ರಾಜ್ಯದಲ್ಲಿ ‘ಹಸಿರು ಕ್ರಾಂತಿ’ಗೆ ನಾಂದಿ ಐದಾರು ಲಕ್ಷ ಟನ್ ಅಧಿಕ ಹಿಂಗಾರು ಬೆಳೆಯ ನಿರೀಕ್ಷೆ
ಬೆಂಗಳೂರು, ಫೆ. 5– ಮೈಸೂರು ರಾಜ್ಯದ ವ್ಯವಸಾಯ ವರ್ಷದ (ಕಳೆದ ಜೂನ್‌ನಿಂದ ಈ ವರ್ಷದ ಜೂನ್ ತಿಂಗಳವರೆಗೆ) ದ್ವಿತೀಯಾರ್ಧ, ಹಸಿರು ಕ್ರಾಂತಿಯ ಯಶಸ್ಸಿನ ಪ್ರಥಮ ಸೋಪಾನವಾಗಲಿದೆ.
ಈ ವರ್ಷದ ಹಿಂಗಾರು ಬೆಳೆಯು ಸುಮಾರು ಐದಾರು ಲಕ್ಷ ಟನ್ನುಗಳಷ್ಟು ಅಧಿಕ ಧಾನ್ಯವನ್ನು ತರಲಿದ್ದು, ಮುಂಗಾರು ಬೆಳೆಯಲ್ಲಿ ಉಂಟಾದ ಕೊರತೆಯನ್ನು ನೀಗಿಸಲಿದೆ.
ದಕ್ಷಿಣದಲ್ಲಿ ಪಾರ್ಲಿಮೆಂಟ್ ಅಧಿವೇಶನ ಸಾಧ್ಯವಿಲ್ಲ: ರಾಣೆ ಸಮಿತಿ ಒಟ್ಟು ಅಭಿಮತ
ನವದೆಹಲಿ, ಫೆ. 5– ದಕ್ಷಿಣದಲ್ಲಿ ಸಂಸತ್ ಅಧಿವೇಶನ ನಡೆಸುವುದು ಕಾರ್ಯಗತವಾಗದಂಥ ಸಲಹೆ ಎಂದು ಎಸ್.ಆರ್. ರಾಣೆ ನೇತೃತ್ವದಲ್ಲಿ ರಚನೆಯಾದ ಸಂಸತ್ ಸದಸ್ಯರ ಸಮಿತಿ ಒಟ್ಟು ಅಭಿಪ್ರಾಯಕ್ಕೆ ಬಂದಿದೆ.
ಸಮಿತಿಯು ತನ್ನ ವರದಿಯನ್ನು ಸಂಸತ್ ವ್ಯವಹಾರ ಸಚಿವರಿಗೆ ಮುಂದಿನ ತಿಂಗಳು ಸಲ್ಲಿಸುವುದು. ತನ್ನ ವಿಸ್ತೃತ ತೀರ್ಮಾನಗಳನ್ನು ಆಖೈರುಗೊಳಿಸಲು ಸಮಿತಿ ಇತ್ತೀಚೆಗೆ ಸಭೆ ಸೇರಿತ್ತು.
ಡಿ.ಎಂ.ಕೆ. ವಲಯದಲ್ಲಿ ತೀವ್ರ ಚಟುವಟಿಕೆ
ಮದ್ರಾಸ್, ಫೆ. 5– ದಿವಂಗತ ಅಣ್ಣಾದೊರೆ ಅವರಿಗೆ ಅಸ್ವಸ್ಥತೆ ತಲೆದೋರಿದ್ದ ನಂತರ ಹೆಚ್ಚೂ ಕಡಿಮೆ ಪೂರ್ಣ ಸ್ತಬ್ಧವಾಗಿದ್ದ ತಮಿಳುನಾಡು ಆಡಳಿತ ವ್ಯವಸ್ಥೆ ನಿಧಾನವಾಗಿ ಮತ್ತೆ ಚಲಿಸಲಾರಂಭಿಸಿದೆ.
ಅಣ್ಣಾದೊರೆ ಅವರ ಅನಾರೋಗ್ಯದ ನಿಮಿತ್ತ ಕಳೆದ ಹದಿನೈದು ದಿನಗಳೂ ಅದೇ ಚಿಂತೆಯಲ್ಲಿ ಮುಳುಗಿದ್ದ ಸಚಿವರ ಎದುರು ಈಗ ಭಾರೀ ಕೆಲಸದ ಹೊರೆ ಬಿದ್ದಿದೆ.
ಇಂದೂ ಸೆಕ್ರೆಟೆರಿಯಟ್‌ನಲ್ಲಿ ಯಾವ ಸಚಿವರೂ ಹಾಜರಿರಲಿಲ್ಲ. ಅವರಿಗೆ ವಿಶ್ರಾಂತಿ ಅಗತ್ಯ ಎನ್ನುವುದು ನಿಸ್ಸಂಶಯ. ಆದರೆ ತಮ್ಮ ಅನರ್ಘ್ಯ ನಾಯಕನನ್ನು ಸಮಾಧಿ ಮಾಡಿದ ಒಂದು ದಿನದೊಳಗೇ, ಡಿ.ಎಂ.ಕೆ. ವಲಯಗಳಲ್ಲಿ ತೀವ್ರತರ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.