ಈರುಳ್ಳಿ ಬೆಲೆ ಸ್ಥಿರತೆಗೆ ರೂ. 20 ಕೋಟಿ ‘ಆವರ್ತ ನಿಧಿ’
ಹುಬ್ಬಳ್ಳಿ, ನ. 15– ಬೆಲೆ ಕುಸಿತದಿಂದ ತತ್ತರಿಸಿರುವ ರಾಜ್ಯದ ಈರುಳ್ಳಿ ಬೆಳೆಗಾರರ ರಕ್ಷಣೆ ಸಲುವಾಗಿ 20 ಕೋಟಿ ರೂಪಾಯಿಗಳ ‘ಆವರ್ತ ನಿಧಿ’ (ರಿವಾಲ್ವಿಂಗ್ ಫಂಡ್) ರಚಿಸಿ ಅದರ ಮೂಲಕ ಮಾರುಕಟ್ಟೆ ಬೆಲೆ ಸ್ಥಿರತೆಗೆ ಕ್ರಮ ಕೈಗೊಳ್ಳಲು ಸರ್ಕಾರ ಉದ್ದೇಶಿಸಿದ್ದು, ಒಂದೆರಡು ದಿನಗಳ ಒಳಗಾಗಿ ಈ ಯೋಜನೆಗೆ ಸ್ಪಷ್ಟ ಸ್ವರೂಪ ನೀಡಿ ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಿದೆ.
ಹುಬ್ಬಳ್ಳಿಗೆ ಒಂದು ದಿನದ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಂದ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವ ಎಚ್.ಕೆ. ಪಾಟೀಲ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು.
‘ಆವರ್ತ ನಿಧಿ’ ಯೋಜನೆಯ ರೂಪುರೇಷೆ ತಯಾರಿಸಲಾಗುತ್ತಿದ್ದು ಒಂದೆರಡು ದಿನಗಳಲ್ಲಿ ಇದು ಪೂರ್ಣಗೊಳ್ಳಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಎಂಡಿಎನ್ ಅಮಾನತು, ಪುಟ್ಟಣ್ಣಯ್ಯ ಅಧ್ಯಕ್ಷ
ಶಿವಮೊಗ್ಗ, ನ. 15– ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಸಮಿತಿಯು ತನ್ನ ಅಧ್ಯಕ್ಷ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರನ್ನು ಅಮಾನತು ಮಾಡಿ, ಆ ಸ್ಥಾನಕ್ಕೆ ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಹಂಗಾಮಿಯನ್ನಾಗಿ ಇಂದು ಆಯ್ಕೆ ಮಾಡಿದೆ.
ಶಿವಮೊಗ್ಗ ನಗರದ ಹೊರವಲಯದಲ್ಲಿರುವ, ರೈತಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಎಚ್.ಎಸ್. ರುದ್ರಪ್ಪ ಅವರ ಸಮಾಧಿ ಬಳಿ ನಡೆದ ರಾಜ್ಯ ಸಮಿತಿಯ ಪೂರ್ಣ ಸಭೆಯು ಈ ಕುರಿತು ಒಮ್ಮತದ ನಿರ್ಣಯ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.