ಬೆಂಗಳೂರು, ನ. 25– ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ಮುಂಬೈಗೆ ನೇರವಾಗಿ ವಿಮಾನಯಾನ ಪ್ರಾರಂಭಿಸಲು ರಾಜ್ಯ ಸರ್ಕಾರ ಪ್ರಯತ್ನಿಸುವುದೆಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇಂದು ಇಲ್ಲಿ ಭರವಸೆ ನೀಡಿದರು.
‘ದಿ ಗ್ರೇಟರ್ ಮೈಸೂರು ಚೇಂಬರ್ ಆಫ್ ಇಂಡಸ್ಟ್ರಿ ಸಂಸ್ಥೆಯು ಏರ್ಪಡಿಸಿದ್ದ ‘ಸಂವಾದ’ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಮೈಸೂರು ಮತ್ತು ಹುಬ್ಬಳ್ಳಿ ನಗರಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ ಅಪಾರ ಅವಕಾಶಗಳಿವೆ. ಈ ಹಿನ್ನಲೆಯಲ್ಲಿ ಮುಂಬೈಗೆ ವಿಮಾನಯಾನ ಅಗತ್ಯ. ಈ ಬಗ್ಗೆ ಕೇಂದ್ರದ ನಾಗರಿಕ ವಿಮಾನಯಾನ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವುದಕ್ಕೆ ಕೇಂದ್ರವು ತಾತ್ವಿಕವಾಗಿ ಒಪ್ಪಿದೆ. ಜತೆಗೆ ಬೆಂಗಳೂರಿನಲ್ಲಿ ಇರುವ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆಯೂ ತಾವು ಕೇಂದ್ರದ ನಾಗರಿಕ ವಿಮಾನಯಾನ ಖಾತೆಯ ಸಚಿವರಲ್ಲಿ ಮನವಿ ಮಾಡಿರುವುದಾಗಿ ಕೃಷ್ಣ ಹೇಳಿದರು.
ನವದೆಹಲಿ, ನ. 25– ಭಾರತದ ಅಣ್ವಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಪಿತಾಮಹ ಎಂದೇ ಖ್ಯಾತರಾಗಿರುವ ಕಳೆದ ವರ್ಷ ‘ಭಾರತ ರತ್ನ’ ಪ್ರಶಸ್ತಿ ಪಡೆದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (60) ಅವರನ್ನು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರನೆಂದು ನೇಮಕ ಮಾಡಲಾಗಿದೆ.
ಸಂಪುಟ ದರ್ಜೆ ಸಚಿವ ಮಟ್ಟದ ಈ ಹುದ್ದೆಗೆ ನೇಮಕ ಆಗಿರುವ ಕಲಾಂ ಅವರು, ದೇಶದಲ್ಲಿನ ಎಲ್ಲ ವೈಜ್ಞಾನಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವರು. ತಾಂತ್ರಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ವಿದೇಶಿ ಸಹಭಾಗಿತ್ವ ಕುರಿತೂ ಸಲಹೆ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವರು ಎಂದು ಅಧಿಕೃತ ವಕ್ತಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.