ADVERTISEMENT

25 ವರ್ಷಗಳ ಹಿಂದೆ: ಪಂಚಾಯಿತಿ ಚುನಾವಣೆ ಮುಂದೂಡಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 0:02 IST
Last Updated 6 ಫೆಬ್ರುವರಿ 2024, 0:02 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ದಾವಣಗೆರೆ, ಫೆ. 5– ಕರ್ನಾಟಕದ ಜನತಾದಳ ನೇತೃತ್ವದ ಸರ್ಕಾರ ಸೋಲಿನ ಭಯದಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಇಲ್ಲಿ ನೇರವಾಗಿ ಆರೋಪಿಸಿದರು.

ಅವರು ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ದಿ. ರಾಜೀವ್‌ ಗಾಂಧಿ ನನಸು ಮಾಡಿ, ಪಂಚಾಯಿತಿ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಿ ಸಂವಿಧಾನಬದ್ಧ ಅಧಿಕಾರ ನೀಡಿದ್ದರು. ದೇಶದ ಮೂಲೆ ಮೂಲೆಗೆ ಸಂಚರಿಸಿ ಪಂಚಾಯತ್‌ ರಾಜ್‌ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಸ್ಮರಿಸಿದರು.

ಆದರೆ ರಾಜ್ಯದಲ್ಲಿ ಈಗ ಅಧಿಕಾರ ನಡೆಸುತ್ತಿರುವ ಸರ್ಕಾರ, ಸಂವಿಧಾನದ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತಿದೆ ಎಂದು ಕಟು ಶಬ್ದಗಳಲ್ಲಿ ಟೀಕಿಸಿದರು.

ADVERTISEMENT

ಭಿನ್ನ ಶಾಸಕರ ರಾಜೀನಾಮೆ ಪತ್ರ ಗೌಡರ ಕೈಗೆ

ಬೆಂಗಳೂರು, ಫೆ. 5– ಸಂಪುಟ ಪುನರ್‌ರಚನೆ ವಿಚಾರದಲ್ಲಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲರು ತಳೆದಿರುವ ಧೋರಣೆಯನ್ನು ಪ್ರತಿಭಟಿಸಿ ವಿಧಾನಸಭೆಯ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ತೀರ್ಮಾನಿಸಿರುವ ಜನತಾದಳದ ಭಿನ್ನಮತೀಯ ಶಾಸಕರು, ತಮ್ಮ ರಾಜೀನಾಮೆ ಪತ್ರಗಳನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಇಂದು ಸಲ್ಲಿಸಿದರು.

ಸಂಪುಟ ಪುನರ್‌ರಚನೆ ಆಗಬೇಕೆಂಬುದು ಗೌಡರ ಬೆಂಬಲಿಗರ ಒತ್ತಾಯ. ಆದರೆ ವಿಸ್ತರಣೆ ಮಾತ್ರ ಮಾಡುವುದು ಪಟೇಲರ ಇಚ್ಛೆ. ಇದೇ ಈಗ ಭಿನ್ನಮತದ ಮೂಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.