ಬೆಂಗಳೂರು, ನ. 24– ಕೇಂದ್ರ ಸಾಹಿತ್ಯ ಅಕಾಡೆಮಿಯು ರಾಜಕೀಯ ಪ್ರಭಾವದಿಂದ ಮುಕ್ತವಾಗಿರಲೆಂದು ಹಿರಿಯ ಸಾಹಿತಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂದು ಇಲ್ಲಿ ಆಶಿಸಿದರು.
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಅಕಾಡೆಮಿಯ ‘ಫೆಲೋ’ ಗೌರವ ಸ್ವೀಕರಿಸಿ ಅದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ ಅವರು ಅಕಾಡೆಮಿ ಸೂತ್ರಗಳನ್ನು ಹಿಡಿದಿರುವವರಿಗೆ ಇತರ ಮೂರು ಜವಾಬ್ದಾರಿಗಳನ್ನು ಹೊರೆಸಿದರು.
ಅಕಾಡೆಮಿಯು ಶ್ರೇಷ್ಠ ಗ್ರಂಥಗಳಿಗೆ ನೀಡುವ ಐದು ಸಾವಿರ ರೂ.ಗಳ ಬಹುಮಾನವನ್ನು 25 ಸಾವಿರ ರೂ.ಗಳಿಗೆ ಏರಿಸಲು ಸರ್ಕಾರದೊಡನೆ ಪ್ರಯತ್ನಿಸುವಂತೆ ಆಗ್ರಹಪಡಿಸಿದರು.
ಭಾರತದ ವಿವಿಧ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಇಂಗ್ಲಿಷ್ ಅಥವಾ ಹಿಂದಿಗೆ ಭಾಷಾಂತರ ಮಾಡಿಸಿ ಭಾರತೀಯ ಸಾಹಿತ್ಯ ಸೃಷ್ಟಿಗೆ ಕರೆಯಿತ್ತರು.
‘ಎಲ್ಲಾ ಒಳ್ಳೆಯ ಕೃತಿಗಳು ಎಲ್ಲಾ ಭಾಷೆಗಳಲ್ಲೂ ಪ್ರಕಟವಾಗಬೇಕು’.
ರಾಷ್ಟ್ರಮಟ್ಟದ ವಿಮರ್ಶೆ ಅಭಾವವಿದೆಯೆಂದು ಡಾ. ಮಾಸ್ತಿ ಅವರು ಹೇಳಿ ‘ಆ ಕೊರತೆ ನಿವಾರಣೆಯಾಗಲಿ’ ಎಂದು ಆಶಿಸಿದರು.
ನವದೆಹಲಿ, ನ. 24– ಉದ್ಯೋಗಕ್ಕೆ ವಿಶ್ವವಿದ್ಯಾನಿಲಯ ಪದವಿ ಅನಗತ್ಯವೆಂಬ ಹಾಗೂ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣಗೊಳಿಸುವ ಪದ್ದತಿಯನ್ನು ತ್ಯಜಿಸಿ ‘ಗ್ರೇಡ್ ಷೀಟು’ ಪದ್ದತಿಯನ್ನು ಜಾರಿಗೆ ತರಬೇಕೆಂಬ ಶಿಕ್ಷಣ ಸುಧಾರಣೆಯ ಇತ್ತೀಚಿನ ಕ್ರಾಂತಿಕಾರಕ ಶಿಫಾರಸುಗಳನ್ನು ರಾಷ್ಟ್ರದ ಖ್ಯಾತ ಶಿಕ್ಷಣವೇತ್ತರು ಸ್ವಾಗತಿಸಿದ್ದಾರೆ. ಈ ಸಲಹೆಗಳನ್ನು ಶಿಕ್ಷಣ ಕುರಿತ ಕೇಂದ್ರ ಸಲಹಾ ಮಂಡಳಿ ಮಾಡಿತ್ತು. ಈ ಬಗ್ಗೆ ಯು.ಎನ್.ಐ. ನಡೆಸಿದ ಸಮೀಕ್ಷೆಯೊಂದು ಈ ಅಂಶವನ್ನು ಸ್ಪಷ್ಟಪಡಿಸಿದೆ.
ಯುನೆಸ್ಕೋದ ಮಾಜಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ. ಮಾಲ್ಕೋಮ್ ಆದಿಶೇಷಯ್ಯನವರು ಹೇಳಿರುವ ಮಾತು ಅನೇಕ ಶಿಕ್ಷಣ ತಜ್ಞರು ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತದೆ. ಅವರು ಹೀಗೆನ್ನುತ್ತಾರೆ: ಉದ್ಯೋಗಕ್ಕೆ ಪದವಿ ಅನಗತ್ಯವಾದರೆ, ವಿಶ್ವವಿದ್ಯಾನಿಲಯಗಳಿಗೆ ಮತ್ತು ಕಾಲೇಜುಗಳಿಗೆ ಈಗಿರುವ ಹುಚ್ಚಾಬಟ್ಟೆ ನೂಕುನುಗ್ಗಲು ಬಹಳ ಕಡಿಮೆಯಾಗುತ್ತದೆ. ಉನ್ನತ ಶಿಕ್ಷಣದ ಶೈಕ್ಷಣಿಕ ಮಟ್ಟ ಹೆಚ್ಚುತ್ತದೆ.
ಅಲ್ಲದೆ ಐ.ಎ.ಎಸ್. ಮತ್ತು ಐ.ಎಫ್.ಎ ಮುಂತಾದ ಅಖಿಲ ಭಾರತ ಸೇವಾ ವರ್ಗಗಳ ಆಯ್ಕೆಗೂ ಈಗಿರುವ ಪದವಿ ಮಿತಿಯ ಬದಲು ಹೈಸ್ಕೂಲು ಶಿಕ್ಷಣದ ಮಿತಿಯನ್ನು ನೇಮಿಸಿದರೆ ಸಾಕು ಆನಂತರ ಆ ವರ್ಗಗಳಲ್ಲಿ ಹೇಗಿದ್ದರೂ ಉದ್ಯೋಗಕ್ಕೆ ಅವಶ್ಯಕವಾದ ಉನ್ನತ ಶಿಕ್ಷಣ ಮತ್ತು ತರಬೇತಿಯನ್ನು ಅವರು ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.