ಮಂಡಲ್ ಜಾರಿ ವಿಳಂಬ ವಿರೋಧಿಸಿ ಸಭಾತ್ಯಾಗ
ನವದೆಹಲಿ, ಡಿ. 23 (ಯುಎನ್ಐ, ಪಿಟಿಐ)– ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಲೋಕಸಭೆಯಲ್ಲಿ ಇಂದು ಜನತಾದಳ ಮತ್ತು ಎಡರಂಗದ ಸದಸ್ಯರು ಸಭಾತ್ಯಾಗ ಮಾಡಿದರು.
ಸುಪ್ರೀಂಕೋರ್ಟಿನ ತೀರ್ಪಿನ ನಂತರವೂ ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಜನತಾದಳದ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ವೀರಪ್ಪನ್ ಗುಂಪಿನ ಇಬ್ಬರು ಬಲಿ
ಮೈಸೂರು, ಡಿ. 23– ಕರ್ನಾಟಕ–ತಮಿಳುನಾಡು ಮತ್ತು ಗಡಿ ಭದ್ರತಾ ಪಡೆಯ ಜಂಟಿ ಕಾರ್ಯಾಚರಣೆಗೆ ಕರ್ನಾಟಕ, ತಮಿಳುನಾಡು ಗಡಿಯ ದೊಡ್ಡ ನಲಬೆಟ್ಟ ಅರಣ್ಯದಲ್ಲಿ ಇಂದು ಮುಂಜಾನೆ ವೀರಪ್ಪನ್ ಗುಂಪಿನ ಇಬ್ಬರು ಬಲಿಯಾಗಿದ್ದಾರೆ ಎಂದು ಸತ್ಯಮಂಗಲದಿಂದ ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.
ಗಡಿ ಭಾಗದ ಪೆರಿಯಾರ್ ಬಳಿ ಜಂಟಿ ಕಾರ್ಯಾಚರಣೆ ಪಡೆಯ ಆರು ತಂಡಗಳು ಶೋಧನಾ ಕಾರ್ಯ ನಡೆಸುತ್ತಿದ್ದಾಗ ಜಿಂಕೆ
ಯಂತೆ ಕೂಗುತ್ತಿರುವ ಸದ್ದು ಕೇಳಿ ಬಂತು. ಮಂಗಳವಾರ ಬೆಳಿಗ್ಗೆಯಿಂದ ಕೇಳಿ ಬರುತ್ತಿದ್ದ ಈ ಸದ್ದಿನ ಮೂಲವನ್ನು ಕಾರ್ಯಾಚ
ರಣೆ ಪಡೆಯ ಒಂದು ತಂಡ ಪತ್ತೆ ಹಚ್ಚಿತು.
ಎತ್ತರದ ಮರದ ಮೇಲೆ ಒಬ್ಬ ವ್ಯಕ್ತಿ ಪೊಲೀಸರ ಬರವನ್ನು ಅಲ್ಲಿ ಅವಿತಿದ್ದ ತಂಡಕ್ಕೆ ತಿಳಿಸಲು ಜಿಂಕೆಯಂತೆ ಕೂಗಿ ಸಂಜ್ಞೆ ಮಾಡುತ್ತಿದ್ದ. ಆತನನ್ನು ಸುತ್ತುವರಿಯುತ್ತಿದ್ದಂತೆ ಮರದಿಂದ ಧುಮುಕಿ ಪರಾರಿಯಾದ. ಕಾರ್ಯಾಚರಣೆ ಪಡೆ ಬೆನ್ನಟ್ಟಿದಾಗ ಅಲ್ಲಿ ಅವಿತಿದ್ದ ಇತರರು ಪೊಲೀಸರ ಮೇಲೆ ಗುಂಡು ಹಾರಿಸಿದರು. ಪೊಲೀಸರು ಅವರತ್ತ ಕೈಬಾಂಬುಗಳನ್ನು ಎಸೆದಾಗ ಇಬ್ಬರು ಸತ್ತರು, ಉಳಿದ ಹದಿಮೂರು ಮಂದಿ ಪರಾರಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.