ADVERTISEMENT

50 ವರ್ಷಗಳ ಹಿಂದೆ | ಪಟ್ಟಭದ್ರರಿಂದ ಹರಿಜನ, ಗಿರಿಜನರ ಪ್ರಗತಿಗೆ ಅಡ್ಡಿ: ರಾಚಯ್ಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
50 ವರ್ಷಗಳ ಹಿಂದೆ..
50 ವರ್ಷಗಳ ಹಿಂದೆ..   

ಬೆಂಗಳೂರು, ಜೂನ್‌ 17– ಸಂವಿಧಾನದಲ್ಲಿ ಹರಿಜನ– ಗಿರಿಜನರಿಗಾಗಿ ಕಲ್ಪಿಸಲಾಗಿರುವ ಹಕ್ಕು ಬಾಧ್ಯತೆಗಳನ್ನು ಜಾರಿಗೆ ತರಲು ಪ್ರಧಾನಿ ಹಾಗೂ ಮುಖ್ಯಮಂತ್ರಿಯವರು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತಿದ್ದರೆ, ಆ ಪ್ರಯತ್ನಗಳನ್ನು ವಿಫಲಗೊಳಿಸಲು ಆಡಳಿತ ವರ್ಗದ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀ ಎನ್‌.ರಾಚಯ್ಯ ಅವರು ಇಂದು ಇಲ್ಲಿ ಆಕ್ಷೇಪಿಸಿದರು.

ವಿದ್ಯಾವಂತ ಹೆಣ್ಣುಮಕ್ಕಳು ಗ್ರಾಮಾಂತರ ಹಾಗೂ ಕೊಳಚೆ ಪ್ರದೇಶಗಳಿಗೆ ಭೇಟಿ ಇತ್ತು, ಅಲ್ಲಿನ ಹೆಣ್ಣುಮಕ್ಕಳಿಗೆ ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ತಿಳಿವಳಿಕೆ ನೀಡಬೇಕೆಂದು ಅವರು ಕರೆ ನೀಡಿದರು.

ವರ ನಾಪತ್ತೆ: ವಿವಾಹ ಸುಗಮ

ADVERTISEMENT

ಹಾಸನ, ಜೂನ್‌ 17– ಇಲ್ಲಿನ ಕಲ್ಯಾಣ ಮಂಟಪವೊಂದರಲ್ಲಿ ನಡೆಸಲು ನಿಶ್ಚಯಿಸಲಾಗಿದ್ದ ಮದುವೆಯೊಂದು ಮುಹೂರ್ತದ ಸಮಯದಲ್ಲಿ ವರ ನಾಪತ್ತೆಯಾದರೂ ಸುಗಮವಾಗಿ ನಡೆಯಿತು.

ಇಲ್ಲಿನ ಪ್ರಮುಖ ವ್ಯಾಪಾರಿಯೊಬ್ಬರ ಪುತ್ರಿ ಮತ್ತು ಹಿರಿಯೂರಿನ ವರ್ತಕರೊಬ್ಬರ ಪುತ್ರನ ಮದುವೆ ನಿನ್ನೆ ನಡೆಯಬೇಕಾಗಿತ್ತು. ಆದರೆ ಬೆಳಿಗ್ಗೆ 10.30ರ ಸಮಯದಲ್ಲಿ ಯಾರೋ ಅಪರಿಚಿತರು ಬಂದು ವರನನ್ನು ಹೊರಕ್ಕೆ ಕರೆದುಕೊಂಡು ಹೋಗಿ, ಯಾರಿಗೂ ತಿಳಿಸದೆ ಕಾರಿನಲ್ಲಿ ಕೂಡಿಸಿಕೊಂಡು ಹೊರಟುಹೋದರು. ಇದರಿಂದ ಕಲ್ಯಾಣ ಮಂಟಪದಲ್ಲಿ ಗೊಂದಲ ಪ್ರಾರಂಭವಾಯಿತು.

ವರನ ತಂದೆಯಾಗಲಿ, ಅವರ ಕಡೆಯ ಇತರರಾಗಲಿ ಸತ್ಯ ಸಂಗತಿಯನ್ನು ತಿಳಿಸಲು ಮುಂದೆ ಬರಲಿಲ್ಲ. ಪರಿಸ್ಥಿತಿ ಕೈಮೀರಬಹುದೆಂದು ಭಾವಿಸಿದ ವೈಶ್ಯ ನಾಯಕರು ಮತ್ತು ಯುವಜನರು ವಧುವಿನ ತಂದೆಯ ಭಾವನ ಮನವೊಲಿಸಿ, ಅವರ ಪುತ್ರ ವರನಾಗಲು ಸಮ್ಮತಿ ದೊರಕಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.