ADVERTISEMENT

25 ವರ್ಷಗಳ ಹಿಂದೆ | ಪಾಕ್‌ನಲ್ಲಿ ತುರ್ತುಸ್ಥಿತಿ: ಸಂವಿಧಾನ ಅಮಾನತು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 0:38 IST
Last Updated 16 ಅಕ್ಟೋಬರ್ 2024, 0:38 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಪಾಕ್‌ನಲ್ಲಿ ತುರ್ತುಸ್ಥಿತಿ ಸಂವಿಧಾನ ಅಮಾನತು

ಇಸ್ಲಾಮಾಬಾದ್, ಅ. 15 (ಪಿಟಿಐ)– ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಸಂವಿಧಾನವನ್ನು ಅಮಾನತುಗೊಳಿಸಲಾಗಿದೆ. ಜನರಲ್‌ ಪರ್ವೇಜ್‌ ಮುಷರಫ್ ದೇಶದ ಮುಖ್ಯ ಅಧಿಕಾರಿಯಾಗಿ ಸ್ವಯಂ ಘೋಷಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತೆ ಸೇನಾ ಸರ್ವಾಧಿಕಾರದ ತೆಕ್ಕೆಗೆ ಸಿಲುಕಿದೆ.

ಮಂಗಳವಾರ ಕ್ಷಿಪ್ರಕ್ರಾಂತಿ ನಡೆಸಿ ನವಾಜ್ ಷರೀಫ್ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಿದ ಮುಷರಫ್ ಇಂದು ಬೆಳಗಿನ ಜಾವ ತುರ್ತು ಪರಿಸ್ಥಿತಿ ಘೋಷಿಸಿದರು. ಕೆಲವು ಗಂಟೆಗಳಲ್ಲಿ ಸೇರಬೇಕಿದ್ದ ರಾಷ್ಟ್ರೀಯ ಅಸೆಂಬ್ಲಿಯನ್ನು ಹಾಗೂ ರಾಜ್ಯ ಅಸೆಂಬ್ಲಿಗಳನ್ನು ಅಮಾನತುಗೊಳಿಸಿದರು. ಸುಪ್ರೀಂ ಕೋರ್ಟ್‌ನ ಅಧಿಕಾರವನ್ನೂ ಮೊಟಕುಗೊಳಿಸಲಾಗಿದೆ. ಆದರೆ ಸಂಪೂರ್ಣ ಸೇನಾಡಳಿತ ಹೇರಲಾಗಿಲ್ಲ.

ADVERTISEMENT

ತುರ್ತು ಪರಿಸ್ಥಿತಿ ಘೋಷಣೆ ಆದೊಡನೆಯೇ ಸೇನಾ ಅಧಿಕಾರಿಗಳು ನಾಲ್ಕೂ ಪ್ರಾಂತ್ಯಗಳ ಅಧಿಕಾರ ವಹಿಸಿಕೊಂಡರು. ತುರ್ತು ಪರಿಸ್ಥಿತಿ ಎಷ್ಟು ಸಮಯವಿರುತ್ತದೆ ಎಂಬುದನ್ನು ಹೇಳಲಾಗಿಲ್ಲ.

ರಾಜೀವ್ ಹಂತಕರಿಗೆ ನ.5ಕ್ಕೆ ಗಲ್ಲುಶಿಕ್ಷೆ ಜಾರಿ ಅಸಂಭವ

ಚೆನ್ನೈ, ಅ. 15 (ಪಿಟಿಐ)– ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರಿಗೆ ನವೆಂಬರ್ ಐದರಂದು ಈ ಶಿಕ್ಷೆ ಜಾರಿಗೊಳಿಸಬೇಕು ಎಂದು ಇಲ್ಲಿನ ವಿಚಾರಣಾ ನ್ಯಾಯಾಲಯ ಆದೇಶ ನೀಡಿದೆ.

ಆದರೆ ತಮಗೆ ಕ್ಷಮಾದಾನ ಕರುಣಿಸಬೇಕು ಎಂದು ಅಪರಾಧಿಗಳು ರಾಷ್ಟ್ರಪತಿಯವರಲ್ಲಿ ಕೋರಿಕೊಳ್ಳಲಿರುವ ಅರ್ಜಿ ಇತ್ಯರ್ಥವಾಗುವ ತನಕ ಇವರನ್ನು ಗಲ್ಲಿಗೇರಿಸುವುದಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.

ಗಲ್ಲುಶಿಕ್ಷೆಗೆ ಗುರಿಯಾಗಿರುವ ಮುರುಗನ್, ನಳಿನಿ, ಸಂತನ್ ಮತ್ತು ಪೇರ್‌ಅರಿವಳನ್ ಅವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದನ್ನು ದೃಢಪಡಿಸಿದ ನಿಯೋಜಿತ ನ್ಯಾಯಾಲಯ, ನ. 5ರಂದು ಇವರನ್ನು ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು.

ಏರಿದ ತರಕಾರಿ ಬೆಲೆ ಕಂಗಾಲಾದ ನಾಗರಿಕರು

ಬೆಂಗಳೂರು, ಅ. 16– ತರಕಾರಿಗಳ ಬೆಲೆ ತುಟ್ಟಿಯಿಂದಾಗಿ ಮೊದಲೇ ನಲುಗಿದ್ದ ಶ್ರೀಸಾಮಾನ್ಯ ಈಗ ಡೀಸೆಲ್ ಬೆಲೆ ಏರಿಕೆ ಹಾಗೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತರಕಾರಿಗಳ ಬೆಲೆ ಮತ್ತಷ್ಟು ಹೆಚ್ಚಳವಾಗಿ ಕಂಗಾಲಾಗಿದ್ದಾನೆ.

ಮಳೆ ಬಾರದಿದ್ದರೂ ಕಷ್ಟ, ಬಂದರೂ ಕಷ್ಟ ಎಂಬ ಅರಿವು ರೈತರಿಗೆ ಹೊಸದೇನೂ ಅಲ್ಲ.

ಕಾರಣ, ಬೆಳೆಗಾಗಿ ಮಳೆ ಬರಬೇಕು ಎಂಬುದು ಪ್ರತಿಯೊಬ್ಬ ರೈತನ ಆಸೆ. ಆದರೆ, ಬೆಳೆ ಬಂದಾಗ ಕಟಾವಿಗೂ ಬಿಡುವು ಕೊಡದೆ ನಿರಂತರವಾಗಿ ಸುರಿಯುವ ಮಳೆಯೇ ರೈತನಿಗೆ ಶಾಪವಾಗಿ ಪರಿಣಮಿಸಿದರೆ ಏನು ಗತಿ?

ಕಳೆದ ಕೆಲವು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ತರಕಾರಿಗಳು ಮಾರುಕಟ್ಟೆಗೆ ಸಮರ್ಪಕ ರೀತಿಯಲ್ಲಿ ಪೂರೈಕೆಯಾಗದೆ ಅವುಗಳ ಬೆಲೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.