ADVERTISEMENT

50 ವರ್ಷಗಳ ಹಿಂದೆ | ಮನೆಯಿಂದಲೇ ಕಚೇರಿ ಕೆಲಸ

5 ಜುಲೈ 1974, ಶುಕ್ರವಾರ

ಪ್ರಜಾವಾಣಿ ವಿಶೇಷ
Published 4 ಜುಲೈ 2024, 19:30 IST
Last Updated 4 ಜುಲೈ 2024, 19:30 IST
   

ಆರೋಗ್ಯ ಇಲಾಖೆಯ ಯೋಜನೆಗಳು ಕೃತಿಗಿಳಿಯಲು ಹಣದ ಅಡ್ಡಿ ಇಲ್ಲ ಎಂದು ಸಚಿವ ಘೋರ್ಪಡೆ

ಬೆಂಗಳೂರು, ಜುಲೈ 4– ಯೋಜನೆಯಲ್ಲಿ ಸೇರಿಸಲಾಗಿರುವ ಅಭಿವೃದ್ಧಿ ಯೋಜನೆಗಳು ಅದರಲ್ಲೂ ಅಗತ್ಯವಾದ ಸೇವೆ ಎಂದು ಪರಿಗಣಿಸುವ ಸಾರ್ವಜನಿಕ ಆರೋಗ್ಯ ಇಲಾಖೆಯ ವೆಚ್ಚದ ಮೇಲೆ ಯಾವ ಮಿತವ್ಯಯವನ್ನೂ ಅರ್ಥಖಾತೆ ವಿಧಿಸಿಲ್ಲವೆಂದು ಅರ್ಥ ಸಚಿವ ಶ್ರೀ ಎಂ.ವೈ. ಘೋರ್ಪಡೆ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

19.49 ಕೋಟಿ ರೂ. ಹಣ ಒದಗಿಸಿರುವ ಸಾರ್ವಜನಿಕ ಆರೋಗ್ಯ ಇಲಾಖೆ ಮೇಲೆ 30 ಲಕ್ಷ ರೂಪಾಯಿ ಮಾತ್ರ ಮಿತವ್ಯಯ ಸೂಚಿಸಲಾಗಿದೆಯೆಂದೂ ಈ ಮಿತವ್ಯಯವು ಸಂಬಳ ಹಾಗೂ ತುಟ್ಟಿಭತ್ಯಕ್ಕೆ ಸಂಬಂಧಿಸಿದುದೆಂದೂ ಸಚಿವರು ವಿವರಿಸಿದರು.

ADVERTISEMENT

ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಹುದ್ದೆಗಳನ್ನು ತುಂಬಲು ಬಜೆಟ್‌ನಲ್ಲಿ 1 ಕೋಟಿ ರೂಪಾಯಿ ಹಣವನ್ನು ಒದಗಿಸಲಾಗಿದೆಯೆಂದೂ ಈ ಹಣ ಖರ್ಚು ಮಾಡಿ ಹುದ್ದೆಗಳನ್ನು ತುಂಬಲು ಯಾವ ತಡೆಯೂ ಇಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು.

***

ಮನೆಯಿಂದಲೇ ಕಚೇರಿ ಕೆಲಸ

ನವದೆಹಲಿ, ಜುಲೈ 4– ಅಮೆರಿಕದ ಅನೇಕರು ಹಣ ಸಂಪಾದನೆಗಾಗಿ ‘ಕೆಲಸಕ್ಕೇ ಹೋಗದಿರಬಹುದಾದ’ ಕಾಲವೊಂದು ಬಹಳ ಬೇಗನೆ ಬರಬಹುದು.

ಅದರ ಬದಲು ಅವರು ತಮ್ಮ ತಮ್ಮ ಮನೆಗಳಲ್ಲೇ ಕುಳಿತು ಕಂಪ್ಯೂಟರ್‌ಗಳು ಮತ್ತು ಸಂಪರ್ಕ ಸಾಧನಗಳನ್ನು ತಮ್ಮ ತಮ್ಮ ಕಚೇರಿಗಳೊಡನೆ ಜೋಡಿಸಿಕೊಂಡು ಕೆಲಸ ಮಾಡಬಹುದು.

ಇಂಧನ ಬಳಕೆ ಮತ್ತು ವಾತಾವರಣ ಕಲುಷಿತಗೊಳಿಸುವಿಕೆಯನ್ನು ತಗ್ಗಿಸಲು ಶಕ್ತಿಮೂಲಕ್ಕೆ ಸಂಬಂಧಪಟ್ಟ ಅಮೆರಿಕದ ಫೆಡರಲ್ ಶಾಖೆ ಹಾಗೂ ಟೆಲಿಸಂಪರ್ಕ ಶಾಖೆ ಇಂತಹ ವ್ಯವಸ್ಥೆಗಳಿಗಾಗಿ ಕೆಲಸ ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.