ಕ್ರಿಕೆಟ್‌ಗೆ ಕಪಿಲ್ ವಿದಾಯ
ನವದೆಹಲಿ, ನ. 3– ದೀಪಾವಳಿಯ ಸಡಗರದಂತೆಯೇ ಭಾರತ ಕ್ರಿಕೆಟ್ ರಂಗದಲ್ಲಿ ದೀಪ ಬೆಳಗಿ, ಪಟಾಕಿ ಸಿಡಿಸಿದ ಕಪಿಲ್‌ದೇವ್ ನಿಖಾಂಜ್, ಬುಧವಾರ ಸಂಜೆ ಸದ್ದುಗದ್ದಲವಿಲ್ಲದೆ, ಬ್ಯಾಟು–ಚೆಂಡಿನ ಸೆಣಸಾಟಕ್ಕೆ ವಿದಾಯ ಹೇಳಿದರು. 17 ವರ್ಷ ಭಾರತದ ಅಗ್ರಮಾನ್ಯ ಬೌಲರ್ ಆಗಿ, ವಿಶ್ವ ವಿಕೆಟ್ ದೊರೆಯಾಗಿ ವಿಜೃಂಭಿಸಿದ ಕಪಿಲ್, ಕ್ರಿಕೆಟ್ ಜಗತ್ತು ಕಂಡ ಅಪರೂಪದ ಆಲ್‌ರೌಂಡರ್‌ಗಳಲ್ಲಿ ಒಬ್ಬರು.
ಒಬ್ಬ ಆಟಗಾರ ಕ್ರಿಕೆಟ್ ಬಿಟ್ಟರೂ ಕ್ರಿಕೆಟ್ ಆತನನ್ನು ಬಿಡುವುದಿಲ್ಲ ಎಂದು ಹೇಳಲಾಗುತ್ತದೆ. ತಮ್ಮ ಅಮೋಘ ಬೌಲಿಂಗ್‌ನಿಂದ ಚೆಂಡಿರುವುದೇ ಹೊಡೆಯಲೆಂಬ ರೀತಿಯ ಬ್ಯಾಟಿಂಗ್‌ನಿಂದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದ 35 ವರ್ಷ ವಯಸ್ಸಿನ ಈ ದಿಗ್ಗಜ, ಇಂದಿನಿಂದ ತಮ್ಮ ಗಡಸು ದನಿಯೊಂದಿಗೆ ಪ್ರೇಕ್ಷಕರ ಮನವನ್ನು ಪ್ರವೇಶಿಸಿದರು. ದೂರದರ್ಶನ ವೀಕ್ಷಕ ವಿವರಣೆ ಈ ರೋಮಾಂಚಕ ಆಟಗಾರನ ಹೊಸ ಆಟ.
ಕಾಶ್ಮೀರ: ಪಾಕ್ ಗೊತ್ತುವಳಿ ಮುಂದಕ್ಕೆ
ವಿಶ್ವಸಂಸ್ಥೆ, ನ. 3 (ಯುಎನ್‌ಐ)– ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ತನ್ನ ನಿರ್ಣಯದ ಮಂಡನೆಯನ್ನು ಪಾಕಿಸ್ತಾನ ಈ ತಿಂಗಳ 7ರವರೆಗೆ ಮುಂದೂಡಿದೆ.
ಹಲವಾರು ಇಸ್ಲಾಂ ದೇಶಗಳಿಂದ ಬೆಂಬಲ ದೊರೆಯಲಿಕ್ಕಿಲ್ಲ ಮತ್ತು ನಿರ್ಣಯ ಮಂಡನೆ ಕಾಲಕ್ಕೆ ಸದಸ್ಯ ದೇಶಗಳು ಗೈರುಹಾಜರಾಗಬಹುದು ಎಂಬ ಭೀತಿಯೇ ಇದಕ್ಕೆ ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.