ADVERTISEMENT

50 ವರ್ಷದ ಹಿಂದೆ | ‘ಸುಗ್ರೀವಾಜ್ಞೆ’ ಮಂಡನೆ ತಡೆಗೆ ವಿರೋಧ ಪಕ್ಷದ ವಿಫಲ ಯತ್ನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 0:18 IST
Last Updated 12 ನವೆಂಬರ್ 2024, 0:18 IST
   
‘ಸುಗ್ರೀವಾಜ್ಞೆ’ ಮಂಡನೆ ತಡೆಗೆ ವಿರೋಧ ಪಕ್ಷದ ವಿಫಲ ಯತ್ನ

ನವದೆಹಲಿ, ನ. 11– ಚುನಾವಣೆ ವೆಚ್ಚ ಕುರಿತ ಸುಗ್ರೀವಾಜ್ಞೆಯ ಪ್ರತಿಯೊಂದನ್ನು ಸರ್ಕಾರವು ರಾಜ್ಯಸಭೆಯಲ್ಲಿ ಮಂಡಿಸುವುದನ್ನು ತಡೆಯಲು ವಿರೋಧ ಪಕ್ಷದ ಸದಸ್ಯರು ಇಂದು ವಿಫಲ ಯತ್ನ ನಡೆಸಿದರು.

ಈ ಸುಗ್ರೀವಾಜ್ಞೆಯು ‘ಪ್ರಜಾಪ್ರಭುತ್ವ ವಿರೋಧಿ, ದುರುದ್ದೇಶದಿಂದ ಕೂಡಿದ್ದು ಮತ್ತು ನ್ಯಾಯಾಂಗ ನಿಂದನೆ ಮಾಡಿದಂತೆ’ ಎಂದು ಬಣ್ಣಿಸಿದ ಜನಸಂಘದ
ಎಲ್‌.ಕೆ. ಅಡ್ವಾಣಿ ಅವರು ‘ಭಾರತದ ಪ್ರಜಾಪ್ರಭುತ್ವದ ಮೇಲೆ ಮಸಿ’ಯಂತಿರುವ ಈ ಸುಗ್ರೀವಾಜ್ಞೆಯನ್ನು ವಾಪಸು ಪಡೆಯುವಂತೆ ಒತ್ತಾಯಪಡಿಸಿದರು.

ಮೂಲತಃ ಸುಗ್ರೀವಾಜ್ಞೆಯೇ ಒಳ್ಳೆಯದಲ್ಲ. ಅದರಲ್ಲೂ ಇಂತಹ ವಿನಾಶಕಾರಿಯಾದ ಸುಗ್ರೀವಾಜ್ಞೆಯನ್ನು ಯಾರೂ ಬೆಂಬಲಿಸಬಾರದು ಎಂದರು.

ADVERTISEMENT
ಭಕ್ತಿಭಾವಗಳ ಸಂಗಮದಲ್ಲಿ ಶಿಷ್ಯ ಸ್ವೀಕಾರ

ಶೃಂಗೇರಿ, ನ. 11– ನಿಸರ್ಗ ಸೌಂದರ್ಯಮಯ ವಾತಾವರಣದಲ್ಲಿ ಮೇಲಿಂದ ಮೇಲೆ ಭಕ್ತಿ ಭಾವಗಳ ಅಲೆ, ನಡುನೀರಿನಲ್ಲಿ ನಿಂತಿದ್ದ ಇಪ್ಪತ್ತಮೂರು ವರ್ಷ ವಯಸ್ಸಿನ ಬ್ರಹ್ಮಚಾರಿ ಸೀತಾರಾಮಾಂಜನೇಯಲು ಅವರು ಜುಟ್ಟು ಕಿತ್ತು, ಜನಿವಾರ ತೆಗೆದು ಪವಿತ್ರ ತುಂಗೆಗೆ ಅರ್ಪಣೆ. ಕೌಪೀನ ವಿಸರ್ಜನೆ, ನೀರಿನಲ್ಲೇ ಮುಂದಿನ ಹೆಜ್ಜೆ.

ದಡದಲ್ಲಿ ಸ್ವೀಕರಿಸಲು ನಿಂತಿದ್ದ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ಶಿಷ್ಯನನ್ನು ಕರೆದರು. ಸರ್ವಸಂಗ ಪರಿತ್ಯಾಗ ಮಾಡಿ ಹೊರಟಿದ್ದ ಸನ್ಯಾಸಿ ನಿರ್ವಾಣದಲ್ಲಿ ಮೇಲಕ್ಕೆ ಬಂದರು.

ನೂತನ ಸನ್ಯಾಸಿಗೆ ಜಗದ್ಗುರುಗಳಿಂದ ‘ಶ್ರೀ ಭಾರತೀತೀರ್ಥ’ ನಾಮಕರಣ. ಶ್ರೀ ಶಂಕರ ಭಗವತ್ಪಾದರ ನಾಲ್ಕು ಪೀಠಗಳಲ್ಲಿ ಒಂದಾದ ಪ್ರಸಿದ್ಧ– ಪವಿತ್ರ ಶೃಂಗೇರಿ ಮಠಾಧೀಶ ಅಭಿನವ ವಿದ್ಯಾತೀರ್ಥ ಸ್ವಾಮಿಗಳಿಂದ ಶಿಷ್ಯ ಸ್ವೀಕಾರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.