ADVERTISEMENT

25 ವರ್ಷಗಳ ಹಿಂದೆ | ಪಾಕಿಸ್ತಾನದ ಸಂಚು ಬಯಲು : ಇಂದು ಚರ್ಚೆಗೆ ಭಾರತ ಸಜ್ಜು

ಪ್ರಜಾವಾಣಿ ವಿಶೇಷ
Published 12 ಜೂನ್ 2024, 0:06 IST
Last Updated 12 ಜೂನ್ 2024, 0:06 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಪಾಕಿಸ್ತಾನದ ಸಂಚು ಬಯಲು : ಇಂದು ಚರ್ಚೆಗೆ ಭಾರತ ಸಜ್ಜು

ನವದೆಹಲಿ, ಜೂನ್‌ 11– ಕಾರ್ಗಿಲ್‌ ವಲಯದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯ ನಿವಾರಣೆಗೆಂದು ನಾಳೆ ಪಾಕಿಸ್ತಾನದ ಜತೆ ಮಾತುಕತೆ ನಡೆಸುವ ಭಾರತವು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿರುವ ಪಾಕಿಸ್ತಾನಕ್ಕೆ ತನ್ನ ಸೈನಿಕರು ಮತ್ತು ಅತಿಕ್ರಮಣಕಾರರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆಗ್ರಹಪಡಿಸಲಿದೆ.

ಇದರ ಜತೆಗೆ ಮುಖ್ಯವಾಗಿ ತನ್ನ ಆರು ಮಂದಿ ಯೋಧರನ್ನು ಚಿತ್ರಹಿಂಸೆ ನೀಡಿ ಅಮಾನುಷವಾಗಿ ಕೊಂದಿರುವ ಪ್ರಕರಣವನ್ನು ನಾಳಿನ ಸಭೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿರುವುದರಿಂದ, ಉಭಯ ರಾಷ್ಟ್ರಗಳ ನಡುವೆ ಉದ್ಭವಿಸಿರುವ ಗಂಭೀರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣ
ಆಗಲಿದೆ.

ಎರಡು ದೇಶಗಳ ಗಡಿಯಲ್ಲಿ ಶಾಂತಿ ನೆಲಸಬೇಕೆಂಬ ಇಚ್ಛೆ ಪಾಕಿಸ್ತಾನಕ್ಕೆ ನಿಜವಾಗಿಯೂ ಇದ್ದರೆ ಈಗಲೂ ಕಾಲ ಮಿಂಚಿಲ್ಲ. ತನ್ನ ಸೈನಿಕರು ಮತ್ತು ಅತಿಕ್ರಮಣಕಾರರನ್ನು ಹಿಂದಕ್ಕೆ ಕರೆಸಿಕೊಂಡು ಯಥಾಸ್ಥಿತಿಯನ್ನು ಪುನರ್‌ಸ್ಥಾಪಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್‌ ಸಿಂಗ್‌ ಇಂದು ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದರು.

ADVERTISEMENT

ಕಾರ್ಗಿಲ್‌ನಲ್ಲಿ ಪಾಕ್‌ ಸೇನೆ: ಐಎಸ್‌ಐ ಒಪ್ಪಿಗೆ

ಇಸ್ಲಾಮಾಬಾದ್‌, ಜೂನ್‌ 11 (ಯುಎನ್‌ಐ)– ‍ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್‌ ಅಜೀಜ್‌ ಅವರ ದೆಹಲಿ ಭೇಟಿಗೆ ಕೇವಲ 36 ಗಂಟೆಗಳು ಇರುವಂತೆ, ಕಾರ್ಗಿಲ್‌ ಹಾಗೂ ದ್ರಾಸ್‌ ವಿಭಾಗಗಳ ಭಾರತದ ಪ್ರದೇಶದಲ್ಲಿ ಪಾಕಿಸ್ತಾನದ ಸೇನೆ ಇರುವುದು ನಿಜ ಎಂದು ಪಾಕಿಸ್ತಾನ ಸೇನೆಯ ಬೇಹುಗಾರಿಕೆ ವಿಭಾಗವಾದ ಐಎಸ್‌ಐ ಒಪ್ಪಿಕೊಂಡಿದೆ. ಇದು ಒಂದು ಆಶ್ಚರ್ಯಕರ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

ಐಎಸ್‌ಐ ನಿರ್ದೇಶಕ ಬ್ರಿಗೆಡಿಯರ್‌ ರಶೀದ್‌ ಕುರೇಶಿ ಅವರು ಈ ಹೇಳಿಕೆ ನೀಡಲು ಇಸ್ಲಾಮಾಬಾದ್‌ ಬದಲು ಪೆಶಾವರವನ್ನು ಆಯ್ದುಕೊಂಡದ್ದು ಇನ್ನಷ್ಟು ಆಶ್ಚರ್ಯಕರ ಆಗಿದೆ.

ದ್ರಾಸ್‌ ಹಾಗೂ ಕಾರ್ಗಿಲ್‌ ಪ್ರದೇಶಗಳ ಗಿರಿಶಿಖರಗಳಲ್ಲಿ ಪಾಕಿಸ್ತಾನದ ಸೇನೆಯು ಠಾಣೆಗಳನ್ನು ಸ್ಥಾಪಿಸಿದ್ದು, ಅಲ್ಲಿಂದ ಶ್ರೀನಗರ– ಲೇಹ್‌ ಹೆದ್ದಾರಿಯನ್ನು ನಿಯಂತ್ರಿಸುವುದಕ್ಕೆ ಶಕ್ತವಾಗಿದೆ ಎಂದು ಕುರೇಶಿ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.