿದ ಎಸ್‌ಟಿಸಿಜಿ ತೆರಿಗೆ ಪ್ರಮಾಣ ಶೇ 15 ಇದ್ದಿದ್ದನ್ನು ಶೇ 20ಕ್ಕೆ ಹೆಚ್ಚು ಮಾಡಲಾಗಿದೆ. ಹಾಗೆಯೇ, ಆಪ್ಷನ್ಸ್ ಮತ್ತು ಫ್ಯೂಚರ್ಸ್ ವಹಿವಾಟುಗಳಿಗೆ ಸಂಬಂಧಿ
ಸಿದ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ತೆರಿಗೆಯನ್ನು ಹೆಚ್ಚು ಮಾಡಿರುವುದರ ಹಿಂದೆಯೂ, ಅಲ್ಪಾವಧಿಯ ವಹಿ
ವಾಟುಗಳನ್ನು ನಿರುತ್ತೇಜಿಸುವ ಉದ್ದೇಶ ಇದ್ದಿರಬಹುದು.
ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿನ ಷೇರು ಗಳ ಮೌಲ್ಯವು ಅವುಗಳ ನಿಜಮೌಲ್ಯಕ್ಕಿಂತ ಬಹಳ ದುಬಾರಿ ಆಗಿವೆ ಎಂಬ ವಾದವೊಂದು ಕೆಲವು ಸಮಯ
ದಿಂದ ಚಾಲ್ತಿಯಲ್ಲಿದೆ. ಸರ್ಕಾರವು ಈ ವಾದವನ್ನು ಗಂಭೀರವಾಗಿ ಪರಿಗಣಿಸಿರಬಹುದು. ತೆರಿಗೆ ಪ್ರಮಾಣ
ವನ್ನು ಹೆಚ್ಚಿಸಿ, ಹೂಡಿಕೆದಾರರು ಬಂಡವಾಳ ಮಾರುಕಟ್ಟೆಗಳಲ್ಲಿ ಅತಿಯಾಗಿ ವಹಿವಾಟು ನಡೆಸದಿರುವಂತೆ ಮಾಡಿ, ಆ ಮೂಲಕ ಬಂಡವಾಳ ಮಾರುಕಟ್ಟೆಗಳಲ್ಲಿ
ವಹಿವಾಟಿಗೆ ಲಭ್ಯವಿರುವ ಷೇರುಗಳ ಮೌಲ್ಯದಲ್ಲಿ ಸಮತೋಲನ ತರುವ ಉದ್ದೇಶವನ್ನು ಕೂಡ ಕೇಂದ್ರವು ಹೊಂದಿರಬಹುದು. ಅದೇನೇ ಇದ್ದರೂ, ಕೇಂದ್ರದ ನಡೆಯ ಪರಿಣಾಮವಾಗಿ ಹೂಡಿಕೆ ಪ್ರವೃತ್ತಿಗೆ ಅಲ್ಪಾವಧಿ
ಯಲ್ಲಂತೂ ತಣ್ಣೀರೆರಚಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.