ADVERTISEMENT

ಸಂಗತ | ಮನೆಯಿಂದಲೇ ಕೆಲಸ; ಮಹಿಳೆಗೆ ವರವೇ?

ಡಾ .ಕೆ.ಎಸ್.ಚೈತ್ರಾ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
   

ಹಿಂದಿನ ವರ್ಷದ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಮಹಿಳಾ ಉದ್ಯೋಗಿಗಳು ಅಧಿಕ ಪ್ರಮಾಣದಲ್ಲಿ ಟೆಕ್ ಕಂಪನಿಗಳ ಉದ್ಯೋಗವನ್ನು ತೊರೆದಿದ್ದಾರೆ. ಪುರುಷರಿಗೆ ಹೋಲಿಸಿದರೆ ಈ ಪ್ರಮಾಣ ಎರಡು ಪಟ್ಟು ಹೆಚ್ಚು. ಕಾರಣಗಳು ಅನೇಕವಿದ್ದರೂ, ಮನೆಯಿಂದ ಕೆಲಸ ಮಾಡುವ (ವರ್ಕ್ ಫ್ರಮ್ ಹೋಂ) ಪದ್ಧತಿಯನ್ನು ಅನೇಕ ಕಂಪನಿಗಳು ನಿಲ್ಲಿಸಿರುವುದು ಪ್ರಮುಖವಾದದ್ದು! ಇಂಥ ಮಹಿಳೆಯರ ಸಂಖ್ಯೆ ಶೇಕಡ 40ರಷ್ಟಿದೆ ಮತ್ತು ಅವರಲ್ಲಿ ಹೆಚ್ಚಿನವರು 30ರಿಂದ 40 ವರ್ಷ ವಯಸ್ಸಿನವರು ಎಂದು ಇಂಕ್ರೂಟರ್ ಸಂಸ್ಥೆಯ ಇತ್ತೀಚಿನ ಅಧ್ಯಯನದಲ್ಲಿ ತಿಳಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಆರೋಗ್ಯದ ದೃಷ್ಟಿಯಿಂದ ಜಾರಿಗೆ ಬಂದಿದ್ದು ಈ ಮನೆಯಿಂದ ಕೆಲಸ ಮಾಡುವ ಪದ್ಧತಿ. ಇದು ಮಹಿಳಾ ಉದ್ಯೋಗಿಗಳಲ್ಲಿ ಬಹಳಷ್ಟು ಜನಪ್ರಿಯವಾಯಿತು. ಅದರಲ್ಲಿಯೂ 30ರಿಂದ 40 ವರ್ಷದ ಮಹಿಳೆಯರಲ್ಲಿ ಮದುವೆ, ಮಕ್ಕಳು, ಹಿರಿಯರ ಆರೈಕೆ ಹೀಗೆ ಜವಾಬ್ದಾರಿಗಳ ಹೊಣೆ ಹೆಚ್ಚು. ಅಂಥವರಿಗೆ ಮನೆಯಿಂದಲೇ ಕೆಲಸ ಈ ಎಲ್ಲವನ್ನೂ ಹೇಗೋ ನಿಭಾಯಿಸುವ ಅವಕಾಶವನ್ನು ನೀಡಿತ್ತು. ಎರಡು–ಮೂರು ವರ್ಷ ಈ ರೀತಿ ಕೆಲಸಕ್ಕೆ ಹೊಂದಿಕೊಂಡು ಈಗ ಇದ್ದಕ್ಕಿದ್ದಂತೆ ಕಚೇರಿಗೆ ಮರಳುವುದೆಂದರೆ ಮಹಿಳೆಯರಿಗೆ ಕಷ್ಟವೆನಿಸುವುದು ಸಹಜವೇ. ಹೀಗಾಗಿ ರಾಜೀನಾಮೆ ನೀಡುವುದು, ಮನೆ ಹತ್ತಿರ ಇರುವ ಕಂಪನಿಯಲ್ಲಿ ಉದ್ಯೋಗಕ್ಕಾಗಿ ಹುಡುಕಾಟ, ಕಡಿಮೆ ಸಂಬಳವಾದರೂ ಪರವಾಗಿಲ್ಲ ಎನ್ನುವ ರಾಜಿ ಮನೋಭಾವ, ಸ್ವತಂತ್ರವಾಗಿ ಸಣ್ಣಪುಟ್ಟ ಕೆಲಸ ಮಾಡಲು ಪ್ರಯತ್ನ ಇವೆಲ್ಲವೂ ಸಾಮಾನ್ಯವಾಗಿವೆ.

ಮನೆಯಿಂದಲೇ ಕೆಲಸದಿಂದ ಮಹಿಳಾ ಉದ್ಯೋಗಿಗಳಿಗೆ ಅನೇಕ ಲಾಭಗಳಿವೆ. ಮಹಾನಗರಗಳಲ್ಲಿ ದೀರ್ಘಕಾಲ ಪಯಣಿಸುವುದರಿಂದ ಮಹಿಳೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿಯುತ್ತಾಳೆ. ಪರಿಣಾಮವಾಗಿ ಮಹಿಳೆ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಮನೆಯಿಂದಲೇ ಕೆಲಸ ಮಾಡುವುದರಿಂದ ಈ ಪ್ರಯಾಣದ ಸಮಯದ ಜತೆ ಶಕ್ತಿಯ ಉಳಿತಾಯ. ಉದ್ಯೋಗದ ಜತೆ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು, ಹಣದ ಜವಾಬ್ದಾರಿ, ಬ್ಯಾಂಕ್ ಕೆಲಸ, ತನ್ನ ಆರೋಗ್ಯದ ಕಾಳಜಿ ಇವೆಲ್ಲವನ್ನೂ ಏಕಕಾಲದಲ್ಲಿ ಮಾಡಬೇಕಾದ ಅನಿವಾರ್ಯ ಆಧುನಿಕ ಮಹಿಳೆಗಿದೆ. ಮನೆಯಲ್ಲಿ ಇದ್ದು ಕೆಲಸ ಮಾಡುವಾಗ ಕೆಲಸದ ಸಮಯದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ, ಇವೆಲ್ಲದರ ಮೇಲ್ವಿಚಾರಣೆಯನ್ನು ಸುಲಭವಾಗಿ ಮಾಡಬಹುದು.

ADVERTISEMENT

ಮನೆಯಿಂದ ಕೆಲಸ ಮಾಡುವುದು ಆರ್ಥಿಕವಾಗಿಯೂ ಲಾಭದಾಯಕ. ಪ್ರಯಾಣ, ಧರಿಸುವ ಉಡುಪು, ಹೊರಗೆ ತಿನ್ನುವ ಆಹಾರ, ಮನೆಯಲ್ಲಿನ ಕೆಲಸಕ್ಕೆ ಸಹಾಯಕರು, ಆಫೀಸಿಗೆ ಹತ್ತಿರವಿರುವ ಪ್ರದೇಶದಲ್ಲಿ ಮನೆ ಮಾಡುವುದರಿಂದ ಆಗುವ ಹೆಚ್ಚುವರಿ ಖರ್ಚು ಎಲ್ಲವೂ ಕಡಿಮೆಯಾಗುತ್ತದೆ. ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಸಾಧ್ಯ.

ಕಂಪನಿಗಳಿಗೂ ಇದರಿಂದ ಬಹಳಷ್ಟು ಲಾಭಗಳಿವೆ. ಉದ್ಯೋಗಿಗಳಿಗೆ ಸ್ಥಳ, ಮೂಲಸೌಕರ್ಯ ಹೆಚ್ಚಿಗೆ ಬೇಕಿಲ್ಲ. ಸಾರಿಗೆ ವ್ಯವಸ್ಥೆ, ಆಹಾರ, ಇತರ ಸಿಬ್ಬಂದಿ, ವಿದ್ಯುತ್, ನೀರು ಈ ಎಲ್ಲದರ ಬಳಕೆ ಕಡಿಮೆ. ಮುಖ್ಯವಾಗಿ ಕಂಪನಿಗಳ ಸಿಬ್ಬಂದಿಯಲ್ಲಿ ವಿವಿಧ ಬಗೆಯ ಹೆಣ್ಣುಮಕ್ಕಳನ್ನು ಒಳಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಸಣ್ಣ ಮಕ್ಕಳಿರುವ ತಾಯಂದಿರು, ಹಿರಿಯರನ್ನು ನೋಡಿಕೊಳ್ಳುವ ಮಹಿಳೆಯರು, ದೈಹಿಕ ಮತ್ತು ಮಾನಸಿಕ ಸಮಸ್ಯೆ ಇರುವವರು, ನಗರ ಪ್ರದೇಶದಿಂದ ದೂರ ಇರುವವರು ಹೀಗೆ ಎಲ್ಲರಿಗೂ ಕೆಲಸ ಮಾಡುವ ಅವಕಾಶ ದೊರೆಯುತ್ತದೆ.

ಆದರೆ ಕಂಪನಿಗಳ ವ್ಯವಹಾರ ಹೇಗೆ? ಮಹಿಳಾ ಉದ್ಯೋಗಿಗಳು ತಮ್ಮ ಮನೆಯ ಜವಾಬ್ದಾರಿಗಳಿದ್ದರೂ ಕಚೇರಿಯ ಕೆಲಸವನ್ನು ಪುರುಷರಿಗಿಂತ ಚೆನ್ನಾಗಿಯೇ ಮಾಡಿ ಸಂಸ್ಥೆಗೆ ಲಾಭವನ್ನೇ ತಂದುಕೊಟ್ಟಿದ್ದಾರೆ. ಹೀಗಾಗಿ ವ್ಯವಹಾರದಲ್ಲಿಯೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಹಾಗಿದ್ದೂ, ಕಂಪನಿಗಳು ಆಫೀಸಿಗೆ ಬರಬೇಕು ಎಂದು ಹೇಳುತ್ತಿರುವುದೇಕೆ? ಮನೆಯಿಂದ ಕೆಲಸ ಮಾಡುವಾಗ ಉದ್ಯೋಗಿಗಳ ಕೆಲಸದ ಸಮಯದ ಮೇಲೆ ನಿಯಂತ್ರಣ ಇರುವುದಿಲ್ಲ. ಲಾಗಿನ್ ಆಗುವುದೇನೋ ಸರಿ. ಕೆಲಸವನ್ನು ಮಾಡುತ್ತಿದ್ದಾರೆಯೋ ಇಲ್ಲವೋ ಎಂಬುದರ ಬಗ್ಗೆ ತಿಳಿಯಲು ಸಾಧ್ಯವಿಲ್ಲ. ಸಮಸ್ಯೆಗಳನ್ನು ಬಗೆಹರಿಸುವಾಗ ಮುಖಾಮುಖಿ ಕುಳಿತು ಚರ್ಚೆ ಮಾಡಿ ಒಟ್ಟಿಗೆ ಪರಿಹಾರ ಕಂಡುಹಿಡಿಯುವುದು ಸೂಕ್ತವಾದ ವಿಧಾನವಾದರೂ ಅದಿಲ್ಲಿ ಸಾಧ್ಯವಿಲ್ಲ.

ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುವಾಗ ಬರೀ ಕೆಲಸ ಮಾತ್ರವಲ್ಲ ಎದುರಿಗೆ ಕಾಣುವ ವ್ಯಕ್ತಿಯ ಸಂವಹನ ಸಾಮರ್ಥ್ಯ, ನಡೆನುಡಿಯೂ ಪ್ರಭಾವವನ್ನು ಬೀರುತ್ತದೆ. ಹಾಗೆಯೇ ಉನ್ನತ ಹುದ್ದೆಗಳಲ್ಲಿ ಇರುವವರು ಸ್ವತಃ ಕೆಲಸ ಮಾಡುವುದನ್ನು ನೋಡುತ್ತಾ ಇತರರು ಕೆಲಸ ಕಲಿಯುವುದರ ಜೊತೆಗೆ ಹೆಚ್ಚಿನದನ್ನು ಮಾಡಲು ಸ್ಫೂರ್ತಿಯನ್ನೂ ಪಡೆಯುತ್ತಾರೆ. ಐಟಿ ಕ್ಷೇತ್ರದಲ್ಲಿಯೂ ನಿರ್ದಿಷ್ಟ ಹುದ್ದೆಗಳನ್ನು ಮನೆಯಿಂದ ನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ ಉದ್ಯೋಗಿಗಳ ನಡುವೆಯೂ ಅಸಮಾಧಾನ, ಬೇಸರ ಶುರುವಾಗಬಹುದು. ಕೋವಿಡ್ ಇದ್ದಾಗ, ಹೇಗೋ ಕೆಲಸ ಉಳಿದರೆ ಸಾಕು ಎಂಬ ಹೆದರಿಕೆಯಿಂದ ಮಾಡುತ್ತಿದ್ದ ಪರಿಸ್ಥಿತಿ ಈಗಿಲ್ಲ. ಹಾಗಾಗಿ ಗುಣಮಟ್ಟ ಕಡಿಮೆಯಾಗಬಹುದು ಎಂಬಂತಹ ಅನೇಕ ಕಾರಣಗಳಿವೆ.

ಮಹಿಳೆಯರಿಗೂ ಮನೆಯಿಂದ ಕೆಲಸ ಮಾಡುವುದು ಮೇಲ್ನೋಟಕ್ಕೆ ಅನುಕೂಲಕರ ಎನಿಸಿದರೂ ಬಹಳಷ್ಟು ಅನನುಕೂಲಗಳೂ ಇವೆ. ನಿರ್ದಿಷ್ಟ ಸಮಯಕ್ಕೆ ತಯಾರಾಗಿ ಇಂತಿಷ್ಟು ತಾಸು ಕೆಲಸ ಮಾಡುವ ಶಿಸ್ತು ಮಾಯವಾಗುತ್ತದೆ. ಹೇಗಿದ್ದರೂ ಮನೆಯಿಂದಲೇ ಕೆಲಸ ಎನ್ನುವ ಕಾರಣದಿಂದ ಮನೆವಾರ್ತೆ ಮತ್ತು ಮಕ್ಕಳ ಜವಾಬ್ದಾರಿ ಆಕೆಗೆ ಇನ್ನಷ್ಟು ಗಟ್ಟಿಯಾಗಿ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಸಹೋದ್ಯೋಗಿಗಳೊಂದಿಗೆ ಬೆರೆತು ಒಂದಷ್ಟು ಸುಖ ದುಃಖ ಹಂಚಿಕೊಂಡು ಹಗುರಾಗುವ ಜೊತೆಗೆ ಹೊಸತನ್ನು ಕಲಿಯುವ ಅವಕಾಶವೂ ಇಲ್ಲವಾಗುತ್ತದೆ. ಸಮಯದ ಸರಿಯಾದ ನಿರ್ವಹಣೆ ಸಾಧ್ಯವಾಗದೇ ಹೋದಲ್ಲಿ ಮಹಿಳೆಯರಲ್ಲಿ ಮಾನಸಿಕ ಒತ್ತಡ ಹೆಚ್ಚುವ ಸಾಧ್ಯತೆಯೂ ಇದೆ.

ಸದ್ಯಕ್ಕೆ, ಮನೆಯಿಂದಲೇ ಕೆಲಸ ಮಾಡಿದರೂ ವಾರಕ್ಕೆ ಒಂದೆರಡು ದಿನ ಅಗತ್ಯವಿದ್ದಾಗ ಕಚೇರಿಯಲ್ಲಿ ಕೆಲಸ ಮಾಡುವ ‘ಹೈಬ್ರಿಡ್ ವಿಧಾನ’ ಉತ್ತಮ ಪರಿಹಾರ. ಈ ವಿಧಾನದಲ್ಲೂ ನಿರ್ದಿಷ್ಟ ಸಮಯವನ್ನು ಮೀಸಲಾಗಿಟ್ಟು, ಶಿಸ್ತುಬದ್ಧ ದಿನಚರಿ ರೂಢಿಸಿಕೊಂಡು, ಗುಣಮಟ್ಟದ ಕೆಲಸಕ್ಕೆ ಮಹಿಳೆಯರು ಆದ್ಯತೆ ನೀಡಬೇಕು. ಇವೆಲ್ಲದರ ಜತೆ ಮನೆ, ಮಕ್ಕಳು, ಹಿರಿಯರ ಆರೈಕೆಯಲ್ಲಿ ಮಹಿಳೆಗೆ ಪುರುಷರ ಸಹಕಾರವೂ ದೊರೆತಲ್ಲಿ ಆಕೆ ಬಹುಪಾತ್ರ ನಿರ್ವಹಣೆಯನ್ನು ಸಮರ್ಥವಾಗಿ, ಸಮಾಧಾನದಿಂದ ನಿಭಾಯಿಸಬಲ್ಲಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.