ನವದೆಹಲಿ, ನ. 5 (ಪಿಟಿಐ)– ಬೊಫೋರ್ಸ್ ಆರೋಪಪಟ್ಟಿಯಿಂದ ರಾಜೀವ್ ಗಾಂಧಿ ಅವರ ಹೆಸರನ್ನು ತೆಗೆಯಬೇಕೆಂದು ಕೋರಿರುವ ಅರ್ಜಿಗೆ ದೆಹಲಿ ಹೈಕೋರ್ಟ್‌ನಲ್ಲಿ ಇಂದು ಕೇಂದ್ರ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತು.
ದೆಹಲಿಯ ‘ರಾಜೀವ್ ಗಾಂಧಿ ಏಕತಾ ಸಮಿತಿ’ ಎಂಬ ಸಂಸ್ಥೆಯೊಂದು ಈ ಅರ್ಜಿಯನ್ನು ಸಲ್ಲಿಸಿದ್ದು, ಆರೋಪಪಟ್ಟಿಯಿಂದ ರಾಜೀವ್ ಗಾಂಧಿ ಹೆಸರನ್ನು ತೆಗೆಯುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿದೆ.
ಆದರೆ ಈ ವಿಷಯದಲ್ಲಿ ಅರ್ಜಿ ಸಲ್ಲಿಸುವ ಹಕ್ಕು ಈ ಸಂಸ್ಥೆಗೆ ಇದೆಯೇ ಎಂಬ ಪ್ರಶ್ನೆಯನ್ನು ನ್ಯಾಯಮೂರ್ತಿ ಸಿರಿಯಕ್ ಜೋಸೆಫ್ ಅವರು ಎತ್ತಿದ್ದು, ಅಂಥ ಹಕ್ಕು ಇದೆ ಎಂಬುದನ್ನು ದಾಖಲೆಗಳ ಸಹಿತ ಸಾಬೀತುಪಡಿಸಲು ಅರ್ಜಿದಾರರಿಗೆ ನ. 18ರವರೆಗೆ ಕಾಲಾವಕಾಶ ನೀಡಿದ್ದಾರೆ.
ಭಾರತಕ್ಕೆ ಬಂದಿಳಿದ ಕ್ಯಾಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು
ನವದೆಹಲಿ, ನ. 5– ಮತಾಂತರದ ವಿಷಯಕ್ಕೆ ಸಂಬಂಧಿಸಿ ವ್ಯಾಪಕ ಚರ್ಚೆ ಮತ್ತು ಸಂಘ ಪರಿವಾರದ ತೀವ್ರ ವಿರೋಧದ ಮಧ್ಯೆ ಕ್ಯಾಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಜಾನ್ ಪಾಲ್ ಅವರು ಇಂದು ಸಂಜೆ ಇಲ್ಲಿಗೆ ಆಗಮಿಸಿದರು.
ಪಾಲಂ ವಿಮಾನ ನಿಲ್ದಾಣದಲ್ಲಿ ಪೋಪ್ ಅವರನ್ನು ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ಅಜಿತ್ ಕುಮಾರ್ ಪಾಂಜಾ ಅವರು ಪುಷ್ಪಗುಚ್ಛ ನೀಡಿ ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.