ಸೆ. 23 1974 ಸೋಮವಾರ
ಹಣ ಹಾಕದೆ ಪಬ್ಲಿಕ್ ಕಾಲ್ ಬೂತ್‌ಗಳಿಂದ ಫೋನ್ ಮಾಡುವ ತಂತ್ರ
ಬೆಂಗಳೂರು, ಸೆ. 22– ಸಾರ್ವಜನಿಕ ಉಪಯೋಗಕ್ಕಾಗಿ ಇಟ್ಟಿರುವ ಪಬ್ಲಿಕ್ ಕಾಲ್ ಬೂತ್‌ಗಳಿಂದ ಟೆಲಿಫೋನ್ ಮಾಡಲು ಹತ್ತು ಪೈಸೆಗಳ ಮೂರು ನಾಣ್ಯಗಳನ್ನು ಹಾಕಬೇಕು. ಆದರೆ ಹಣಹಾಕದೆ ಟೆಲಿಫೋನ್ ಮಾಡುವ ತಂತ್ರಗಳನ್ನು ಅನೇಕರು ಪತ್ತೆ ಹಚ್ಚಿದ್ದಾರೆ. ಹೇರ್ ಪಿನ್, ಸವಕಲು ನಾಣ್ಯ, ನಿಕ್ಕಲ್ ಚೂರು, ಕಾಗದದ ಚೂರುಗಳು ಮೊದಲಾದ ಅನೇಕ ವಸ್ತುಗಳನ್ನು ಬೂತ್‌ಗಳಲ್ಲಿ ಕಂಡುಬರುವುದು ಸರ್ವೇ ಸಾಮಾನ್ಯ.
ಸಾರ್ವಜನಿಕರಿಗಾಗಿ ಇಟ್ಟಿರುವ ಟಿಲಿಫೋನ್‌ಗಳ ದುರುಪಯೋಗ ಮಿತಿಮೀರಿದೆ ಎಂದು ಇಂದು ವರದಿಗಾರರಿಗೆ ವಿವರಿಸಿದ ಕೇಂದ್ರ ಸಂಪರ್ಕ ಸಚಿವಶಾಖೆಯ ಕಾರ್ಯದರ್ಶಿ ಎನ್. ವಿ. ಶಣೈ ಅವರು ಬೂತ್‌ಗಳಲ್ಲಿ ಕಂಡು ಬರುವ ವಸ್ತುಗಳನ್ನು ಪ್ರದರ್ಶನ ಏರ್ಪಡಿಸುವುದೇ ಮೇಲು ಎಂದರು. ಕೆಲವರು ಯಾವುದೇ ವಸ್ತುಗಳನ್ನು ಹಾಕದೆ ಹಾಗೆಯೇ ಟಿಲಿಫೋನ್ ಬಳಸುವ ತಂತ್ರ ಅನುಸರಿಸುತ್ತಿರುವುದೂ ಗಮನಕ್ಕೆ ಬಂದಿದೆ ಎಂದು ಅವೆಉ ಹೇಳಿದರು.
ಸರಳ ರೀತಿಯಲ್ಲಿ ಸಂಜಯ್ ವಿವಾಹ
ನವದೆಹಲಿ, ಸೆ. 22– ಇಂದಿರಾ ಗಾಂಧಿಯವರು ತಮ್ಮ ಕಿರಿಯ ಮಗ ಸಂಜಯ ಗಾಂಧಿ ಅವರ ವಿವಾಹವನ್ನು ಸರಳ ರೀತಿಯಲ್ಲಿ ನಡೆಸಲು ಸೂಚಿಸಿರುವುದಾಗಿ ತಿಳಿದು ಬಂದಿದೆ.
ಈ ತಿಂಗಳ 29ರಂದು ಈ ವಿವಾಹ ನಡೆಯುವ ನಿರೀಕ್ಷೆಯಿದೆ.
ತಮ್ಮ ಮಗನ ಮದುವೆಗೆ ಸಹಾಯ ಮಾಡಲು ಮುಂದೆ ಬಂದ ಹಿತೈಷಿ ಮಿತ್ರರ ಸಹಾಯವನ್ನು ಮರ್ಯಾದೆಯಿಂದ ತಳ್ಳಿ ಹಾಕಿರುವ ಅವರು ಆಡಂಬರ ಅಬ್ಬರಗಳ ಅವಶ್ಯಕತೆ ಇಲ್ಲವೆಂದು ಹೇಳಿದ್ದಾರೆ.
ಸಂಜಯ ಗಾಂಧಿಯವರು ದೆಹಲಿಯ ಹುಡುಗಿ ಮನೇಕ ಆನಂದ್ ಅವರನ್ನು ವಿವಾಹವಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.