ತುರ್ತು ಬಳಕೆ ವಿಮಾನದಲ್ಲಿ ಸಚಿವರ ‘ಯಾತ್ರೆ’
ಬೆಂಗಳೂರು, ಸೆ. 22– ರೈಲ್ವೆ ಇಲಾಖೆ ವಿಮಾನ ತೆಗೆದುಕೊಂಡದ್ದು ಅಪಘಾತ, ಪ್ರವಾಹ ಮತ್ತಿತರ ತುರ್ತು ಪರಿಸ್ಥಿತಿಗಳಲ್ಲಿ
ಬಳಸಲು. ಆದರೆ ಈವರೆಗಿನ 111 ಪಯಣಗಳ ಪೈಕಿ ಈ ಉದ್ದೇಶಕ್ಕೆ ಬಳಸಿದ್ದು ಆರು ಬಾರಿ (12 ಪಯಣ) ಮಾತ್ರ!
ಮಿಕ್ಕ ಟ್ರಿಪ್‌ಗಳೆಲ್ಲ ಸಚಿವರು, ಆಪ್ತ ಸಿಬ್ಬಂದಿಯ ಓಡಾಟಕ್ಕೆ, ಇತರ ಸಚಿವರ ಪುಣ್ಯಕ್ಷೇತ್ರ ದರ್ಶನ, ಸ್ವಕ್ಷೇತ್ರ ದರ್ಶನಕ್ಕೆ. ಇದಕ್ಕಾಗಿ ವೆಚ್ಚವಾದ ಹಣ ವರ್ಷಕ್ಕೆ ಸುಮಾರು ಎರಡೂವರೆ ಕೋಟಿ ರೂಪಾಯಿ. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕಳೆದ ತಿಂಗಳು
ಮಂಡಿಸಿದ ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಿದೆ. ವಿಮಾನವು ಕೊಂಡ ಉದ್ದೇಶಕ್ಕೆ ಬಳಕೆಯಾಗದೆ ಅನ್ಯ ಉದ್ದೇಶಕ್ಕೆ ಬಳಕೆಯಾಗಿರುವುದಕ್ಕೆ ವರದಿಯಲ್ಲಿ ಬಲವಾಗಿ ಆಕ್ಷೇಪಿಸಿದೆ.
ರಾಜ್ಯದ 119 ತಾಲ್ಲೂಕುಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ
ಬೆಂಗಳೂರು, ಸೆ. 22– ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಾಹಾರ ನೀಡುವ ಕೇಂದ್ರ ಸರ್ಕಾರದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ರಾಜ್ಯದ 119 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಚ್.ಜಿ.ಗೋವಿಂದೇಗೌಡರು ವಿಧಾನ ಪರಿಷತ್‌ನಲ್ಲಿ ಇಂದು ತಿಳಿಸಿದರು.
ಈ ಯೋಜನೆ ಅನ್ವಯ ಕೇಂದ್ರವು ಪ್ರತೀ ಮಗುವಿಗೆ ದಿನಕ್ಕೆ 100 ಗ್ರಾಂನಂತೆ ತಿಂಗಳಿಗೆ ಮೂರು ಕೆ.ಜಿ ಗೋಧಿ, ಸಾಗಣೆ ವೆಚ್ಚವಾಗಿ ಪ್ರತಿ ಕ್ವಿಂಟಲ್‌ಗೆ 25 ರೂಪಾಯಿ ನೀಡುತ್ತಿದೆ. ರಾಜ್ಯ ಸರ್ಕಾರ ಈ ಆಹಾರ ಧಾನ್ಯವನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.