ನವದೆಹಲಿ, ಜುಲೈ 9– ದುರ್ಬಲ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿ ಪದ್ಧತಿಯಲ್ಲಿ ಯಾವುದೇ ಬದಲಾವಣೆ ತರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಪಷ್ಟಪಡಿಸಿದರು.
ಮೀಸಲಾತಿಯನ್ನು ಪುನರ್‌ಪರಿಶೀಲಿಸಲಾಗುವುದು ಎಂಬ ಸಚಿವ ರಾಂ ಜೇಠ್ಮಲಾನಿ ಅವರ ಹೇಳಿಕೆ ಇಂದು ಸಂಸತ್‌ನ ಉಭಯ ಸದನಗಳಲ್ಲೂ ಭಾರಿ ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು.
ನಗರ ವ್ಯವಹಾರಗಳ ಖಾತೆ ಸಚಿವ ರಾಂ ಜೇಠ್ಮಲಾನಿ ಅವರು ನಿನ್ನೆ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ, ಮೀಸಲಾತಿ ನೀತಿ ಪುನರ್ ವಿಮರ್ಶಿಸುವುದಾಗಿ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿರೋಧಿ ನಾಯಕ ಶರದ್ ಪವಾರ್ ಆಕ್ಷೇಪ ವ್ಯಕ್ತಪಡಿಸಿದರು.
ನೌಕರರ ಮುಷ್ಕರ: ದೇಶದಾದ್ಯಂತ ಅಂಚೆ ಸೇವೆ ಅಸ್ತವ್ಯಸ್ತ
ನವದೆಹಲಿ, ಜುಲೈ 9 (ಪಿಟಿಐ): ಹೆಚ್ಚಿನ ವೇತನ, ಅಧಿಕ ಬೋನಸ್ ಹಾಗೂ ಇತರ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಅಂಚೆ ಇಲಾಖೆಯ ಸುಮಾರು ಆರು ಲಕ್ಷ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿಂದ ದೇಶದಾದ್ಯಂತ ಅಂಚೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಮುಷ್ಕರಕ್ಕೆ ಬಹುತೇಕ ಎಲ್ಲೆಡೆ ಉತ್ತೇಜಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಫ್‌ಎನ್‌ಪಿಒ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆರ್.ಎಲ್.ಭಟ್ಟಾಚಾರ್ಯ ಹೇಳಿದ್ದಾರೆ.
ರಾಜ್ಯಸಭೆ ಉಪಾಧ್ಯಕ್ಷೆಯಾಗಿ ಹೆಫ್ತುಲ್ಲಾ ಆಯ್ಕೆ
ನವದೆಹಲಿ, ಜುಲೈ 9 (ಪಿಟಿಐ)– ಹಿರಿಯ ಕಾಂಗ್ರೆಸ್ ಸದಸ್ಯೆ ನಜ್ಮಾ ಹೆಫ್ತುಲ್ಲಾ ಅವರು ರಾಜ್ಯಸಭೆಯ ಉಪಾಧ್ಯಕ್ಷೆಯಾಗಿ ಇಂದು ಸರ್ವಾನುಮತದಿಂದ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.