1949ರ ನ. 25ರಂದು ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ ಡಾ. ಅಂಬೇಡ್ಕರ್ ಆಡಿದ ಮಾತುಗಳು ಸದಾ ಉಲ್ಲೇಖನೀಯ. ‘ಸಂವಿಧಾನ ಎಷ್ಟೇ ಒಳ್ಳೆಯದಾಗಿರಬಹುದು. ಆದರೆ, ಕೆಟ್ಟವರಿಗೆ ಕೆಲಸ ಮಾಡಲು ಬಿಟ್ಟರೆ ಕೆಟ್ಟ ಫಲಿತಾಂಶವೇ ಸಿಗುತ್ತದೆ. ಸಂವಿಧಾನವು ಎಷ್ಟೇ ಕೆಟ್ಟದ್ದಾಗಿರಬಹುದು; ಒಳ್ಳೆಯ ವ್ಯಕ್ತಿಗಳಿಗೆ ಇದನ್ನು ಪಾಲಿಸಲು ಬಿಟ್ಟರೆ ಅದರ ಫಲಿತಾಂಶವು ಉತ್ತಮವೇ ಆಗಿರುತ್ತದೆ.’
ಸಂವಿಧಾನದ ಕಾರ್ಯನಿರ್ವಹಣೆ ಅದರ ಗುಣಲಕ್ಷಣದ ಮೇಲೆ ಸಂಪೂರ್ಣವಾಗಿ ಅವಲಂಬಿತ ವಾಗಿರುವುದಿಲ್ಲ. ಯಾವುದೇ ದೇಶದ ರಾಜ್ಯಾಂಗದ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ, ಆ ದೇಶದ ಪ್ರಜೆಗಳು ಮತ್ತು ಅವರ ಆಶಯಗಳನ್ನು ಈಡೇರಿಸುವುದಕ್ಕೆ ತಮ್ಮ ಸಾಧನವಾಗಿ ಆಯ್ಕೆ ಮಾಡಿಕೊಂಡ ರಾಜಕೀಯ ಪಕ್ಷಗಳು.
ಪ್ರಭುತ್ವವು ಜಾತಿ, ಧರ್ಮ, ಲಿಂಗ, ವರ್ಣ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ಸಂವಿಧಾನ ಪ್ರತಿಪಾದಿಸಿದೆ. ಮುಟ್ಟಾಗುವ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶದ ಹಕ್ಕು ಮೊಟಕು ಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಶಬರಿಮಲೆ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ಈ ತೀರ್ಪಿನ ತಿರುಳನ್ನು ಜನರಿಗೆ ತಿಳಿಸಿ ಅರಿವು ಮೂಡಿಸಬೇಕಾಗಿದ್ದ ರಾಜಕೀಯ ಪಕ್ಷಗಳು ಜನರ ಗುಂಪಿನ ಹಿಂದೆ ನಿಂತು ಪ್ರಚೋದಿಸಿ, ತೀರ್ಪಿನ ವಿರುದ್ಧ ಜನಾಭಿಪ್ರಾಯ ರೂಪಿಸಿದವು. ಒಂದು ಪಕ್ಷವಂತೂ, ‘ತೀರ್ಪು ಅಯ್ಯಪ್ಪನ ಭಕ್ತರ ನಂಬಿಕೆಗೆ ವಿರುದ್ಧ. ಇದನ್ನು ಜಾರಿಗೊಳಿಸಬಾರದು’ ಎಂದು ಸಾರ್ವಜನಿಕವಾಗಿಯೇ ಮಾತನಾಡಿತು.
ಜನರ ವೈಯಕ್ತಿಕ ನಂಬಿಕೆ, ಆಚರಣೆಗಳನ್ನು ಸಾರ್ವತ್ರಿಕಗೊಳಿಸಿ ಸಮಾನತೆಯ ಹಕ್ಕುಗಳನ್ನು ನಾಶ ಮಾಡಿದ ಹಲವು ಉದಾಹರಣೆಗಳು ದೇಶದ ರಾಜಕೀಯ ಚರಿತ್ರೆಯಲ್ಲಿ ಅಡಗಿವೆ. 1985ರ ಶಾ ಬಾನೊ ಪ್ರಕರಣ
ದಲ್ಲಿ, ವಿಚ್ಛೇದಿತ ಮುಸ್ಲಿಂ ಮಹಿಳೆ ಗಂಡನಿಂದ ಜೀವನಾಂಶ ಪಡೆಯಲು ಅರ್ಹ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮುಸ್ಲಿಂ ಮೂಲಭೂತವಾದಿಗಳ ಒತ್ತಡದ ಪರಿಣಾಮವಾಗಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸುಪ್ರೀಂ ಕೋರ್ಟ್ ತೀರ್ಪನ್ನು ಅಸಿಂಧುಗೊಳಿಸುವಂತಹ ಹೊಸ ಮಸೂದೆ ತಂದರು!
ಶಬರಿಮಲೆ ತೀರ್ಪು ಹೊರಬಿದ್ದ ನಂತರದ ಘಟನೆಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಮರು ಪರಿಶೀಲನಾ ಅರ್ಜಿ ಹೊಸ ಇತಿಹಾಸ ಬರೆದಿವೆ. ಸುಪ್ರೀಂ ಕೋರ್ಟ್ ತಾನೇ ನೀಡಿದ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸಲು ಅವಕಾಶವಿದೆ. ಹೊಸದಾದ ಮತ್ತು ಅತಿಮುಖ್ಯವೆನಿಸಿದ ಸಾಕ್ಷ್ಯ ದೊರಕಿದಾಗ, ತೀರ್ಪಿನಲ್ಲಿ ಮೇಲ್ನೋಟಕ್ಕೆ ಗುರುತರವಾದ ತಪ್ಪು ಕಂಡು ಬಂದಲ್ಲಿ ಮತ್ತು ಸಮಂಜಸ ಕಾರಣಗಳು ಇದ್ದಾಗ ಮಾತ್ರ, ಈ ಹಿಂದೆ ನೀಡಿರುವ ತೀರ್ಪಿನ ಮರು ಪರಿಶೀಲನೆ ಮಾಡಲು ಸಾಧ್ಯ ಎಂಬ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಶಬರಿಮಲೆ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸುವಂತೆ ಕೋರಲಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಗೊಂದಲಮಯವಾಗಿದೆ.
ಮರು ಪರಿಶೀಲನಾ ಅರ್ಜಿಗಳನ್ನು ಈ ಹಿಂದೆ ತೀರ್ಪು ನೀಡಿದ ನ್ಯಾಯಮೂರ್ತಿಗಳೇ ವಿಚಾರಣೆ ನಡೆಸುವುದು ರೂಢಿ. ಆದರೆ ತೀರ್ಪು ನೀಡಿದ ನ್ಯಾಯಮೂರ್ತಿಗಳು ನಿವೃತ್ತರಾಗಿದ್ದರೆ ಅವರ ಸ್ಥಾನವನ್ನು ಇನ್ನೊಬ್ಬರು ತುಂಬುತ್ತಾರೆ. ಹಿಂದೆ ಶಬರಿಮಲೆ ಪ್ರಕರಣದ ವಿಚಾರಣೆ ನಡೆಸಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರು ನಿವೃತ್ತರಾಗಿದ್ದರು. ಈ ಕಾರಣಕ್ಕೆ ಅವರ ಬದಲಿಗೆ ಮತ್ತೊಬ್ಬರು ನ್ಯಾಯಮೂರ್ತಿಯನ್ನು ಒಳಗೊಂಡ ಐವರು ಸದಸ್ಯರ ಪೀಠದ ನೇತೃತ್ವವನ್ನು ಮುಖ್ಯ ನ್ಯಾಯಮೂರ್ತಿ ವಹಿಸಿದ್ದರು. ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಮೂವರು, ಈ ಪ್ರಕರಣದಿಂದ ಹಾಗೂ ಇತರ ಕೆಲವು ಪ್ರಕರಣಗಳಿಂದ ಉದ್ಭವ ಆಗಿರುವ ಪ್ರಶ್ನೆಗಳನ್ನು ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠ ತೀರ್ಮಾನಿಸಿದ ಬಳಿಕ ಮರು ಪರಿಶೀಲನಾ ಅರ್ಜಿಯನ್ನು ಪರಿಗಣಿಸಬಹುದು ಎಂದು ಹೇಳಿದ್ದಾರೆ.
ಹೊಸದಾಗಿ ಸಲ್ಲಿಸಲಾಗುವ ರಿಟ್ ಅರ್ಜಿಗಳು ರೂಢಿಯಲ್ಲಿರುವ ನಿಯಮದಂತೆ ಇಬ್ಬರು ಅಥವಾ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಬರುತ್ತವೆ. ಅರ್ಜಿದಾರರು ತಮ್ಮ ಪ್ರಕರಣ ದಲ್ಲಿ ಮಹತ್ವದ ಸಾಂವಿಧಾನಿಕ ಅಂಶಗಳು ಅಡಗಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ನಂತರವಷ್ಟೇ ಸಂವಿಧಾನ ಪೀಠದ ಮುಂದೆ ವಿಚಾರಣೆಗೆ ಬರುವ ಅರ್ಹತೆಯನ್ನು ಆ ಅರ್ಜಿ ಪಡೆದುಕೊಳ್ಳುತ್ತದೆ. ಈ ಹಿಂದೆ ನೀಡಿದ ತೀರ್ಪಿನಲ್ಲಿ ಮೇಲ್ನೋಟಕ್ಕೆ ಕಾಣುವ ಗುರುತರ ತಪ್ಪುಗಳನ್ನು ಅರ್ಜಿದಾರರು ಎತ್ತಿ ತೋರಿಸಿದಾಗ ಮಾತ್ರ ಅದರ ಪುನರ್ ಪರಿಶೀಲನೆಯ ಹೊಣೆಯನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗುತ್ತದೆ. ಇದು ಐವರು ನ್ಯಾಯಮೂರ್ತಿಗಳ ಮುಂದೆ ನಡೆಯುವ ವಿಚಾರಣೆಗೂ ಅನ್ವಯವಾಗುತ್ತದೆ. ಗಣನೀಯ ಅನ್ನಿಸುವ ತಪ್ಪುಗಳು ಐದು ಜನ ಇದ್ದ ನ್ಯಾಯಪೀಠ ನೀಡಿದ ತೀರ್ಪಿನಲ್ಲಿ ಇವೆ ಎಂಬುದನ್ನು ಎತ್ತಿ ತೋರಿಸಿದಾಗ ಆ ತೀರ್ಪು ಏಳು ಸದಸ್ಯರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರುತ್ತದೆ.
ನ್ಯಾಯ ವಿತರಣಾ ವ್ಯವಸ್ಥೆಯ ಪಾವಿತ್ರ್ಯವನ್ನು ಕಾಪಿಟ್ಟುಕೊಳ್ಳಲು ಮತ್ತು ತೀರ್ಪುಗಳು ತಾರ್ಕಿಕ ಅಂತ್ಯ ಕಾಣಬೇಕು ಎಂಬ ಉದ್ದೇಶದಿಂದ ಹಲವಾರು ದಶಕಗಳಿಂದ ಈ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶದ ಹಕ್ಕು ಎತ್ತಿ ಹಿಡಿದಿದ್ದ ತೀರ್ಪಿನಲ್ಲಿ ಮೇಲ್ನೋಟಕ್ಕೆ ಏನು ತಪ್ಪು ಇದೆ ಎಂಬ ಅಂಶವನ್ನು ಐವರು ನ್ಯಾಯಮೂರ್ತಿಗಳ ಪೀಠ ಮೊದಲು ತಿಳಿಸಬಹುದಿತ್ತು. ಎರಡನೆಯದು, ಹೊಸದಾಗಿ ಸಲ್ಲಿಸಲಾದ ರಿಟ್ ಅರ್ಜಿಗಳು ನೇರವಾಗಿ ಐವರು ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಅರ್ಹತೆಯನ್ನು ಪಡೆದದ್ದಾದರೂ ಹೇಗೆ ಎಂಬ ಅಂಶದ ಕುರಿತು ಸ್ಪಷ್ಟವಾಗಿ ಚರ್ಚಿಸಬಹುದಿತ್ತು.
ಪ್ರಾರ್ಥನಾ ಸ್ಥಳಗಳಿಗೆ ಮಹಿಳೆಯರ ಪ್ರವೇಶ ಕುರಿತಂತೆ ಹಲವಾರು ಪ್ರಕರಣಗಳು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇವೆ. ಅವುಗಳಲ್ಲಿ ಮಸೀದಿ ಮತ್ತು ಪಾರ್ಸಿ ಶ್ರದ್ಧಾ ಕೇಂದ್ರಗಳಿಗೆ ಮಹಿಳೆಯರ ಪ್ರವೇಶ, ಧಾರ್ಮಿಕ ಆಚರಣೆಯ ನೆಪದಲ್ಲಿ ದಾವೂದಿ ಬೋರಾ ಸಮುದಾಯದ ಮಹಿಳೆಯರ ಜನನಾಂಗ ವಿರೂಪಗೊಳಿಸುವಂತಹ ಪ್ರಕರಣಗಳೂ ಸೇರಿವೆ. ಈ ಎಲ್ಲಾ ವಿಷಯಗಳ ಕುರಿತಾದ ಸಾಂವಿಧಾನಿಕ ಹಕ್ಕುಗಳನ್ನು ಮರು ವ್ಯಾಖ್ಯಾನಿಸಲು ಏಳು ಸದಸ್ಯರ ವಿಸ್ತೃತ ನ್ಯಾಯಪೀಠ ಬೇಕು ಎಂದು ಐವರು ಸದಸ್ಯರ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಕಳೆದ ವರ್ಷ ಶಬರಿಮಲೆ ತೀರ್ಪು ಬಂದಿದೆ. ಮಸೀದಿಗೆ ಮಹಿಳೆಯರ ಪ್ರವೇಶ ಪ್ರಕರಣವು ಮುಂದೆ ವಿಚಾರಣೆಗೆ ಬರಬಹುದು. ಶಬರಿಮಲೆ ವಿಚಾರದಲ್ಲಿ ಈಗಾಗಲೇ ಒಂದು ನಿಲುವು ಪ್ರಕಟವಾಗಿದೆ. ಉಳಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ನಿಲುವು ತಳೆದಿಲ್ಲ. ಎಲ್ಲ ಪ್ರಕರಣಗಳು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆಯೇ ತೋರುತ್ತವೆ. ಸದ್ಯ ವಿಸ್ತೃತ ಪೀಠಕ್ಕೆ ಕಳುಹಿಸಿರುವ ಅಂಶಗಳು ಸಾಂವಿಧಾನಿಕ ಪ್ರಶ್ನೆ
ಗಳಾಗಿದ್ದು, ಅವು ಮುಂದೆ ಶಬರಿಮಲೆ ಮೂಲ ತೀರ್ಪಿನ ಮೇಲೆ ಪರಿಣಾಮ ಬೀರಬಹುದು. ಅಲ್ಲದೇ ವಿಸ್ತೃತ ಪೀಠವು ವಿಚಾರಣೆ ಕಾಲಕ್ಕೆ ಕೇರಳ ಹಿಂದೂ ಸಾರ್ವಜನಿಕ ಪೂಜಾ ಸ್ಥಳ (ಪ್ರವೇಶ) ನಿಯಮಗಳು, 1965 ಕುರಿತು ಚರ್ಚಿಸಬಹುದು. ಮರು ಪರಿಶೀಲನೆಗೆ ಸಂಬಂಧಿಸಿದಂತೆ ಕಾರಣಗಳನ್ನು ನೀಡದ ನ್ಯಾಯಪೀಠವು ವಿಸ್ತೃತ ಪೀಠವೇ ಎಲ್ಲವನ್ನೂ ತೀರ್ಮಾನಿಸಬಹುದು ಎಂಬಂತೆ ಹೇಳಿದೆ.
ಐವರು ನ್ಯಾಯಮೂರ್ತಿಗಳ ಪೈಕಿ ಭಿನ್ನ ತೀರ್ಪು ನೀಡಿರುವ ನ್ಯಾಯಮೂರ್ತಿ ಆರ್.ಎಫ್. ನರಿಮನ್ ಮತ್ತು ಡಿ.ವೈ. ಚಂದ್ರಚೂಡ್ ‘ಕಾನೂನಿನ ಸಾರ್ವಭೌಮತ್ವ ಹೊಂದಿರುವ ದೇಶದಲ್ಲಿ ಜನರ
ಪ್ರತಿಭಟನೆಗಳ ಕಾರಣಕ್ಕೆ, ನ್ಯಾಯ ವಿತರಣಾ ಪದ್ಧತಿಯು ಸಾಗಿ ಬಂದ ಹಾದಿಯಲ್ಲಿ ಹಿಮ್ಮುಖವಾಗಿ ಚಲಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಜನ ಗೌರವಿಸಬೇಕು ಮತ್ತು ಸರ್ಕಾರವು ಅದನ್ನು ಜಾರಿಗೆ ತರಬೇಕಾದದ್ದು ಸಾಂವಿಧಾನಿಕ ಜವಾಬ್ದಾರಿ’ ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳು, ಅಂದು ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಹೇಳಿದ್ದ ಮಾತುಗಳು ಇಂದಿಗೂ ಸಲ್ಲುವಂತೆ ಮಾಡಿವೆ!
ಲೇಖಕ: ಹೈಕೋರ್ಟ್‌ನಲ್ಲಿ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.