ನಾಡಹಬ್ಬಕ್ಕೆ ಸರಳ ಆರಂಭ
ಮೈಸೂರು, ಸೆ. 25– ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ಅವರು ಸೋಮವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಒಂಬತ್ತು ದಿನಗಳ ವಿಶ್ವವಿಖ್ಯಾತ ದಸರಾ ಉತ್ಸವವನ್ನು ಉದ್ಘಾಟಿಸಿದರು.
ಸೋಮವಾರ ಬೆಳಗಿನಲ್ಲಿ ಹೆಚ್ಚು ಸದ್ದಿಲ್ಲದೆ ಮೊಳಗಿದ ಈ ಉದ್ಘಾಟನೆಯ ಕಹಳೆ ಇಡೀ ನಾಡಿಗೆ, ‘ನಾಡಹಬ್ಬ’ ದಸರಾ ಆರಂಭವಾದುದನ್ನು ಸಾರಿತು. ಮುಖ್ಯಮಂತ್ರಿಯವರೂ ಸೇರಿದಂತೆ ಅನೇಕ ಸಚಿವರು, ಗಣ್ಯರು ಈ ಹಬ್ಬವನ್ನು ಬೆಟ್ಟದ ನೆತ್ತಿಯ ಮೇಲೆ ನಿಂತು ಸ್ವಾಗತಿಸಿದರು.
ರಾಜ್ಯದ ಗರಡಿ ಮನೆಗಳ ಜೀರ್ಣೋದ್ಧಾರಕ್ಕೆ ಕ್ರಮ
ಮೈಸೂರು, ಸೆ. 25– ರಾಜ್ಯದ ಎಲ್ಲಾ ಗರಡಿ ಮನೆಗಳ ಜೀರ್ಣೋದ್ಧಾರ ಮಾಡಲಾಗುವುದು, ಅಲ್ಲದೆ ರಾಷ್ಟ್ರ ಪ್ರಸಿದ್ಧ ಮೈಸೂರು ದಸರಾ ಕುಸ್ತಿ ಪಂದ್ಯದಲ್ಲಿ ವಿಜೇತರಾದ ಪೈಲ್ವಾನರುಗಳಿಗೆ ನೀಡಲಾಗುತ್ತಿರುವ ಬಹುಮಾನದ ಮೊತ್ತವನ್ನು ಎರಡುಪಟ್ಟು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.
ಗರಡಿ ಮನೆಗಳ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಬರುವ ಮುಂಗಡಪತ್ರದಲ್ಲಿ ಸೇರಿಸಲಾಗುವುದು ಎಂದು ಪ್ರಕಟಿಸಿದ ಅವರು, ಹೆಚ್ಚಿಸಲಾದ ಬಹುಮಾನದ ಮೊತ್ತ ಈ ಸಾರಿಯಿಂದಲೇ ಜಾರಿಗೆ ಬರಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.