ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಪಾಕ್‌ನಲ್ಲೇ 28ರಂದು ಅಧಿಕಾರಿ ಮಟ್ಟದ ಸಭೆ ನಡೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
   

ಪಾಕ್‌ನಲ್ಲೇ 28ರಂದು ಅಧಿಕಾರಿ ಮಟ್ಟದ ಸಭೆ ನಡೆಸಲು ಸಲಹೆ

ನವದೆಹಲಿ, ಜು.6– ಭಾರತ, ಬಾಂಗ್ಲಾದೇಶ ಸಂಯುಕ್ತ ಘೋಷಣೆಯನ್ನು ಆಧರಿಸಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಅಧಿಕಾರಿ ಮಟ್ಟದ ಚರ್ಚೆ ನಡೆಸುವುದಕ್ಕಾಗಿ ಪಾಕಿಸ್ತಾನವು ಜುಲೈ 28ನೇ ತಾರೀಕನ್ನು ಸಲಹೆ ಮಾಡಿದೆ.

ಭಾರತ ವಿದೇಶಾಂಗ ಸಚಿವ ಸ್ವರಣ್‌ ಸಿಂಗ್‌ ಅವರು ಜುಲೈ 3ರಂದು ಬರೆದ ಪತ್ರಕ್ಕೆ ಪಾಕಿಸ್ತಾನ ಕಳುಹಿಸಿದ ಉತ್ತರವು ನೇರ ಟೆಲಿಫೋನ್‌ ಸಂಪರ್ಕದಲ್ಲಿ (ಹಾಟ್‌ಲೈನ್‌) ಗುರುವಾರ ಸಂಜೆ ದೆಹಲಿ ಕೈಸೇರಿತು.

ADVERTISEMENT

ಕಳೆದ ಬಾರಿ ಸಭೆ ಭಾರತದಲ್ಲಿ ನಡೆದ ಕಾರಣ ಈ ಬಾರಿಯ ಸಮಾವೇಶ ಪಾಕಿಸ್ತಾನದಲ್ಲೇ ನಡೆಯಬೇಕೆಂದು ಪಾಕಿಸ್ತಾನ ಪತ್ರದಲ್ಲಿ ಒತ್ತಾಯಪಡಿಸಿದೆ ಎಂದು ಇಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಪತ್ರವನ್ನು ಈಗ ಪರಿಶೀಲಿಸುತ್ತಿರುವ ಭಾರತ ಸರ್ಕಾರ ಶೀಘ್ರವೇ ನಿರ್ಧಾರಕ್ಕೆ ಬರುತ್ತದೆ.

ಕಾಳಿನದಿ– ದೂದ್‌ಸಾಗರ ಯೋಜನೆ ಸೇರಿಸಲು ರಾಜ್ಯದ ಜತೆ ಗೋವಾ ಸಂಧಾನ

ಮದ್ರಾಸ್‌, ಜುಲೈ 6– ದೂದ್‌ಸಾಗರದಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಲಿರುವ ಮೊದಲ ವಿದ್ಯುತ್‌ ಯೋಜನೆಯನ್ನು ಮೈಸೂರಿನೊಡನೆ ಕೂಡಿಕೊಂಡು ನಿರ್ವಹಿಸುವುದಕ್ಕಾಗಿ ಆ ರಾಜ್ಯದೊಡನೆ ಸಂಧಾನ ನಡೆಸುತ್ತಿರುವುದಾಗಿ ಗೋವಾ ನೀರಾವರಿ ಮತ್ತು ವಿದ್ಯುತ್ ಸಚಿವ ಉಸ್‌ಗಾಂವ್‌ಕರ್‌ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಈ ಸಂಬಂಧ ತಾವು ಮೈಸೂರು ಲೋಕೋಪಯೋಗಿ ಸಚಿವ ಎಚ್‌.ಎಂ. ಚನ್ನಬಸಪ್ಪ ಹಾಗೂ ಕೇಂದ್ರ ನೀರಾವರಿ ಮತ್ತು ವಿದ್ಯುತ್‌ ಸಚಿವ ಡಾ. ಕೆ.ಎಲ್‌. ರಾವ್‌ ಅವರೊಡನೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.

ಮೈಸೂರಿನ ಕಾಳಿನದಿ ಯೋಜನೆಗೆ ಏಳು ಕಿಲೋಮೀಟರ್‌ ಮಾತ್ರ ದೂರದಲ್ಲಿರುವ 30 ಮೆಗಾವಾಟ್‌ಗಳ ದೂದ್‌ಸಾಗರ ಯೋಜನೆಯನ್ನು ಸೇರಿಸಲು ಸಾಧ್ಯವೆಂದೂ ಇದರಿಂದ ವೆಚ್ಚ ಕಡಿಮೆಯಾಗುವುದೆಂದೂ ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.