ಬಾಗ್‌ಪತ್ (ಉತ್ತರ ಪ್ರದೇಶ): 10 ವರ್ಷದ ಬಾಲಕನೊಬ್ಬ ತನ್ನ ಎರಡು ವರ್ಷದ ತಮ್ಮನ ಮೃತದೇಹವನ್ನು ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯವಸ್ಥೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಾಲಕ ಸಾಗರ್ ಕುಮಾರ್ ತನ್ನ ತಮ್ಮನ ದೇಹ ಹೊತ್ತು ನಡೆದುಕೊಂಡು ಹೋಗುತ್ತಿದ್ದರೆ, ತಂದೆ ಆತನ ಹಿಂದೆ ಚಿಂತಾಕ್ರಾಂತನಾಗಿ ಹೆಜ್ಜೆಹಾಕುತ್ತಿರುವುದು ದೃಶ್ಯದಲ್ಲಿದೆ.
ನಿರಂತರವಾಗಿ ಅಳುತ್ತಿದ್ದ ಕಾರಣಕ್ಕೆ ಮಲತಾಯಿ ಸೀತಾ ಎಂಬಾಕೆ ಮಗು ಕಲಾಕುಮಾರ್‌ನನ್ನು ದೆಹಲಿ–ಸಹರಾನ್‌ಪುರ ಹೈವೆಗೆ ಎಸೆದಿದ್ದಳು. ರಸ್ತೆಗೆ ಬಿದ್ದ ಮಗುವಿನ ಮೇಲೆ ಕಾರು ಹರಿದಿತ್ತು. ಪರಿಣಾಮ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗ್‌ಪತ್‌ನ ಸರ್ಕಲ್ ಆಫೀಸರ್ ದೇವೇಂದ್ರ ಕುಮಾರ್ ಶರ್ಮಾ ಮಾತನಾಡಿ, ‘ಮಗುವನ್ನು ಕೊಂದ ಬಗ್ಗೆ ಸ್ಥಳೀಯರು ನಮಗೆ ಮಾಹಿತಿ ನೀಡಿದರು. ನಂತರ ಮಹಿಳೆ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿತ್ತು’ ಎಂದು ಹೇಳಿದ್ದಾರೆ.
ಶವಪರೀಕ್ಷೆಯ ನಂತರ ಮಗುವನ್ನು ತಂದೆ ಪ್ರವೀಣ್ ಕುಮಾರ್ ಅವರಿಗೆ ಹಸ್ತಾಂತರಿಸಲಾಗಿತ್ತು. ಈ ವೇಳೆ ಪ್ರವೀಣ್ ಅವರ ಸಂಬಂಧಿ ರಾಂಪಾಲ್ ಮತ್ತು ಮಗ ಸಾಗರ್ ಜೊತೆಗಿದ್ದರು.
ಮೃತದೇಹ ಸಾಗಿಸಲು ವಾಹನ ಒದಗಿಸುವಂತೆ ಆರೋಗ್ಯಾಧಿಕಾರಿಗೆ ಪ್ರವೀಣ್ ಅವರು ಮನವಿ ಮಾಡಿದ್ದರು ಎಂದು ರಾಂಪಾಲ್ ಆರೋಪಿಸಿದ್ದಾರೆ. ಆದರೆ, ಅವರ ಮನವಿಗೆ ಅಧಿಕಾರಿ ಕಿಮ್ಮತ್ತು ನೀಡಿರಲಿಲ್ಲ. ಹೀಗಾಗಿ ಮೃತದೇಹವನ್ನು ಹೊತ್ತುಕೊಂಡೇ ಸಾಗಿದ್ದರು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.