ADVERTISEMENT

ಸೋಮವಾರ, 10–2–1969

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 20:00 IST
Last Updated 9 ಫೆಬ್ರುವರಿ 2019, 20:00 IST
   

ತಮಿಳುನಾಡು ಮುಖ್ಯಮಂತ್ರಿ ಪಟ್ಟಕ್ಕೆ ಶ್ರೀ ಕರುಣಾನಿಧಿ

ಮದರಾಸು, ಫೆ. 9– ಮುತ್ತುವೇಲ್ ಕರುಣಾನಿಧಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ. ದಿವಂಗತ ಅಣ್ಣಾದೊರೆ ಅವರ ಉತ್ತರಾಧಿಕಾರಿಯಾಗಿರುವ ಕರುಣಾನಿಧಿ ಇಂದು ಬೆಳಿಗ್ಗೆ ಡಿ.ಎಂ.ಕೆ. ವಿಧಾನ ಮಂಡಳ ಪಕ್ಷದ ನಾಯಕನಾಗಿ ಅವಿರೋಧ ಚುನಾಯಿತರಾದರು.

‘ಅಣ್ಣಾ’ ತೋರಿದ ಮಾರ್ಗವನ್ನು ತಾವು ಅನುಸರಿಸುವುದಾಗಿಯೂ, ಅವರು ಹಾಕಿಕೊಟ್ಟ ಪರಂಪರೆಯನ್ನು ನಿರ್ವಹಿಸುವುದಾಗಿಯೂ ಕರುಣಾನಿಧಿ ಆಯ್ಕೆಯ ನಂತರ ವಚನವಿತ್ತರು.

ADVERTISEMENT

ಅವಿರೋಧವಾಗಿ ಆಯ್ಕೆ ನಡೆಸಿ ತಮಗೆ ಪ್ರಜಾಪ್ರಭುತ್ವದ ಅಧಿಕಾರವನ್ನಿತ್ತ ಶಾಸಕರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಮುಂಬೈನಲ್ಲಿ ಲೂಟಿ ಗೋಲಿಬಾರ್: ಆರು ಮಂದಿ ಸಾವು

ಮುಂಬೈ, ಫೆ. 9– ಮಧ್ಯ ಹಾಗೂ ಉತ್ತರ ಮುಂಬೈನ ಗಲಭೆಪೀಡಿತ ಪ್ರದೇಶಗಳಿಗೆ ಅನೇಕ ಕಡೆ ಇಂದು ಪೊಲೀಸರು ಗೋಲಿಬಾರ್ ಮಾಡಿದಾಗ ಆರು ಮಂದಿ ಸತ್ತರಲ್ಲದೆ ಇಪ್ಪತ್ತೈದು ಮಂದಿ ತೀವ್ರವಾಗಿ ಗಾಯಗೊಂಡರು.

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಪೊಲೀಸರು ಕಮೀಷನರ್ ಇ.ಎಸ್. ಮೋಹಕ್ ಅವರು ಪರಿಸ್ಥಿತಿ ಉದ್ರಿಕ್ತವಾಗಿಯೇ ಇದೆಯೆಂದೂ, ‘ಇನ್ನೂ ಹತೋಟಿಯಲ್ಲಿಲ್ಲ’ ಎಂದೂ ಹೇಳಿದರು.

ಮಾಹಿಮ್ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದ ಉದ್ರಿಕ್ತ ಗುಂಪಿನ ಮೇಲೆ ವಿಶೇಷ ರಿಸರ್ವ್ ಪೊಲೀಸ್ ಪಡೆಯು ಗುಂಡು ಹಾರಿಸಿದಾಗ ಇಬ್ಬರು ಸ್ಥಳದಲ್ಲಿಯೇ ಸತ್ತರೆಂದು ಮೋಹಕ್ ಅವರು ತಿಳಿಸಿದರು.

ಕೇಂದ್ರದ ಭಾಷಾ ನೀತಿ ಮರು ಪರಿಶೀಲನೆ ಸಂಭವ

ನವದೆಹಲಿ, ಫೆ. 9– ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದರಿಂದ ಕೇಂದ್ರ ಸರ್ಕಾರ ತನ್ನ ಭಾಷಾ ನೀತಿಯನ್ನು ಮರು ಪರಿಶೀಲಿಸಬೇಕಾಗುವುದು ಎಂದು ಇಲ್ಲಿನ ಬಲ್ಲ ವಲಯಗಳ ಅಭಿಪ್ರಾಯ.

ಡಿ.ಎಂ.ಕೆ. ಪಕ್ಷವೇ ಹಿಂದಿ ಸಂಪರ್ಕ ಭಾಷೆಯಾಗಿರುವುದಕ್ಕೆ ವಿರುದ್ಧ, ಅದರಲ್ಲೂ ಕರುಣಾನಿಧಿಯವರು ಕೇಂದ್ರದ ಭಾಷಾ ನೀತಿಯನ್ನು ಕಟುವಾಗಿ ಟೀಕಿಸಿದವರು.

ಸುದ್ದಿಯ ಸೃಷ್ಟಿಕರ್ತರು

ತಿರುಪತಿ, ಫೆ. 9– ಕಾಮರಾಜರು ಕೇಂದ್ರ ಸಂಪುಟ ಸೇರುವ ಸಾಧ್ಯತೆಯನ್ನು ತಿಳಿಯಲು ಇಡೀ ರಾಷ್ಟ್ರವೇ ಕುತೂಹಲದಿಂದಿದೆ. ಈ ಬಗ್ಗೆ ದೊಡ್ಡ ಊಹಾಪೋಹವೇ ಎದ್ದಿದೆ. ವರದಿಗಾರರು ಪ್ರಧಾನಿಯ ಗಮನವನ್ನು ಇಂದು ಸೆಳೆದರು.

‘ಇದೆಲ್ಲಾ ಪತ್ರಿಕೆಗಳ ಕೆಲಸ, ನೀವು ಇದನ್ನು ಸುಮ್ಮನೆ ದೊಡ್ಡದು ಮಾಡುತ್ತಿದ್ದೀರಿ, ಇಲ್ಲದಿದ್ದರೆ ದೇಶ ಅದರ ಪಾಡಿಗೆ ಅದು ನಿಶ್ಚಿಂತೆಯಿಂದಿರುತ್ತೆ’ ಎಂದು ಪ್ರಧಾನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.