ಭಾನುವಾರ 26–9–1999
ಬಿಹಾರದಲ್ಲಿ ಐದು ಸಾವು: ಇಬ್ಬರು ಸಚಿವರ ಬಂಧನ
ನವದೆಹಲಿ, ಸೆ. 25 (ಪಿಟಿಐ, ಯುಎನ್‌ಐ)– ಒಂಭತ್ತು ರಾಜ್ಯಗಳಲ್ಲಿನ ಒಟ್ಟು 74 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಜರುಗಿದ ಮತದಾನದ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಬಿಹಾರದಲ್ಲಿ ಒಟ್ಟು ಐದು ಮಂದಿ ಸತ್ತಿದ್ದು, ಐವರು ಪೊಲೀಸರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ಬಿಹಾರದ ಇಬ್ಬರು ಸಚಿವರನ್ನು ಬಂಧಿಸಲಾಗಿದೆ.
ಮೋತಿಹಾರಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತದಾನಕ್ಕೆ ಅಡ್ಡಿಪಡಿಸಲು ಯತ್ನಿಸಿದ ಬಿಹಾರದ ಸಹಕಾರಿ ಸಚಿವ ಶ್ಯಾಮ್ ಬಹಾರಿ ಪ್ರಸಾದ್ ಅವರನ್ನು ಬಂಧಿಸಲಾಗಿದೆ. ಇವರು ಮತಗಟ್ಟೆಗೆ ಬಾಂಬ್ ಎಸೆದ ಪ್ರಕರಣದಲ್ಲಿ ಶಾಮೀಲಾದರೆನ್ನಾಗಿದ್ದು, ಮೋತಿಹಾರಿ ಚುನಾವಣಾಧಿಕಾರಿ ಅರುಣ್ ಕುಮಾರ್ ಅವರ ಆದೇಶದ ಅನುಸಾರ ಬಂಧಿಸಲಾಯಿತು.
ಸಿವಾನ್‌ನಲ್ಲಿ ಕೃಷಿ ಸಚಿವ ಶಿವಶಂಕರ ಯಾದವ್ ಅವರ ವಾಹನದಲ್ಲಿ 4 ರೈಫಲ್ ಪತ್ತೆಯಾದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.
ಯಶಸ್ವಿ ಸರ್ಕಾರ ಉರುಳಿಸುವ ಅಸ್ಥಿರ ಶಕ್ತಿ ಕಾಂಗ್ರೆಸ್: ಅಟಲ್
ಘಾಜಿಪುರ, (ಉತ್ತರಪ್ರದೇಶ), ಸೆ. 25 (ಪಿಟಿಐ)– ‘ಕಾರ್ಗಿಲ್ ಘರ್ಷಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಆತಂಕ ತಂದೊಡ್ಡುವ ಮೂಲಕ ಕಾಂಗ್ರೆಸ್ ಪಕ್ಷ ಸೈನಿಕರ ನೈತಿಕ ಸ್ಥೈರ್ಯ ಉಡುಗಿಸಿತು’ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಪಿಸಿದರು.
ಇಲ್ಲಿನ ರಾಮಲೀಲಾ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು ‘ಪಾಕಿಸ್ತಾನದ ವಿರುದ್ಧ ಹಿಂದೆ ನಡೆದ ಯುದ್ಧಗಳ ಸಂದರ್ಭದಲ್ಲಿ ಆಗಿನ ವಿರೋಧ ಪಕ್ಷಗಳು ಕಾರ್ಯ ನಿರ್ವಹಿಸಿದ ರೀತಿ ಕಾರ್ಗಿಲ್ ಸಮರದ ಸಂದರ್ಭದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ ರಚನಾತ್ಮಕ ಕಾರ್ಯ ನಿರ್ವಹಿಸಲಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.