ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಖಾಸಗಿ ಕಾಲೇಜುಗಳ ನಕಾರ
ಬೆಂಗಳೂರು, ಆ. 13– ವೃತ್ತಿಪರ ಶಿಕ್ಷಣ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಹೇಳಿರುವ ರಾಜ್ಯದ ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯ ಕಾಲೇಜುಗಳು, ಈ ವರ್ಷ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿರಲು ನಿರ್ಧರಿಸಿವೆ.
ಆದರೆ ಈ ಕಾಲೇಜುಗಳಲ್ಲಿ ದ್ವಿತೀಯ ಮತ್ತು ನಂತರದ ವರ್ಷಗಳಲ್ಲಿ ವ್ಯಾಸಂಗ ಮುಂದುವರಿಸಿರುವ ವಿದ್ಯಾರ್ಥಿಗಳಿಗೆ
ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅವು ತೀರ್ಮಾನಿಸಿವೆ. ಖಾಸಗಿ ವೈದ್ಯಕೀಯ, ದಂತ ವೈದ್ಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಲಿಗಳ ಸಂಘಗಳ ಪ್ರತಿನಿಧಿಗಳು ನಗರದಲ್ಲಿ ಇಂದು ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಆರ್ಥಿಕವಾಗಿ ಸಂಪೂರ್ಣವಾಗಿ ಕಾರ್ಯಸಾಧುವಲ್ಲ ಎನ್ನುವುದನ್ನು ಆಧರಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆಯೇ ಹೊರತು ಸರ್ಕಾರಕ್ಕೆ ಬೆದರಿಕೆ ಒಡ್ಡುವ ಸಲುವಾಗಿ ಅಲ್ಲ ಎಂದು ಆಡಳಿತ ಮಂಡಲಿಗಳ ಸಂಘದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರು ಪತ್ರಕರ್ತರಿಗೆ ವಿವರಿಸಿದರು.
ಉಗ್ರರಿಂದ ನಾರ್ವೆ ಪ್ರವಾಸಿ ಹತ್ಯೆ
ಶ್ರೀನಗರ, ಆ. 13 (ಪಿಟಿಐ)– ಕಾಶ್ಮೀರದ ಅಲ್– ಫರಾನ್ ಸಂಘಟನೆಯ ಉಗ್ರಗಾಮಿಗಳು ತಾವು ಒತ್ತೆಸೆರೆ ಇರಿಸಿಕೊಂಡಿದ್ದ ನಾರ್ವೆಯ ಪ್ರವಾಸಿಯೊಬ್ಬನ ತಲೆಯನ್ನು ಇಂದು ಕತ್ತರಿಸಿ ಹತ್ಯೆ ಮಾಡಿದರು.
ತಮ್ಮ ಬೇಡಿಕೆಗಳನ್ನು ಸರ್ಕಾರ ಎರಡು ದಿನಗಳ ಒಳಗೆ ಈಡೇರಿಸದಿದ್ದಲ್ಲಿ ಒತ್ತೆಸೆರೆಯಲ್ಲಿರುವ ಉಳಿದ ನಾಲ್ವರು ವಿದೇಶಿಯರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಚೊಜಿಬಾಲ್‌ನಿಂದ ಜುಲೈ 9ರಂದು ಅಪಹರಿಸಲಾಗಿದ್ದ ನಾರ್ವೆ ಪ್ರಜೆ ಹ್ಯಾನ್ಸ್ ಕ್ರಿಶ್ಚಿಯನ್ ಒಸ್ರೊ ಅವರ ಶಿರಚ್ಛೇದ ಮಾಡಲಾದ ದೇಹವು ಇಂದು ಅನಂತ್‌ನಾಗ್ ನಗರದ ಬಳಿ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.