ರಾಜ್ಯದಿಂದ ಒರಿಸ್ಸಾ ಕೇಂದ್ರಪಾಡ ಜಿಲ್ಲೆ ದತ್ತು
ಬೆಂಗಳೂರು, ನ. 10– ‘ಒರಿಸ್ಸಾದಲ್ಲಿ ಸಂಭವಿಸಿದ ಭೀಕರ ಚಂಡಮಾರುತದಲ್ಲಿ ಅಪಾರ ಹಾನಿಗೆ ಒಳಗಾಗಿರುವ ಐದು ಜಿಲ್ಲೆಗಳ ಪೈಕಿ ಕೇಂದ್ರಪಾಡ ಜಿಲ್ಲೆಯನ್ನು ಕರ್ನಾಟಕ ದತ್ತು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಪ್ರಕಟಿಸಿದರು.
ಚಂಡಮಾರುತ ಸಂತ್ರಸ್ತರಿಗೆ ಉಚಿತವಾಗಿ ವಿತರಣೆ ಮಾಡಲು ಸುಮಾರು 1.12 ಕೋಟಿ ರೂಪಾಯಿಗಳಷ್ಟು ಮೌಲ್ಯದ ಔಷಧಿ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ತುಂಬಿದ 13 ಲಾರಿಗಳು ಭುವನೇಶ್ವರಕ್ಕೆ ತೆರಳಲು ಹಸಿರು ನಿಶಾನೆ ತೋರುವ ಮುನ್ನ ಅವರು ಮಾತನಾಡಿದರು.
ಕೇಂದ್ರಪಾಡ ಜಿಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಜೀವ ಮತ್ತು ಆಸ್ತಿ–ಪಾಸ್ತಿಗಳನ್ನು ಕಳೆದುಕೊಂಡಿದೆ. ಇಲ್ಲಿನ ನಿರ್ಗತಿಕ ಜನರಿಗೆ ಗರಿಷ್ಠ ಪ್ರಮಾಣದಲ್ಲಿ ನೆರವು ನೀಡಲು
ಪ್ರಯತ್ನಿಸಲಾಗುವುದು ಎಂದರು.
ಭಾರತ– ಪಾಕಿಸ್ತಾನ ಷೆಲ್ ದಾಳಿ: 26 ಸಾವು
ಶ್ರೀನಗರ, ನ. 10– (ಯುಎನ್‌ಐ, ಪಿಟಿಐ)– ಉತ್ತರ ಕಾಶ್ಮೀರದ ಎರಡು ಠಾಣೆಗಳ ಮೇಲೆ ಪಾಕಿಸ್ತಾನಿ ಅತಿಕ್ರಮಣಕಾರರು ದಾಳಿ ನಡೆಸಿದ್ದರಿಂದ ಭಾರತ ಮತ್ತು ಪಾಕ್ ಪಡೆಗಳ ನಡುವೆ ಕಾಳಗ ನಡೆದು 9 ಮಂದಿ ಭಾರತೀಯ ಸೈನಿಕರು ಹಾಗೂ 17 ಮಂದಿ ಪಾಕ್ ಯೋಧರು ಸೇರಿದಂತೆ 26 ಮಂದಿ ಸತ್ತಿದ್ದಾರೆ. ಅಲ್ಲದೆ 12 ಮಂದಿ ಗಾಯಗೊಂಡಿದ್ದಾರೆ.
ಈ ನಡುವೆ, ಜಮ್ಮುವಿನ ರಜೌರಿ ವಲಯದ ನೌಷೇರಾ ಮತ್ತು ಲಾಮ್ ಪ್ರದೇಶದಲ್ಲಿ ಪಾಕಿಸ್ತಾನದ ನಾಲ್ಕು ಬಂಕರ್‌ಗಳನ್ನು ಧ್ವಂಸ ಮಾಡಲಾಗಿದೆ. ನಿನ್ನೆಯಿಂದ ವಾಸ್ತವ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ದಾಳಿ ನಡೆಸಿವೆ.
ಈ ದಾಳಿಯಿಂದ ಉಂಟಾದ ಸಾವು ನೋವಿನ ವಿವರಗಳು ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.