ಉತ್ತರಪ್ರದೇಶದ ಜಹಾಂಗೀರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಅಖಿಲೇಶ್ ರಾವತ್ ಎನ್ನುವ ವ್ಯಕ್ತಿ ಕೌಟುಂಬಿಕ ಕಲಹದ ಕಾರಣಕ್ಕೆ ಪತ್ನಿಯ ರುಂಡ ಕಡಿದು ಸಾರ್ವಜನಿಕವಾಗಿ ಪೊಲೀಸ್ ಠಾಣೆಗೆ ತಂದ. ಪೋಲಿಸರು ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ರಾಷ್ಟ್ರಗೀತೆ ಹಾಡಿ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ ಎಂಬ ಆತಂಕಕಾರಿ ಸಂಗತಿ ವರದಿಯಾಗಿದೆ.
ಮೊನ್ನೆ ದೆಹಲಿಯ ಗಾರ್ಗಿ ಕಾಲೇಜಿಗೆ ನುಗ್ಗಿದ ಆಗಂತುಕರು(!), ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೆಣ್ಣುಮಕ್ಕಳ ಮೇಲೆ ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಹೀಗೆ ಪುಂಡಾಟಿಕೆ ಮೆರೆಯುವಾಗ ಅವರು ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗಿದ್ದಾರೆ ಎಂದೂ ವರದಿಯಾಗಿದೆ.
ಈ ಎರಡೂ ಘಟನೆಗಳ ಕುರಿತು ಸರ್ಕಾರ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಗಾರ್ಗಿ ಕಾಲೇಜಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿದೆ. ಹಾಗಿದ್ದರೂ ಈ ಪ್ರಕರಣಗಳನ್ನು ಸಹಜ ಆಡಳಿತಾತ್ಮಕ ಲೋಪ ಎಂಬ ನೆಲೆಯನ್ನು ಮೀರಿ, ಬದಲಾಗುತ್ತಿರುವ ನಮ್ಮ ಸಾಮಾಜಿಕ ವ್ಯವಸ್ಥೆಯ ಭಾಗವಾಗಿಯೇ ನಾವು ಗಮನಿಸಬೇಕಿದೆ.
ನಮ್ಮನ್ನು ಆಳುವ ವರ್ಗವು ಈ ಪ್ರಕರಣಗಳು ಕೇವಲ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪು ಮಾಡಿದ ಕೃತ್ಯ, ಕಾನೂನು ಸುವ್ಯವಸ್ಥೆಯಲ್ಲಿನ ಲೋಪ ಎಂಬ ಕಾರಣಗಳನ್ನು ನೀಡಿದರೂ, ಇವು ವರ್ತಮಾನದ ಅಧಿಕಾರ-ರಾಜಕೀಯವು ದೇಶ, ಧರ್ಮ, ಸಂಸ್ಕೃತಿಗಳ ಕುರಿತು ಸಮಾಜದಲ್ಲಿ ಸೃಷ್ಟಿಸುತ್ತಿರುವ ಸಂಕುಚಿತ ಮತ್ತು ರೋಗಗ್ರಸ್ತ ನಿರೂಪಣೆಗಳಿಂದ ಪ್ರಭಾವಿತವಾಗಿವೆ ಎಂಬ ಸಂಗತಿಯನ್ನು ನಾವು ಗಮನಿಸಬೇಕಿದೆ. ಈ ಅಪಾಯಕಾರಿ ನಿರೂಪಣೆಗಳ ಬಲಿಪಶುಗಳು ಹದಿಹರೆಯದ ಯುವ ತಲೆಮಾರು ಎಂಬುದು ಮತ್ತಷ್ಟು ಆತಂಕಕ್ಕೆ ದೂಡುವ ಸಂಗತಿಯಾಗಿದೆ. ಹೆಚ್ಚುತ್ತಿರುವ ಈ ಮಾದರಿಯ ವಿದ್ಯಮಾನಗಳಿಗೆ ಕಾರಣವೇನು? ಇದನ್ನು ಎದುರಿಸುವ ಬಗೆ ಯಾವುದು ಎಂಬ ಸವಾಲು ನಾಗರಿಕ ಸಮುದಾಯವನ್ನು ಕಾಡುತ್ತಿದೆ.
ಪ್ರಸಿದ್ಧ ರಾಜಕೀಯ ಚಿಂತಕಿ ಹಾನಾ ಆರೆಂಟ್ ‘ಜನಾಂಗೀಯ ಮತ್ತು ಧಾರ್ಮಿಕ ಉನ್ಮಾದದಿಂದ ಕೂಡಿದ ರಾಜಕೀಯ ನಿರೂಪಣೆಗಳು, ಕೆಡುಕೆಂಬುದು ಅಪಾಯಕಾರಿಯಲ್ಲದ ವೇಷ ತೊಟ್ಟು ಹೇಗೆ ಸಹಜ
ವಾಗಿ ಆಡಳಿತ ನೀತಿಗಳ ಭಾಗವಾಗಲು ನೆರವಾಗುತ್ತವೆ’ ಎಂಬ ಸಂಗತಿಯನ್ನು ಲೇಖನವೊಂದರಲ್ಲಿ ವಿಶ್ಲೇಷಿಸಿದ್ದಾರೆ. ಭಾರತೀಯ ಸಂದರ್ಭದಲ್ಲಿ ಇದೇ ಮಾದರಿಯ ವಿಶ್ಲೇಷಣೆಯನ್ನು ಆನಂದ್ ತೇಲ್ತುಂಬ್ಡೆ ಅವರು, ಜಾತಿಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ತಳಜಾತಿಗಳ ಹೆಣ್ಣುಮಕ್ಕಳ ಮೇಲೆ ದಾಳಿಗಳು ನಡೆದಾಗ ಹೇಗೆ ‘ವ್ಯವಸ್ಥೆಯೂ ಒಂದು ಜಾತಿ’ಯಂತೆ ವರ್ತಿಸುತ್ತದೆ ಎಂದು ತಮ್ಮ ‘ಖೈರ್ಲಾಂಜಿ’ ಎಂಬ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ. ಇಲ್ಲಿ ವ್ಯವಸ್ಥೆಯ ಗಡುಸಾದ ಗಂಡು ಕಲ್ಪನೆ ಢಾಳಾಗಿ ಕಾಣುತ್ತದೆ.
ಇಂದು ನಮ್ಮ ನಡುವೆ ರಾಜಕೀಯದ ಹೆಸರಿನಲ್ಲಿ ನಡೆಯುತ್ತಿರುವ ಬಹುತೇಕ ಸಂಗತಿಗಳು, ಮೇಲೆ ಪ್ರಸ್ತಾಪಿಸಿದ ಮನೋಭೂಮಿಕೆಯನ್ನೇ ಆಧರಿಸಿವೆ. ಅದು ಉತ್ತರಪ್ರದೇಶ, ದೆಹಲಿಯ ಘಟನೆಗಳಲ್ಲಿ ಪುರುಷರು ವರ್ತಿಸಿದ ರೀತಿ ಇರಬಹುದು, ಕರ್ನಾಟಕದ ಕರಾವಳಿ ಮತ್ತು ಬೀದರ್ ಶಾಲೆಗಳಲ್ಲಿ ನಡೆದ ‘ನಾಟಕ’ದ ಘಟನೆಗಳನ್ನು ನಮ್ಮ ಆಡಳಿತ ವ್ಯವಸ್ಥೆ ನಿರ್ವಹಿಸುತ್ತಿರುವ ರೀತಿಯಿರಬಹುದು. ಆಳುವ ವರ್ಗ ಹೊಂದಿರುವ ಈ ತೆಳುವಾದ ಸಾಮಾಜಿಕ ಗ್ರಹಿಕೆಯ ಕಾರಣಕ್ಕಾಗಿಯೇ ಕರಾವಳಿಯ ಜಾತ್ರೆಗಳಲ್ಲಿ ‘ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ’ ಎಂಬ ಫಲಕಗಳು ಪ್ರದರ್ಶನಗೊಳ್ಳುವುದು ‘ಸಹಜ’ ಎಂಬ ಸ್ಥಿತಿಗೆ ಆಡಳಿತ ವ್ಯವಸ್ಥೆ ಮತ್ತು ಸಮುದಾಯ ಎರಡೂ ತಲುಪಿದಂತಿವೆ. ಇದು, ಸಮಾಜವೊಂದು ತಲುಪಬಹುದಾದ ನಿರ್ಭಾವುಕ ಜಡಸ್ಥಿತಿ. ಇದನ್ನು ಮೀರುವ ದಾರಿಗಳನ್ನು ಕುರಿತು ನಾವು ಆಲೋಚಿಸಬೇಕಿದೆ. ಇಲ್ಲವಾದರೆ ‘ಸಾಮಾಜಿಕ ವ್ಯವಸ್ಥೆ’ ಅರಾಜಕತೆಯಾಗಿ ಮಾರ್ಪಡುತ್ತದೆ.
ಈ ದಾರಿಯಲ್ಲಿ ನಮಗೆ ಸ್ತ್ರೀವಾದಿ ಕಣ್ಣೋಟಗಳು ನೆರವಾಗಬಹುದು ಅನ್ನಿಸುತ್ತದೆ. ತಂತ್ರಜ್ಞಾನಕೇಂದ್ರಿತ ಆಧುನಿಕತೆಯ ಮಿತಿಯು ಅದು ತನ್ನನ್ನು ಸಮರ್ಥಿಸಿಕೊಳ್ಳಲು ತನಗಿಂತ ವಿರುದ್ಧವಾದ ಅನ್ಯವೊಂದನ್ನು ಸೃಷ್ಟಿಸಿಕೊಳ್ಳುತ್ತದೆ. ಉದಾಹರಣೆಗೆ, ಆಧುನಿಕತೆ ತನ್ನನ್ನು ಸಮರ್ಥಿಸಿಕೊಳ್ಳಲು ಸಂಪ್ರದಾಯ ಎಂಬ ವಿದ್ಯಮಾನವೊಂದನ್ನು ರೂಪಿಸಿಕೊಂಡಿದೆ. ಆದರೆ ವಾಸ್ತವದಲ್ಲಿ ಆಧುನಿಕ ಮತ್ತು ಸಂಪ್ರದಾಯ ಎಂಬ ವಿದ್ಯಮಾನಗಳು ಹಾಗೂ ಅವುಗಳ ನಡುವಿನ ವೈರುಧ್ಯ ಎರಡೂ ಆಧುನಿಕತೆಯ ಸೃಷ್ಟಿಯೇ ಆಗಿರುತ್ತವೆ!
ಆಧುನಿಕ ಎಂದು ಗುರುತಿಸುವ ಚಿಂತನೆ ಧಾರೆಯಲ್ಲಿನ ಈ ಮಿತಿಯೇ ಹೆಚ್ಚುತ್ತಿರುವ ಧಾರ್ಮಿಕ ಮತ್ತು ಲಿಂಗಾಧಾರಿತ ಹಿಂಸೆಗೆ ಮೂಲ ಕಾರಣ ಎಂಬುದನ್ನು ಆಧುನಿಕ ಸ್ತ್ರೀವಾದಿ ಚಿಂತನೆ ಗುರುತಿಸಿದೆ. ಭಿನ್ನತೆಯನ್ನೇ ನಾವು ಅನ್ಯವಾಗಿಸಿ ಚರ್ಚಿಸಿದ್ದರ ಪರಿಣಾಮ, ಸಂವಾದದ ಜಾಗದಲ್ಲಿ ಸಂಘರ್ಷ ಏರ್ಪಟ್ಟಿದೆ ಎಂಬ ಅರಿವನ್ನು ಸ್ತ್ರೀವಾದಿ ಕಣ್ಣೋಟ ಇಂದು ಚರ್ಚಿಸುತ್ತಿದೆ. ಆ ಕಾರಣಕ್ಕೆ ಸಹಜ ಸಾಮಾಜಿಕ ಸ್ಥಿತಿಯಲ್ಲಿ ಭಿನ್ನತೆ ಎಂಬುದು ನೈಸರ್ಗಿಕ ಸ್ಥಿತಿ. ಅದನ್ನು ಅನ್ಯಗೊಳಿಸದೆ, ಭಿನ್ನವಿದ್ದೂ ಬೆರೆಯಬಹುದಾದ ಲೋಕದೃಷ್ಟಿಯೊಂದನ್ನು ನಾವು ಕಟ್ಟಿಕೊಳ್ಳಬೇಕಿದೆ ಎಂಬ ತಿಳಿವನ್ನು ಸ್ತ್ರೀವಾದ ನಮ್ಮ ಮುಂದಿಟ್ಟಿದೆ. 21ನೇ ಶತಮಾನದ ಜಗತ್ತಿಗೆ ಈ ಅರಿವು ಅರ್ಥವಾದರೆ, ಇಂದು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಂದ ನಾವು ಪಾರಾಗಬಹುದಾಗಿದೆ ಅನ್ನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.