ಬಾಕು ಸಮೇತ ಲೋಕಸಭೆಗೆ ಪ್ರವೇಶಿಸಿದ ಯುವಕನಿಗೆ ಶಿಕ್ಷೆ
ನವದೆಹಲಿ, ಜುಲೈ 26– ಬಾಕುವೊಂದನ್ನು ಮುಚ್ಚಿಟ್ಟುಕೊಂಡು ಪ್ರೇಕ್ಷಕರ ಗ್ಯಾಲರಿ ಪ್ರವೇಶಿಸಲು ಪ್ರಯತ್ನಿಸಿದ ಕಲ್ಕತ್ತೆಯ 24 ವರ್ಷದ ಯುವಕ ಬಿಪ್ಲ ಬಸು ಎಂಬುವವನಿಗೆ ಲೋಕಸಭೆ ಇಂದು ಒಂದು ತಿಂಗಳ ಕಠಿಣ ಶಿಕ್ಷೆ ವಿಧಿಸಿತು.
ಈ ಘಟನೆಯನ್ನು ಸಭೆಗೆ ವಿವರಿಸಿದ ಲೋಕಸಭಾಧ್ಯಕ್ಷ ಜಿ.ಎಸ್. ಧಿಲೋನ್ ಅವರು ‘ಇದು ತೀವ್ರ ಘಟನೆ’ ಎಂದರು. ಪ್ರೇಕ್ಷಕರ ಗ್ಯಾಲರಿ ದ್ವಾರದ ಬಳಿಯ ಭದ್ರತಾ ಸಿಬ್ಬಂದಿಯವನೊಬ್ಬನನ್ನು ಆ ಯುವಕ ಜೋರಾಗಿ ಒದ್ದಿದ್ದರಿಂದ, ಆತ (ಸಿಬ್ಬಂದಿಯವನು) ಹೆಚ್ಚು– ಕಡಿಮೆ ಪ್ರಜ್ಞಾಹೀನನಾದ.
ಈ ಯುವಕ ಹನ್ನೆರಡು ಅಂಗುಲದ ಬಾಕುವನ್ನು ಬಲಗಾಲಿನ ಕಾಲುಚೀಲದೊಳಗೆ ಹುದುಗಿಸಿಟ್ಟಿದ್ದ. ಸಮಾಜವಾದಿ ಪಕ್ಷದ ಸಮರಗುಹೆ ಅವರ ಮುಖಾಂತರ ಈತ ಪ್ರೇಕ್ಷಕರ ಗ್ಯಾಲರಿ ಪಾಸ್ ಪಡೆದಿದ್ದ.
ನಾಡಪಿಸ್ತೂಲು ಕಾರ್ಖಾನೆ ಪತ್ತೆ
ಬೆಳಗಾವಿ, ಜುಲೈ 26– ಬೈಲಹೊಂಗಲ ತಾಲ್ಲೂಕಿನ ಸೀಗಿಹಳ್ಳಿಯಲ್ಲಿ ನಾಡ ಪಿಸ್ತೂಲುಗಳನ್ನು ತಯಾರಿಸಿದ್ದು ‘ಕಾರ್ಖಾನೆ’ಯೊಂದನ್ನು ಜುಲೈ 21ರಂದು ಪತ್ತೆ ಮಾಡಿರುವ ಬೆಳಗಾವಿ ಪೊಲೀಸರು, ಈ ‘ಕಾರ್ಖಾನೆ’ಯಲ್ಲಿ ತಯಾರಿಸಿದ 12 ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದಾರೆಂದು ಉತ್ತರ ರೇಂಜಿನ ಡಿ.ಐ.ಜಿ.ಬಿ.ಎಸ್ ಗರುಡಾಚಾರ್ ಅವರು ನಿನ್ನೆ ಸಂಜೆ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.