ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಕೇಂದ್ರಕ್ಕೆ ಬೆಂಬಲ ಕುರಿತು ಇಂದು ಜಯಾ ನಿರ್ಧಾರ ಸಂಭವ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 23:31 IST
Last Updated 30 ಜೂನ್ 2023, 23:31 IST
ಪ್ರಜಾವಾಣಿ 25 ವರ್ಷಗಳ ಹಿಂದೆ
ಪ್ರಜಾವಾಣಿ 25 ವರ್ಷಗಳ ಹಿಂದೆ   

ಕೇಂದ್ರಕ್ಕೆ ಬೆಂಬಲ: ಇಂದು ಜಯಾ ನಿರ್ಧಾರ ಸಂಭವ

ಚೆನ್ನೈ, ಜೂನ್‌ 30– ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಅವರು ತಮ್ಮ ಪಕ್ಷದ ಲೋಕಸಭಾ ಸದಸ್ಯರ ಸಭೆಯನ್ನು ನಾಳೆ ಇಲ್ಲಿ ತಮ್ಮ ನಿವಾಸದಲ್ಲಿ ಕರೆದಿದ್ದಾರೆ.

ಜೂನ್‌ 27ರಂದು ನಡೆದ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ನೇತೃತ್ವದ ಪಾಲುದಾರರ ಸಮನ್ವಯ ಸಮಿತಿ ಸಭೆಗೆ ಜಯಲಲಿತಾ ಹಾಗೂ ಅವರ ಮಿತ್ರಕೂಟ ಭಾಗವಹಿಸದೇ ಇರುವ ಹಿನ್ನೆಲೆಯಲ್ಲಿ ನಾಳಿನ ಸಭೆ ಮಹತ್ವ ಪಡೆದುಕೊಂಡಿದೆ.

ಈ ನಡುವೆ ಜಯಲಲಿತಾ ಅವರು ಇಂದು ಪಕ್ಷದ ಅಧ್ಯಕ್ಷ ವಿ.ಆರ್‌. ನೆಡುಂಚೆಳಿಯನ್‌, ಕೇಂದ್ರ ಸಚಿವ ಕೆ.ಜನಾರ್ದನ, ಕೇಂದ್ರ ಮಾಜಿ ಸಚಿವ ಆರ್‌. ಮುತ್ತಯ್ಯ ಅವರೊಡನೆ ಸುದೀರ್ಘ ಚರ್ಚೆ ನಡೆಸಿರುವುದು ಹೊಸ ಬೆಳವಣಿಗೆ.

ADVERTISEMENT

ನಾಳೆ ಸಂಸತ್‌ ಸದಸ್ಯರೊಡನೆ ನಡೆಸಲಿರುವ ಸಭೆಯ ಮಾತುಕತೆಯ ಫಲಿತಾಂಶ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದ ಮೇಲೆ ನೇರ ಪರಿಣಾಮ ಬೀರಲಿದೆ. ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಎಐಎಡಿಎಂಕೆ ಔಪಚಾರಿಕವಾಗಿ ಪಾವಸ್‌ ಪಡೆಯುವಂಥ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಜಯಲಲಿತಾ ನೇತೃತ್ವದ ಮಿತ್ರಕೂಟದ ಮೂಲಗಳು ತಿಳಿಸಿವೆ.

ಕಳಪೆ ಬೀಜ, ಕೀಟನಾಶಕ– ಅತ್ಯುಗ್ರ ಶಿಕ್ಷೆಗೆ ಸಲಹೆ

ಬೆಂಗಳೂರು, ಜೂನ್‌ 30– ಕಳಪೆ ಬೀಜ ಮತ್ತು ಕ್ರಿಮಿನಾಶಕಗಳ ಮಾರಾಟಗಾರರ ವಿರುದ್ಧ ಮರಣ ದಂಡನೆ ಹೊರತುಪಡಿಸಿ ಬೇರೆ ಯಾವ ರೀತಿಯಲ್ಲಿ ಉಗ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂಬುದರ ಬಗ್ಗೆ ಕೀಟನಾಶಕಗಳು ಮತ್ತು ಬೀಜಗಳ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸುವುದಾಗಿ ಕೃಷಿ ಸಚಿವ ಸಿ.ಬೈರೇಗೌಡ ಅವರು ಇಂದು ಇಲ್ಲಿ ತಿಳಿಸಿದರು.

ಕಳಪೆ ಬೀಜ ಮತ್ತು ಕ್ರಿಮಿನಾಶಕಗಳ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಹಾಲಿ ಕೇಂದ್ರದ ಕಾಯ್ದೆಗೆ ನಿರೀಕ್ಷಿತ ಶಕ್ತಿ ಇಲ್ಲ. ಇದರಿಂದಾಗಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿದೆ ಎಂದರು.

ಈ ಪ್ರಸ್ತಾವನೆಗೆ ರಾಷ್ಟ್ರಪತಿಗಳ ಪೂರ್ವಾನುಮತಿ ಪಡೆಯುವ ಸಲುವಾಗಿ ಕರಡು ಸಿದ್ಧಪಡಿಸಲಾಗುತ್ತಿದೆ. ಒಂದು ವೇಳೆ ಅಲ್ಲಿ ಸಾಧ್ಯವಾಗದೇ ಹೋದಲ್ಲಿ ರಾಜ್ಯ ಸರ್ಕಾರವೇ ಕಾನೂನು ರೂಪಿಸಿ ಕಳಪೆ ವಹಿವಾಟುವಿನಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ರಾಜ್ಯದ ವ್ಯಾಪ್ತಿಯಲ್ಲಿ ಎಷ್ಟು ಉಗ್ರ ಶಿಕ್ಷೆ ಕೊಡಲು ಸಾಧ್ಯ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.