ADVERTISEMENT

50 ವರ್ಷಗಳ ಹಿಂದೆ: ಬೆಂಗಳೂರಿನ ಪ್ರಪ್ರಥಮ ಟೆಸ್ಟ್ ಪಂದ್ಯ ಇಂದು ಆರಂಭ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 18:50 IST
Last Updated 21 ನವೆಂಬರ್ 2024, 18:50 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಬೆಂಗಳೂರಿನ ಪ್ರಪ್ರಥಮ ಟೆಸ್ಟ್ ಪಂದ್ಯ ಇಂದು ಆರಂಭ

ಬೆಂಗಳೂರು, ನ. 21– ಬೆಂಗಳೂರಿನ ಬೃಹತ್ ಸಂಖ್ಯೆಯ ಕ್ರೀಡಾಭಿಮಾನಿಗಳ ದೀರ್ಘಕಾಲದ ಕನಸೊಂದು ಇಂದು ನನಸಾಗುತ್ತಿದೆ.

ರಾಷ್ಟ್ರಪತಿ ಫಕ್ರುದೀನ್ ಅಲಿ ಅಹ್ಮದ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ಪ್ರವಾಸಿ ವೆಸ್ಟ್ ಇಂಡೀಸ್‌ ಮತ್ತು ಭಾರತ ತಂಡಗಳ ಈ ಸರಣಿಯ ಪ್ರಥಮ ಟೆಸ್ಟ್ ಪಂದ್ಯವನ್ನು 50 ಸಹಸ್ರ ಕ್ರೀಡಾಭಿಮಾನಿಗಳ ಮುಂದೆ ಹಚ್ಚ ಹಸುರಿನ ಮೈದಾನ, ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಗಾರದಲ್ಲಿ ಉದ್ಘಾಟಿಸಲಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ನಡೆಯಲಿರುವ ಈ ಪ್ರಪ್ರಥಮ ಟೆಸ್ಟ್ ಪಂದ್ಯ, ಮತ್ತೊಮ್ಮೆ ವೆಸ್ಟ್ ಇಂಡೀಸ್‌ ಟೀಮಿನ ಬಿರುಸಿನ ಹೊಡೆತದ ಆಟಗಾರರು ಹಾಗೂ ಭಾರತದ ವಿಶ್ವಖ್ಯಾತ ಸ್ಪಿನ್ನರುಗಳು, ಶಕ್ತ ಬ್ಯಾಟ್ಸ್‌ಮನ್‌ಗಳ ನಡುವಣ ತೀಕ್ಷ್ಣ ಹೋರಾಟದ ಕಣವಾಗಲಿರುವುದು ಖಂಡಿತ.

ಮರವೆಯೋ ಅಲಕ್ಷ್ಯವೋ?

ನವದೆಹಲಿ, ನ. 21– ಗೃಹ ಸಚಿವ ಕೆ.
ಬ್ರಹ್ಮಾನಂದ ರೆಡ್ಡಿ ಅವರು ಎದ್ದು ನಿಂತು, ಇನ್ನೇನು ಮಾತನಾಡಬೇಕು ಎನ್ನುವಷ್ಟರಲ್ಲಿ ಅವರು ಉದ್ರಿಕ್ತರಾಗಿ, ಅಧಿಕಾರಿಗಳು ಕುಳಿತಿದ್ದ ಕಡೆಗೆ ಕೈಸನ್ನೆ ಮಾಡುತ್ತಿದ್ದ ಅಸಾಮಾನ್ಯ ದೃಶ್ಯ ಇಂದು ಲೋಕಸಭೆಯಲ್ಲಿ ಕಂಡುಬಂದಿತು. ಕೆಲ ಕ್ಷಣಗಳ ಕಾಲ ಕಲಾಪಗಳು ನಿಂತು ಹೋದವು. ವಿರೋಧ ಪಕ್ಷಗಳ ಸದಸ್ಯರು ಚುರುಕಿನಿಂದ ಗಮನಿಸುತ್ತಿದ್ದರು.

ಆಮದು ಲೈಸೆನ್ಸ್ ಹಗರಣದ ಬಗ್ಗೆ ಬುಧವಾರದ ಚರ್ಚೆಗಳ ಸಮಯದಲ್ಲಿ ಸರ್ಕಾರದ ವಿರುದ್ಧ ವಿರೋಧಿ ಸದಸ್ಯರು ಮಾಡಿದ ಆಪಾದನೆಗಳಿಗೆ ಉತ್ತರವೀಯಲು ರೆಡ್ಡಿ ಅವರು ಎದ್ದುನಿಂತಿದ್ದರು. ಆದರೆ ತಮ್ಮ ಬಳಿ ಅಗತ್ಯವಾದ ಕಾಗದಪತ್ರಗಳು ಇಲ್ಲದಿದ್ದು ದನ್ನು ಕಂಡು ಅವರ ಉತ್ಸಾಹ ಕುಗ್ಗಿತು.

ಗೃಹಖಾತೆ ಉಪಸಚಿವ ಎಫ್.ಎಚ್.ಮೊಹಸಿನ್‌ ಅವರು ಅಧಿಕಾರಿಗಳಿಂದ ಅತಿ ಶೀಘ್ರವಾಗಿ ಕಾಗದಪತ್ರಗಳನ್ನು ಸಂಗ್ರಹಿಸಿ ಕೈಕೈ ಬದಲಿಸಿ ಸಚಿವರಿಗೆ ತಲುಪಿಸಿದರು. ಆದರೆ ವಿರೋಧಿ ಸದಸ್ಯರ ಪ್ರತಿಭಟನೆಗೆ ಮುನ್ನವೇ ಈ ಕಾರ್ಯ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.