ADVERTISEMENT

ಸಂಗತ: ಗುಬ್ಬಚ್ಚಿ... ಆಡಲು ಬಾರೋ ಪಾಪಚ್ಚಿ

ಅಭಿವೃದ್ಧಿಯ ಅಂಧಯುಗದ ಪಾಲಾಗಿ ಕಳೆದುಹೋಗುತ್ತಿವೆ ಈ ಪುಟ್ಟ ಹಕ್ಕಿಗಳು

ಗುರುರಾಜ್ ಎಸ್.ದಾವಣಗೆರೆ
Published 18 ಮಾರ್ಚ್ 2021, 19:31 IST
Last Updated 18 ಮಾರ್ಚ್ 2021, 19:31 IST
ಸಂಗತ
ಸಂಗತ   

ಜಗುಲಿಯ ಹಜಾರದಲ್ಲೇ ಕಾಳು ಕಡಿ ಹಸನು ಮಾಡುತ್ತಿದ್ದ ನಿಮ್ಮ ಅಮ್ಮಂದಿರು ಮೊರದಿಂದ ಕೇರಿದಾಗ ಹೊರ ಚಿಮ್ಮುತ್ತಿದ್ದ ಕಾಳುಗಳೇ ನಮ್ಮ ಕುಟುಂಬದ ಆಹಾರವಾಗುತ್ತಿತ್ತು.

ಹೇಯ್, ನಾನು ನಿಮ್ಮ ಬಾಲ್ಯದ ಗೆಳೆಯ ಗುಬ್ಬಿ ಅಲಿಯಾಸ್ ಗುಬ್ಬಚ್ಚಿ! ನಾಳೆ ಶನಿವಾರ (ಮಾರ್ಚ್ 20) ನನ್ನ ದಿನ! ಪಕ್ಷಿಗಳಲ್ಲೇ ಅತ್ಯಂತ ಚಿಕ್ಕ ಸೈಜಿನ ನನ್ನ ಮೇಲೆ ನಿಮಗೆಲ್ಲಾ ತುಂಬಾ ಪ್ರೀತಿ. ನಾನು ಮತ್ತು ನನ್ನ ಸಂಗಾತಿ ನಿಮ್ಮ ಹಳ್ಳಿಯ, ಊರಿನ ಮನೆಯ ಮಾಡಿನಲ್ಲಿ, ಹೆಂಚಿನ ಸಂದಿ, ಬೇಲಿ, ಪೊದೆಗಳಲ್ಲಿ ಇಲ್ಲವೆ ಜಗುಲಿಯ ಗೋಡೆಗೆ ವಾಲಿಸಿ ನೇತು ಹಾಕಿದ್ದ ದೇವರ ಫೋಟೊದ ಹಿಂದೆ ಗೂಡುಕಟ್ಟಿ ಸಂಸಾರ ಹೂಡುತ್ತಿದ್ದೆವು. ನೀವು, ನಿಮ್ಮ ಮನೆಯವರ‍್ಯಾರೂ ನಮ್ಮನ್ನಲ್ಲಿಂದ ಓಡಿಸುತ್ತಿರಲಿಲ್ಲ.

ಜಗುಲಿಯ ಹಜಾರದಲ್ಲೇ ಕಾಳು ಕಡಿ ಹಸನು ಮಾಡುತ್ತಿದ್ದ ನಿಮ್ಮ ಅಮ್ಮಂದಿರು ಮೊರದಿಂದ ಕೇರಿದಾಗ ಹೊರ ಚಿಮ್ಮುತ್ತಿದ್ದ ಕಾಳುಗಳೇ ನಮ್ಮ ಕುಟುಂಬದ ಆಹಾರವಾಗುತ್ತಿತ್ತು. ಒಮ್ಮೊಮ್ಮೆ ಅದು ಸಾಲದಾಗಿ ಪಕ್ಕದ ಬುಟ್ಟಿಯಲ್ಲಿ ತುಂಬಿಟ್ಟಿದ್ದ ಧಾನ್ಯಕ್ಕೇ ಬಾಯಿ ಹಾಕುತ್ತಿದ್ದೆವು. ಆಗಲೂ ಯಾರೂ ನಮ್ಮನ್ನು ಗದರುತ್ತಿರಲಿಲ್ಲ. ದೊಡ್ಡವರ ಗುಣ ನಿಮಗೂ ಬಂದಿತ್ತು. ನಿಮಗೆ ತಿನ್ನಲು ಕೊಡುತ್ತಿದ್ದ ಕಡಲೆ, ಬತ್ತಾಸು,
ಹುರಿಗಾಳುಗಳನ್ನು ಶಾಲೆಗೆ ಹೋಗುವ ದಾರಿಯುದ್ದಕ್ಕೂ ನೀವಿಷ್ಟು ತಿಂದು ನಮಗೂ ನೀಡುತ್ತಿದ್ದಿರಿ. ಮನೆಯಲ್ಲಿ ಗೂಡು ಕಟ್ಟಿದರೆ ಅದು ಶುಭಸಂಕೇತವೆಂದೂ ನಂಬಲಾಗಿತ್ತು. ನೀವು ಸಣ್ಣವರಿದ್ದಾಗ ನಿಮ್ಮ ಅಮ್ಮ–ಅಜ್ಜಿಯರು ಪ್ರಸಿದ್ಧ ಕಾಗಕ್ಕ– ಗುಬ್ಬಕ್ಕನ ಕತೆಯನ್ನು ಹೇಳಿ ನಿಮ್ಮನ್ನು ರಮಿಸುತ್ತಿದ್ದರು. ಹೀಗೆ ನಿಮ್ಮ ಪರ್ಸನಾಲಿಟಿ ಡೆವಲಪ್‍ಮೆಂಟ್‍ಗೆ ನಮ್ಮ ಕೊಡುಗೆ ತುಂಬಾ ಇರುತ್ತಿತ್ತು.

ADVERTISEMENT

ಅದೇನಾಯಿತೋ! ನೋಡ ನೋಡುತ್ತಿದ್ದಂತೆ ನೀವು ಹಳ್ಳಿಯ ಶಾಲೆ ಬಿಟ್ಟು ಪಟ್ಟಣಕ್ಕೆ ಹೋದಿರಿ. ಮಾಡ ಹಂಚಿನ, ಹುಲ್ಲಿನ ತಾರಸಿಯಿದ್ದ ನಿಮ್ಮ ಮನೆಗಳು ಗಟ್ಟಿ ಕಾಂಕ್ರೀಟಿನ ಮನೆಗಳಾಗಿ ನಮ್ಮ ಪ್ರವೇಶಕ್ಕೆ ದಾರಿ ಮುಚ್ಚಿತು. ದಿನಸಿಯೆಲ್ಲ ಮೊದಲೇ ಶುದ್ಧಗೊಂಡು ಪ್ಯಾಕೆಟ್‍ಗಳಲ್ಲಿ ಮನೆ ತಲುಪಲು ಶುರುವಾಗಿ, ನಮ್ಮ ಅನ್ನದ ಮೂಲ ಇಲ್ಲವಾಯಿತು. ನಾವು ಬೇರೆ ದಾರಿ ಇಲ್ಲದೆ ಹೊಲ-ಗದ್ದೆಗಳ ತೆನೆಗಳಿಗೆ ಬಾಯಿ ಹಾಕಿ, ಸಿಂಪಡಿಸಿದ ಕೀಟನಾಶಕಗಳಿಂದ ನರಕಯಾತನೆ ಅನುಭವಿಸಿದೆವು. ಹೊಲ- ಗದ್ದೆಗಳ ಬದುವಿನಲ್ಲಿ ಜಾಸ್ತಿ ಮರಗಳಿದ್ದರೆ ಅದನ್ನು ಅರಣ್ಯ ಎಂದು ಘೋಷಿಸುವ ಕಾನೂನು ಬಂದದ್ದರಿಂದ ನಿಮ್ಮ ದೊಡ್ಡವರು ಹಣ್ಣುಹಂಪಲು ಬಿಡುತ್ತಿದ್ದ ಇದ್ದಬದ್ದ ಮರಗಳನ್ನು ಕಡಿದು ಸಪಾಟು ಮಾಡಿಬಿಟ್ಟರು. ಇದರ ಜೊತೆಗೆ ನಿಮ್ಮೂರಿಗೆ ಮೊಬೈಲೂ ಬಂದು ಸಿಗ್ನಲ್ ಕಂಬಗಳೂ ಬಂದವು. ಅವು ಹೊಮ್ಮಿಸುವ ವಿಕಿರಣ ನಮ್ಮ ಕುಲವನ್ನೇ ನಾಶ ಮಾಡಲು ಮುಂದಾದಾಗ ಊರು ಬಿಡುವಂತಾಯಿತು. ಈಗಿನ ತಾಯಂದಿರಿಗೆ ನಮ್ಮ ನೆನಪೇ ಇಲ್ಲ. ಅವರೆಲ್ಲ ಡೊರೆಮಾನ್- ಪೋಕೆಮಾನ್- ಸೂಪರ್‌ಮ್ಯಾನ್‌ ಕತೆ ಹೇಳುತ್ತಾರೆ.

ಕಳೆದ 30 ವರ್ಷಗಳಲ್ಲಿ ನಮ್ಮ ಸಂಖ್ಯೆ ಶೇ 75ರಷ್ಟು ಕಡಿಮೆಯಾಗಿದೆ. ನಾವು ವಿಶ್ವದಾದ್ಯಂತ 26 ಜಾತಿಗಳಲ್ಲಿ ಹಂಚಿಹೋಗಿದ್ದೇವೆ. ನಮ್ಮ ಬಹುಸಂಖ್ಯೆಯೇ ನಮಗೆ ಮುಳ್ಳಾಗಿದ್ದಿದೆ. ಚೀನಾದ ಕ್ರಾಂತಿಕಾರಿ ನಾಯಕ ಮಾವೊ, ಬೆಳೆಯುವ ಧಾನ್ಯವನ್ನೆಲ್ಲಾ ನಾವು ಖಾಲಿ ಮಾಡುತ್ತೇವೆ ಎಂದು ಸಾಮೂಹಿಕ ವಧೆ ಮಾಡಿಸಿದಾಗ, ಮಿಡತೆಗಳ ಸಂಖ್ಯೆ ಹೆಚ್ಚಾಗಿ, ಅವು ಇದ್ದ ಬದ್ದ ಬೆಳೆಯನ್ನೆಲ್ಲಾ ನುಂಗಿ ಐದು ವರ್ಷಗಳ ಕಾಲ ಭಾರಿ ಆಹಾರಕ್ಷಾಮ ಸೃಷ್ಟಿಯಾಯಿತು. ಕಂಗಾಲಾದ ಮಾವೊ ವಿಶ್ವದ ನಾಯಕರ ಬಳಿ ಬೇಡಿ ಅಂದಿನ ರಷ್ಯಾದಿಂದ 2 ಕೋಟಿ, ನಮ್ಮ ದೇಶದಿಂದ 75 ಲಕ್ಷ ಗುಬ್ಬಿಗಳನ್ನು ಆಮದು ಮಾಡಿಕೊಂಡು ಬೆಳೆಗಳನ್ನು ಮೊದಲಿನ ಸ್ಥಿತಿಗೆ ತಂದುಕೊಂಡ.

ಹಿಂದೆ ನಾವಿದ್ದ ಜಾಗದಲ್ಲಿ ಮೈನಾಗಳು ಬಂದು ನೆಲೆಸಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಜ್ಞರು ಹೇಳುವುದು ನಮ್ಮ ಕಿವಿಗೂ ಬಿದ್ದಿದೆ. ನಮ್ಮನ್ನು ಕಳೆದುಕೊಂಡ ಮೇಲೆ ನಿಮಗೆ ನಮ್ಮ ಮೇಲೆ ಅಕ್ಕರೆ ಶುರುವಾಗಿದೆ. ನಮ್ಮ ಸಂತತಿ ವೃದ್ಧಿಗೆ ‘ನೇಚರ್ ಫಾರ್ ಎವರ್’ ಸೊಸೈಟಿಯ ದಿಲಾವರ್ ಮೊಹಮದ್, ‘ವೈಲ್ಡ್‌ಲೈಫ್ ವೆಲ್‍ಫೇರ್ ಸೊಸೈಟಿ’ಯ ಮಂಜುನಾಥ ನಾಯಕ, ಚಿಕ್ಕೋಡಿಯ ವಿಠೋಬಾ, ಝೆಡ್ ಪ್ರತಿಷ್ಠಾನ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಗುಬ್ಬಿ ಲ್ಯಾಬ್ಸ್ ವತಿಯಿಂದ ನಮ್ಮ ಬಗ್ಗೆ ಕಾಳಜಿ ತೋರಿಸಿ, ಶಾಲಾ ಮಕ್ಕಳು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ದೆಹಲಿ, ಬಿಹಾರ ರಾಜ್ಯಗಳು ರಾಜ್ಯಪಕ್ಷಿ ಎಂಬ ಗೌರವ ನೀಡಿವೆ. ಅಂಚೆ ಇಲಾಖೆ ಸ್ಟ್ಯಾಂಪ್ ಬಿಡುಗಡೆ ಮಾಡಿದೆ.

ವಿಶೇಷವೆಂದರೆ, ತಮಿಳುನಾಡಿನ ಗ್ರಾಮ ಪೋಥಕುಡಿಯ ಮುಖ್ಯ ವಿದ್ಯುತ್‌ ಸ್ವಿಚ್ ಬೋರ್ಡ್ ಮೇಲೆ ನಾವು ಗೂಡು ಕಟ್ಟಿದಾಗ, ನಮ್ಮ ಸಂತಾನಾಭಿವೃದ್ಧಿ ಮುಗಿದು ಮರಿಗಳು ಹಾರುವವರೆಗೆ 3 ತಿಂಗಳು ಇಡೀ ಹಳ್ಳಿಯ ಜನ ಸ್ವಿಚ್‍ಬಾಕ್ಸ್ ಬಳಿ ಬರದೆ ಕತ್ತಲಿನಲ್ಲೇ ಜೀವನ ನಡೆಸಿದ್ದರು. ಇವರ ತ್ಯಾಗಕ್ಕೆ ನಾವು ಮೂಕವಿಸ್ಮಿತರಾಗಿದ್ದೇವೆ. ಮದುರೆಯ ವಕೀಲ ಅರುಣ್ ಸ್ವಾಮಿನಾಥನ್‍ ಅವರ ಸ್ಕೂಟಿಯ ಸ್ಟೆಪ್ನಿಯ ಜಾಗದಲ್ಲಿ ಗೂಡು ಕಟ್ಟಿದಾಗ ಅವರಂತೂ 45 ದಿನ ಸ್ಕೂಟರ್‌ ಅನ್ನು ನಿಲ್ಲಿಸಿದ ಜಾಗದಿಂದ ತೆಗೆದಿರಲಿಲ್ಲ. ಇಂಥ ಅನೇಕ ಮಾನವೀಯ ಘಟನೆಗಳಿಗೆ ಸಾಕ್ಷಿಯಾಗಿದ್ದೇವೆ.

ನೀವೇನೂ ನಮ್ಮ ಶತ್ರುಗಳಲ್ಲ. ಅಭಿವೃದ್ಧಿಯ ಅಂಧಯುಗದ ಪಾಲಾಗಿ ನಮ್ಮನ್ನು ಕಳೆದುಕೊಳ್ಳುತ್ತಿದ್ದೀರಿ. ಸ್ವಲ್ಪ ಬಿಡುವು ಮಾಡಿಕೊಂಡು ಪ್ರೀತಿಯಿಂದ ಕರೆದು ಜಾಗ ಕೊಟ್ಟರೆ ಮತ್ತೆ ಬರುತ್ತೇವೆ. ಅಲ್ಲಿಯವರೆಗೆ ಬೈಬೈ! ಟೇಕ್‍ಕೇರ್.

–ಇಂತಿ ನಿಮ್ಮ ಪ್ರೀತಿಯ ಗುಬ್ಬಚ್ಚಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.