ಮದರಾಸ್, ಅ. 8– ರಾಯಪುರಂ ರೈಲು ನಿಲ್ದಾಣದಲ್ಲಿ ಎರಡು ವಾರಗಳಿಂದ ಬಿದ್ದಿರುವ ಸುಮಾರು 3 ಕೋಟಿ ರೂಪಾಯಿ ಬೆಲೆಯ ದ್ವಿದಳ ಧಾನ್ಯ ಮತ್ತಿತರ ಆಹಾರ ಧಾನ್ಯ ಸಾಗಿಸಿಕೊಂಡು ಹೋಗಲು ದಕ್ಷಿಣ ರೈಲ್ವೆ ಇಲಾಖೆಯು ವರ್ತಕರಿಗೆ ಮೂರು ವಾರ ಕಾಲಾವಕಾಶ ನೀಡಿದೆ.
ಗೂಡ್ಸ್‌ಷೆಡ್‌ಗಳಲ್ಲಿ ಬಿಟ್ಟಿರುವ ಈ ಧಾನ್ಯಗಳನ್ನು ಸಗಟು ವರ್ತಕರು ತೆಗೆದುಕೊಂಡು ಹೋಗದಿದ್ದರೆ ಮೂರು ವಾರಗಳ ನಂತರ ಅವನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದೂ ಇಲಾಖೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆ: ಅಧಿಕೃತ ವಲಯಗಳಲ್ಲಿ ಮೌನ
ಬೆಂಗಳೂರು, ಅ. 8– ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಿಗದಿಯಾಗಿರುವಂತೆ ಕೇವಲ ಐದೇ ದಿನಗಳಿದ್ದರೂ ಪಕ್ಷದ ವಲಯಗಳಲ್ಲಿ ಯಾವುದೇ ಹೆಚ್ಚಿನ ರೀತಿಯ ರಾಜಕೀಯ ಚಟುವಟಿಕೆಗಳು ಕಂಡುಬಂದಿಲ್ಲ. ಆರ್. ದಯಾನಂದ ಸಾಗರ್ ಅವರ ಬೆಂಬಲಿಗರಲ್ಲಿ ಕೆಲವರು ನೀಡಿರುವ ಹೇಳಿಕೆ ಹಾಗೂ ನಡೆಸಿದ ಸಭೆ ಬಿಟ್ಟರೆ ಪಕ್ಷದ ಅಧಿಕೃತ ವಲಯಗಳಲ್ಲಿ ಮೌನ ವ್ಯಾಪಿಸಿದೆ.
ಪಕ್ಷದ ವಲಯಗಳಲ್ಲೇನೋ ಕೆಲವಾರು ಹೆಸರುಗಳು ಕೇಳಿಬಂದರೂ ಅಧಿಕೃತ ಮಟ್ಟದಲ್ಲಿ ಏನೊಂದೂ ವ್ಯಕ್ತಪಟ್ಟಿಲ್ಲ. ಈವರೆಗೆ ಕೇಳಿಬಂದಿರುವ ಹೆಸರುಗಳೆಂದರೆ ಕೊಲ್ಲೂರು ಮಲ್ಲಪ್ಪ, ತುಳಸಿದಾಸಪ್ಪ, ಆಹಾರ ಸಚಿವ ಕೆ.ಎಚ್. ಪಾಟೀಲ್ ಹಾಗೂ ಖಾದಿ ಮಂಡಲಿ ಅಧ್ಯಕ್ಷ ಎಸ್.ವಿ. ಮಂಜುನಾಥ್.
ಅವರಲ್ಲಿ ಎಐಸಿಸಿ ಒಲವು ಯಾರತ್ತ ಎಂದು ತಿಳಿಯುವುದು ಕಷ್ಟ. ಏನೇ ಆದರೂ ಚುನಾವಣೆ ನಡೆದರೆ ಅದು ಸರ್ವಾನುಮತದಿಂದ ಸಾಧ್ಯವಾಗದು ಎನ್ನುವುದು ಸುಸ್ಪಷ್ಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.