ADVERTISEMENT

50 ವರ್ಷಗಳ ಹಿಂದೆ: ರಾಜ್ಯಕ್ಕೆ ಐ.ಡಿ.ಎ.ನಿಂದ 3 ಕೋಟಿ ಡಾಲರ್ ನೆರವು

ಪ್ರಜಾವಾಣಿ ವಿಶೇಷ
Published 15 ಜೂನ್ 2024, 0:22 IST
Last Updated 15 ಜೂನ್ 2024, 0:22 IST
50 ವರ್ಷಗಳ ಹಿಂದೆ..
50 ವರ್ಷಗಳ ಹಿಂದೆ..   

ರಾಜ್ಯಕ್ಕೆ ಐ.ಡಿ.ಎ.ನಿಂದ 3 ಕೋಟಿ ಡಾಲರ್ ನೆರವು

ನವದೆಹಲಿ, ಜೂನ್ 14– ಕರ್ನಾಟಕದಲ್ಲಿ ಡೈರಿ ಅಭಿವೃದ್ಧಿ ಯೋಜನೆಗೆ ವಿಶ್ವಬ್ಯಾಂಕಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು 3 ಕೋಟಿ ಡಾಲರ್ ಸಾಲ ನೀಡಿದೆ.

ಈ ಯೋಜನೆಗೆ ತಗಲುವ ಒಟ್ಟು ವೆಚ್ಚ ಸುಮಾರು 48 ಕೋಟಿ (640 ಲಕ್ಷ ಡಾಲರುಗಳು) ರೂಪಾಯಿ. 136 ಲಕ್ಷ ಡಾಲರುಗಳ ವಿದೇಶಿ ವಿನಿಮಯದ ಬಿಡಿ ಭಾಗಗಳೂ ಸೇರಿ ಒಟ್ಟು ವೆಚ್ಚದಲ್ಲಿ
ಶೇ 47ರಷ್ಟನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಸಾಲದ ರೂಪದಲ್ಲಿ ಪೂರೈಕೆ ಮಾಡು ತ್ತಿದೆ. ಉಳಿದದ್ದನ್ನು ಕೇಂದ್ರ ಸರ್ಕಾರ, ಕರ್ನಾಟಕ, ಭಾರತದ ಕೃಷಿ ಹಣಕಾಸು ಕಾರ್ಪೊರೇಷನ್, ಈ ಯೋಜನೆಯಲ್ಲಿ ಭಾಗವಹಿಸುವ ಕೃಷಿಕರು ನೀಡುವರು.

ಈ ಯೋಜನೆ 1981ರ ಹೊತ್ತಿಗೆ ಪೂರ್ಣವಾಗಲಿದ್ದು, ಆ ಹೊತ್ತಿಗೆ ವಾರ್ಷಿಕ ಹಾಲು ಉತ್ಪಾದನೆ 10 ಲಕ್ಷ ಟನ್‌ಗೆ ಏರಿಕೆ ಆಗುವುದು. ಅಲ್ಲದೆ ಒಂದು ಲಕ್ಷ ಎಳೆಯ ಹಸುಗಳು ದೊರೆಯುವುವು.

ADVERTISEMENT

ಈ ಯೋಜನೆಯಿಂದ 4.50 ಲಕ್ಷ ಕೃಷಿ ಕುಟುಂಬಗಳಿಗೆ ಅಥವಾ ರಾಜ್ಯದ 25 ಲಕ್ಷ ಮಂದಿಗೆ ಲಾಭವಾಗುವುದು. ಈ ಜನರಲ್ಲಿ ಬಹುತೇಕ ಮಂದಿ ಎರಡು ಹೆಕ್ಟೇರ್‌ಗೂ ಕಡಿಮೆ ಜಮೀನು ಹೊಂದಿರುವವರು ಅಥವಾ ಭೂರಹಿತರು.

ಆಯುರ್ವೇದ ವೈದ್ಯರಿಗೆ ‘ಎಮರ್ಜೆನ್ಸಿ ಚಿಕಿತ್ಸೆ’ ತರಪೇತಿಗೆ ವಿರೋಧ

ಬೆಂಗಳೂರು, ಜೂನ್ 14– ಶುದ್ಧ ಆಯುರ್ವೇದ ವಿದ್ಯಾರ್ಥಿಗಳಿಗೆ ಅಲೋಪಥಿಕ್ ಆಸ್ಪತ್ರೆಗಳಲ್ಲಿ ‘ಎಮರ್ಜೆನ್ಸಿ’ ಚಿಕಿತ್ಸಾ ತರಪೇತು ನೀಡುವುದನ್ನು ಭಾರತೀಯ ವೈದ್ಯರ ಸಂಘದ ಕರ್ನಾಟಕ ಶಾಖೆ ವಿರೋಧಿಸಿದೆ.

ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಎಂ.ಎ. ನರಸಿಂಹಾಚಾರ್ ಅವರು ಹೇಳಿಕೆಯೊಂದನ್ನು ನೀಡಿ, ‘ಆಯುರ್ವೇದ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ. ಚರಕ ಮತ್ತು ಸುಶ್ರುತರ ಸಮಯದಲ್ಲೂ ಎಮರ್ಜೆನ್ಸಿ ಚಿಕಿತ್ಸೆ ಜಾರಿಯಲ್ಲಿತ್ತು. ಆಯುರ್ವೇದ ಮತ್ತು ಅಲೋಪಥಿಯ ಮಿಶ್ರಣದಿಂದ ರೋಗಿಗೆ ಅಪಾಯವಾಗಬಹುದು’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.