ಒರಿಸ್ಸಾದಲ್ಲಿ ಮತ್ತೆ ಚಂಡಮಾರುತ ಭಾರಿ ಸಾವು ನೋವು ಶಂಕೆ
ಭುವನೇಶ್ವರ, ಅ. 29 (ಪಿಟಿಐ, ಯುಎನ್‌ಐ)– ಭಾರಿ ಚಂಡಮಾರುತದಿಂದ ಒರಿಸ್ಸಾದ ಕರಾವಳಿ ತತ್ತರಿಸಿದೆ. 260 ಕಿಲೊಮೀಟರ್ ವೇಗದಲ್ಲಿ ಬಂದು ಅಪ್ಪಳಿಸಿದ ಚಂಡಮಾರುತದಿಂದ ಭಾರಿ ಸಾವು–ನೋವು ಸಂಭವಿಸಿರಬಹುದು
ಎಂದು ಶಂಕಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಸುಮಾರು 15 ಮಂದಿ ಚಂಡಮಾರುತಕ್ಕೆ ಬಲಿಯಾಗಿದ್ದು, 20 ಮೀನುಗಾರರು ನಾಪತ್ತೆ ಆಗಿದ್ದಾರೆ.
ಗ್ರಾಮ ಪಂಚಾಯ್ತಿ ಮರು ಜಾರಿಗೆ ನಿರ್ಧಾರ
ಬೆಂಗಳೂರು, ಅ. 29– ಹಿಂದಿನ ಗ್ರಾಮ ಪಂಚಾಯ್ತಿ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಲು ಹಾಗೂ ಇದಕ್ಕಾಗಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ತರಲು ಇಂದು ಇಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಗ್ರಾಮ ಪಂಚಾಯ್ತಿ ವ್ಯವಸ್ಥೆಗೆ ಜನತಾದಳ ನೇತೃತ್ವದ ಸರ್ಕಾರ ತನ್ನ ಆಡಳಿತದ ಕೊನೆಯ ದಿನಗಳಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅದರ ಸ್ವರೂಪವನ್ನೇ ಬದಲಾಯಿಸಿತ್ತು. ಇದರಿಂದಾಗಿ ಸುಮಾರು 5600ರಷ್ಟಿದ್ದ ಗ್ರಾಮ ಪಂಚಾಯ್ತಿಗಳ ಸಂಖ್ಯೆ 2800ಕ್ಕೆ ಇಳಿದಿತ್ತು.
ಆದರೆ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಹಿಂದೆ ತನ್ನ ಅಧಿಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಗ್ರಾಮ ಪಂಚಾಯ್ತಿ ವ್ಯವಸ್ಥೆಯನ್ನು ಜಾರಿಗೆ ತರುವುದರ ಜತೆಗೆ ಈ ಸಂಸ್ಥೆಗಳಿಗೆ ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಸಲು
ಉದ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.